ಎಂಟಿಬಿ ಯಾವುದೇ ಪಕ್ಷದಿಂದ ನಿಂತರೂ ಆಯ್ಕೆಯಾಗಬೇಕು : ಬಿಎಸ್‌ವೈ
ರಾಜೀನಾಮೆ ನೀಡಿ ಅನರ್ಹರಾಗಿರುವ ಎಂಟಿಬಿ ನಾಗರಾಜ್ ಯಾವ ಪಕ್ಷದಿಂದ ಸ್ಪರ್ಧೆ ಮಾಡಿದರೂ ಸಹೆ ಗೆಲ್ಲಬೇಕು ಹೀಗೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸೂಲಿಬೆಲೆ [ನ.05] : ಎಂಟಿಬಿ ನಾಗರಾಜ್ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು ಇಂಥ ವ್ಯಕ್ತಿಗಳು ಸಿಗುವುದು ಅಪರೂಪ. 100 ಕೋಟಿ ರು. ವೆಚ್ಚದಲ್ಲಿ 30 ಕೆರೆಗಳನ್ನು ತುಂಬಿಸುವ ಯೋಜನೆ ಕಾಂತ್ರಿಕಾರಿ ಕೆಲಸವಾಗಿದೆ. ಹಿಂದೆ ಆಡಳಿತ ನಡೆಸಿದವರಿಗೆ ನಾನು ಕೇಳ್ತೇನೆ, ಎಂಟಿಬಿ ನಾಗರಾಜ್ ಒಳ್ಳೆಯ ಸಚಿವರಾಗಿದ್ದಾಗಲೂ ಕೂಡ, ಅವರು ಕೇಳಿಕೊಂಡ ಕೆರೆ ತುಂಬಿಸುವ ಕೆಲಸಗಳನ್ನು ಏಕೆ ಮಾಡಿಕೊಡಲಿಲ್ಲ. ನಿಮ್ಮ ಯೋಗ್ಯತೆಗೆ(ಸಮ್ಮಿಶ್ರ ಸರ್ಕಾರ) ಅವರು ಕೇಳಿದ ಕೆಲಸಗಳನ್ನು ನೀವು ಮಾಡಿಕೊಟ್ಟಿದ್ದಿದ್ದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದರೇನು? ರಾಜೀನಾಮೆ ಕೊಡೊದಕ್ಕೆ ಕಾರಣ ಯಾರು ಎಂದು ಯೋಚನೆ ಮಾಡಬೇಕು.
ಅವರು ಯಾವುದೇ ಪಕ್ಷದಿಂದ ಬೇಕಾದ್ರುನಿಂತ್ಕೊಳ್ಳಿ. ನಾನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತ ಹೇಳ್ತಾಯಿಲ್ಲ. ಬೇಕಾದ್ರೆ ಸ್ವತಂತ್ರ ಅಭ್ಯರ್ಥಿಯಾಗಿ ಬೇಕಾದ್ರೂ ನಿಂತ್ಕೊಳ್ಳಲಿ. ಆದ್ರೆ ಈ ಭಾಗದಲ್ಲಿ ಇಂಥ ಪ್ರಾಮಾಣಿಕ ವ್ಯಕ್ತಿಯೊಬ್ಬರು ಆಯ್ಕೆಯಾಗಿ ಬರಬೇಕು. ಎಂಟಿಬಿ ಕೇಳಿರುವ ಎಲ್ಲ ಕೆಲಸಗಳ ಕಡತಗಳನ್ನು ಸಿದ್ಧಪಡಿಸಿ ಕೂಡಲೇ ತರುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಹೊಸಕೋಟೆ ಹಳೇ ಬಸ್ ನಿಲ್ದಾಣ ಬಳಿ ಸೋಮವಾರ ಹಮ್ಮಿಕೊಂಡಿದ್ದ ಅನುಗೊಂಡಹಳ್ಳಿ, ಜಡಿಗೇನಹಳ್ಳಿ ಹೋಬಳಿಗಳ 30 ಕೆರೆಗಳಿಗೆ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಶಂಕುಸ್ಥಾಪನೆ ನಡೆಸಿ ಮಾತನಾಡಿದರು. ಹೊಸಕೋಟೆ ಭಾಗದ ಅಭಿವೃದ್ಧಿಗೆ ಹಿಂದಿನ ಸರ್ಕಾರ ಸ್ಪಂದಿಸಿಲ್ಲ ಎಂಬ ಕಾರಣ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬಂದಿದ್ದಾರೆ.
ಟೀಕೆ ಮಾಡುವರು ಏನು ಬೇಕಾದ್ರೂ ಟೀಕೆ ಮಾಡಿಕೊಳ್ಳಲಿ. ಸರಳ ಸಜ್ಜನಿಕೆ ಶ್ರೀಮಂತಿಕೆ ಇದ್ದರೂ, ಯಾವುದನ್ನು ಎಂಟಿಬಿ ತೋರಿಸಿಕೊಳ್ಳುತ್ತಿಲ್ಲ. ಎಂಟಿಬಿ ನಾಗರಾಜ್ ಸಲ್ಲಿಸಿರುವ ಬೇಡಿಕೆಗಳಲ್ಲಿ ಹೊಸಕೋಟೆಗೆ ಕಾವೇರಿ ನೀರು, ಮೆಟ್ರೋ, ಮಲ್ಲಸಂದ್ರದ ಬಳಿ ಬಿಡ್ಜ್, ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾತಿಗೆ ಅಗತ್ಯವಿರುವ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗುವುದು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎಂಟಿಬಿ ಹೇಳಿದ ಯಾವುದೇ ಕೆಲಸ ನಿಲ್ಲಕೂಡದು. ಹೊಸಕೋಟೆ ಮಾದರಿ ಕ್ಷೇತ್ರವಾಗಬೇಕು ಎಂಬ ಆಸೆಯಿದೆ. 30 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಶೀಘ್ರವಾಗಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ .50 ಕೋಟಿ ಹಣ ನೀಡಲಾಗಿದೆ. ಕಾವೇರಿ ನೀರು ಹಾಗೂ ಕುರುಬರಹಳ್ಳಿ ಬಳಿ ನಿರ್ಮಿಸಲು ಉದ್ದೇಶಿಸಿರುವ ವಸತಿ ಸೌಕರ‍್ಯ ಯೋಜನೆಗಳಿಗೆ ಅನುಮೋದನೆ ನೀಡಲಾಗುವುದು. ನಾಗರಾಜ್ ಅವರೇ ಇನ್ನು ಏನ್ ಕೆಲಸವಾಗಬೇಕು ಹೇಳಿ ಮಾಡಿಕೊಡುತ್ತೇನೆ. ನಮ್ಮ ಆದ್ಯತೆ ಅಂತರ್ಜಲ ವೃದ್ಧಿಸಲು ಹಲವು ಯೋಜನೆಗಳನ್ನು ಮಾಡುತ್ತಿದ್ದೇವೆ. ನೆರೆ ಹಾವಳಿಯಿದ್ದರೂ ಅಭಿವೃದ್ಧಿಗೆ ಹಣಕಾಸಿನ ಸಮಸ್ಯೆಯಾಗಿಲ್ಲ, ಕೇವಲ ಎಂಟಿಬಿ ಕ್ಷೇತ್ರ ಮಾತ್ರವಲ್ಲ, ರಾಜ್ಯದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಹಣದ ಕೊರತೆಯಿಲ್ಲ ಎಂದರು.
ಒಂದು ಸಾರಿ ಯಡಿಯೂರಪ್ಪ ಭರವಸೆ ಕೊಟ್ಟಮೇಲೆ ನೂರಕ್ಕೆ ನೂರಷ್ಟುಕೆಲಸ ಅಗುವರಿಗೂ ಬಿಡುವುದಿಲ್ಲ. ಸೂಲಿಬೆಲೆ,ನಂದಗುಡಿ ಭಾಗಕ್ಕೆ ಶೀಘ್ರ ಎತ್ತಿನಹೊಳೆ ಯೋಜನೆ ತರಲು ಕೇಳಿದ್ದಾರೆ. ಎಲ್ಲವನ್ನೂ ಮಾಡಿಕೊಡ್ತೀನಿ. ಇನ್ನೂ ಏನ್ ಬೇಕು ಕೇಳು ನಾಗರಾಜಣ್ಣ? ಎಂದ ಸಿಎಂ, ಎಂಟಿಬಿಯ ಎಲ್ಲ ಕೆಲಸಗಳಿಗೂ ಮಾಡಿಕೊಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್ ಮಾತನಾಡಿ, ಎಂಟಿಬಿ .100 ಕೋಟಿ ವೆಚ್ಚದಲ್ಲಿ ಕೆರೆಗಳನ್ನು ತುಂಬಿಸುವುದು ಸಣ್ಣ ಕೆಲಸವಲ್ಲ. 94 ಸಿಸಿಯಲ್ಲಿ ಅರ್ಜಿ ಹಾಕಿದವರಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ. ಪ್ರತಿಯೊಂದು ಹಳ್ಳಿಯಲ್ಲೂ ಸ್ಮಶಾನ ನೀಡಲು ಸೂಚನೆ ನೀಡಲಾಗಿದೆ. ಲ್ಯಾಂಡ್ ಗ್ರಾಂಟ್ ಯೋಜನೆಯಲ್ಲೂ ಭೂಮಿ ಮಂಜೂರು ಮಾಡಲಾಗುತ್ತಿದೆ. ಸರ್ಕಾರಿ ಯೋಜನೆಗಳಲ್ಲಿ ಬೋಗಸ್ ತಡೆಯಲು ಆಧಾರ್ ಲಿಂಕ್ ಮಾಡಲಾಗುತ್ತಿದೆ. 10-12 ಜಿಲ್ಲೆಯಲ್ಲಿ ಪ್ರವಾಹ ಬಂದಿದೆ. ಯಡಿಯೂರಪ್ಪ ಬಂದಾಗ ಪ್ರವಾಹ ಬರುತ್ತೆ. ಸಿದ್ದರಾಮಯ್ಯ ಬಂದಾಗ ಬರ ಬರುತ್ತೆ ಎಂಬ ಮಾತಿದೆ. ಪ್ರವಾಹದಲ್ಲಿ ನೊಂದವರಿಗೆ ಯಾವುದೇ ತೊಂದರೆಯಾಗದಂತೆ ಪರಿಹಾರ ನೀಡಲಾಗುತ್ತಿದೆ. ಮನೆ ಕಟ್ಟೋರಿಗೆ 5 ಲಕ್ಷ ಕೊಡುತ್ತಿದ್ದೇವೆ. ಈ ಹಿಂದೆ ಆಡಳಿತ ನಡೆಸಿದವರು ಮನೆ ಕಟ್ಟಿದ ಮೇಲೆ ಹಣ ಕೊಡೋರು. ನಾವು ಮೊದಲೇ ಕೊಟ್ಟಿದ್ದೀವಿ.
ಕೆಲವರಿಗೆ ಜ್ಞಾನದ ಕೊರತೆಯಿದ್ದು(ವಿಪಕ್ಷಕ್ಕೆ) ಅವರು ನಯಾಪೈಸೆ ಕೊಡುತ್ತಿಲ್ಲ ಎಂದು ಆರೋಪ ಮಾಡುತ್ತಾರೆ. ನೆರೆ ಸಂತ್ರಸ್ತರಿಗೆ ಸರ್ಕಾರ ಎಲ್ಲ ರೀತಿಯಲ್ಲೂ ಸ್ಪಂದಿಸುತ್ತಿದ್ದು, ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ ಎಂಬಂತೆ ವಿಪಕ್ಷಗಳು ಕಣ್ಣಿಗೆ ಸರ್ಕಾರದ ಕೆಲಸಗಳು ಕಾಣುತ್ತಿಲ್ಲ ಎಂದು ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ನೀರಾವರಿ ಸಚಿವ ಮಾಧುಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಅಂತರ್ಜಲ ವೃದ್ಧಿಸುವ ಕೆಲಸಗಳಿಗೆ ಸರ್ಕಾರ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಮುನ್ನಡಿಸುತ್ತಿದೆ. ರೈತರಿಗೆ ನೀರು ಬಹುಮುಖ್ಯವಾಗಿದ್ದು, ಈ ಭಾಗದ 30 ಕೆರೆಗಳನ್ನು ತುಂಬಿಸುವ ಯೋಜನೆ ರೈತಾಪಿ ವರ್ಗ ಪ್ರಗತಿ ಕಾಣಲಿದೆ. ಈ ಕಾರ್ಯ ಆದಷ್ಟುಬೇಗ ಮುಗಿಯಲು ಕೆಲಸ ಮಾಡಲಾಗುವುದು. ತಮಿಳುನಾಡಿಗೆ ಹರಿಯುವ ವ್ಯರ್ಥ ನೀರನ್ನು ಸಂಸ್ಕರಿಸಿ ಈ ಭಾಗಕ್ಕೆ ಮತ್ತಷ್ಟುನೀರನ್ನು ಪೂರೈಸುವ ಯೋಜನೆಯಿದ್ದು, ಸರ್ಕಾರ ರೈತರಪರವಾಗಿದೆ ಎಂದರು.