ರಾಜ್ಯದಲ್ಲಿ ಸೋಮವಾರ ೧೧ ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತುಮಕೂರಿನಲ್ಲಿ ಮೂವರು, ಧಾರವಾಡ ಮತ್ತು ನವಲಗುಂದದಲ್ಲಿ ತಲಾ ಮೂವರು, ಹಾಸನದಲ್ಲಿ ಇಬ್ಬರು, ರಾಯಚೂರಿನಲ್ಲಿ ಒಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮೃತರಲ್ಲಿ ಹೆಚ್ಚಿನವರು ಯುವಕರಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು (ಜು.8): ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಮುಂದುವರಿದಿದ್ದು, ಸೋಮವಾರ 11 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ತುಮಕೂರಿನಲ್ಲಿ ಹೃದಯಾಘಾತಕ್ಕೆ ಮೂವರು ಬಲಿಯಾಗಿದ್ದಾರೆ. ತುಮಕೂರಿನ ಹನುಮಂತಪುರದ ನಿವಾಸಿಗಳಾದ ಜಯಂತ್ (31) ಹಾಗೂ ಶ್ರೀಧರ್ (52) ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜಯಂತ್‌ಗೆ ಮನೆಯಲ್ಲಿ ಮಲಗಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಶ್ರೀಧರ್ ಟೀ ಕುಡಿದು ಮನೆಯಲ್ಲಿ ಕುಳಿತಿದ್ದಾಗ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಕೆ.ಗೊಲ್ಲಹಳ್ಳಿಯಲ್ಲಿ ತಮ್ಮಣ್ಣ (35) ಮೊಬೈಲ್ ನೋಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಶಾಂತವ್ವ ತೋಟಗೇರ (56) ಮಗಳನ್ನು ಗಂಡನ ಮನೆಯಿಂದ ಕರೆದುಕೊಂಡು ಬರಲು ಸಮೀಪದ ಹೆಬ್ಬಳ್ಳಿ ಗ್ರಾಮಕ್ಕೆ ಹೋದಾಗ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಹುಬ್ಬಳ್ಳಿ ಕೆಎಂಸಿಆರ್‌ಐ ಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮೆಣಸಮಕ್ಕಿ ಗ್ರಾಮದ ಲಕ್ಷ್ಮಣ (52) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಭಾನುವಾರ ಜಮೀನಿನಲ್ಲಿ ಕೆಲಸ ಮಾಡಿ ಮನೆಗೆ ಹಿಂದಿರುಗಿದ್ದ ಲಕ್ಷ್ಮಣನಿಗೆ ಮನೆಗೆ ಬಂದಾಗ ಎದೆನೋವು ಕಾಣಿಸಿಕೊಂಡಿದೆ. ಹಾಸನದ ಅಮೀರ್ ಮೊಹಲ್ಲಾ ನಿವಾಸಿ ಸಯ್ಯದ್ ಮುಹಿದ್ದ್ (52) ಮನೆಯಲ್ಲಿ ಕುಳಿತಿದ್ದಾಗ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯಲು ಆಟೋ ಹುಡುಕಿ ಬರುವಷ್ಟರಲ್ಲಿ ಪ್ರಾಣ ಹೋಗಿತ್ತು.
ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದ ಸುರೇಶ್ (52)ಗೆ ಬೆಳಗ್ಗೆ 5 ಗಂಟೆಗೆ ಎದೆನೋವು ಕಾಣಿಸಿಕೊಂಡಿತು. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ಸೋಮವಾರ ಒಂದೇ ದಿನ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಪಟ್ಟಣದ ನಾರಾಯಣ ರಾಯ್ಕರ (52), ಬಸಪ್ಪ ಸತ್ಯಪ್ಪ ಬಾಗಲಕೋಟಿ (78) ತಾಲೂಕಿನ ಬಸಾಪೂರ ಗ್ರಾಮದ ಅಣ್ಣಪೂರ್ಣಮ್ಮ ಯಲ್ಲಪ್ಪ ಚವಡಿ (56) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್ ನಿವಾಸಿ ಶರಣಬಸವ (30) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎದೆನೋವು ತಾಳಲಾರದೆ ಆಸ್ಪತ್ರೆಗೆ ತೆರಳುವಾಗ ಆ್ಯಂಬುಲೆನ್ಸ್‌ನಲ್ಲೇ ಕೊನೆಯುಸಿರೆಳೆದರು.
