ಚಿಕ್ಕೋಡಿ(ಅ.9): ಬರಪೀಡಿತ ಹಳ್ಳಿ ಭಾಗದ ಜನರ ಪಾಲಿಗೆ ವರದಾನವಾಗಬೇಕಿದ್ದ ರಾಯಬಾಗ ಉನ್ನತ ಮಟ್ಟದ(ಆರ್‌ಎಚ್‌ಎಲ್‌ಡಿ) ಕಾಲುವೆಗೆ ಸರಿಸುಮಾರು ಕಳೆದ ಎರಡು ದಶಕಗಳಿಂದ ನೀರೇ ಹರಿದಿಲ್ಲ!

ಚಿಕ್ಕೋಡಿ ತಾಲೂಕಿನ ಹತ್ತಾರು ಹಳ್ಳಿಯ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಮರ್ಪಕ ನೀರು ಹರಿಯದೇ ಕಾಲುವೆಯಲ್ಲಿ ಹೂಳು, ಮುಳ್ಳು ಕಂಟೆಗಳು ಬೆಳೆದು ನೀರು ಹರಿಯದ ಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಘಟಪ್ರಭಾದ ಹಿರಣ್ಯಕೇಶಿ ನದಿಯಿಂದ ಈ ಕಾಲುವೆಗೆ ನೀರು ಪೂರೈಕೆಯಾಗುತ್ತದೆ. ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ ರೈತರಿಗೆ ಅನುಕೂಲವಾಗಲು ಕಳೆದ 1973ರಲ್ಲಿ ಕಾಲುವೆ ಕೆಲಸ ಪ್ರಾರಂಭವಾಗಿ 1976ರಲ್ಲಿ ನೀರು ಹರಿದಿದ್ದು ಅಲ್ಲಿಂದ 2000 ರವರೆಗೆ ಚಿಕ್ಕೋಡಿ ತಾಲೂಕಿನ ಕೊನೆ ಹಳ್ಳಿಗಳಿಗೆ ನೀರು ಹರಿದಿದೆ. ನಂತರ ದಿನಗಳಿಂದ ಇಲ್ಲಿಯವರೆಗೆ ಒಂದು ಹನಿ ನೀರೂ ಹರಿದಿಲ್ಲ. ಕಾಲುವೆ ನಂಬಿ ಜೀವನ ನಡೆಸುತ್ತಿರುವ ರೈತರ ಸಂಕಷ್ಟಕ್ಕೆ ಮಾತ್ರ ಇನ್ನೂ ಮುಕ್ತಿ ಕಂಡಿಲ್ಲ.

ಮನವಿಗಿಲ್ಲ ಮನ್ನಣೆ:

ರಾಯಬಾಗ ತಾಲೂಕಿನವರಿಗೆ ಸರಾಗವಾಗಿ ಕಾಲುವೆಗೆ ನೀರು ಬರುತ್ತದೆ. ಅಲ್ಲಿಂದ ಚಿಕ್ಕೋಡಿ ತಾಲೂಕಿನ ಹಳ್ಳಿಗಳಿಗೆ ನೀರು ಬರದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಕಾಲುವೆಗೆ ನೀರು ಹರಿಸಬೇಕೆಂದು ಚಿಕ್ಕೋಡಿ ತಾಲೂಕಿನ ಕಾಡಾಪುರ, ಕೇರೂರ, ಕೇರೂರವಾಡಿ, ಅರಬ್ಯಾನವಾಡಿ, ನನದಿ, ನನದಿವಾಡಿ, ರೂಪಿನಾಳ, ಹಿರೇಕೊಡಿ ಮುಂತಾದ ಹಳ್ಳಿಯ ರೈತರು ಸರ್ಕಾರಕ್ಕೆ ಮನವಿ ಮಾಡುವುದರ ಜೊತೆಗೆ ಪ್ರತಿಭಟನೆ ಹೋರಾಟ ನಡೆಸುತ್ತಾರೆ. ಆದರೂ ಸಂಬಂಧಿಸಿದ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಮೊಂಡತನದಿಂದ ಕಾಲುವೆಗೆ ನೀರು ಹರಿಯುತ್ತಿಲ್ಲ ಎಂದು ರೈತರ ಗಂಭೀರ ಆರೋಪ.

ಕೊನೆ ಹಳ್ಳಿ ತಲುಪದ ಹನಿ ನೀರು:

ರಾಯಬಾಗ ಉನ್ನತ ಮಟ್ಟದ ಕಾಲುವೆಗೆ ನೀರು ಹರಿದು 19 ವರ್ಷ ಕಳೆದಿವೆ. ಈ ಹಿಂದೆ 2013ರಲ್ಲಿ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಬೃಹತ್‌ ಪ್ರತಿಭಟನೆ ನಡೆಸಿದಾಗ ಒಂದು ಬಾರಿ ನೀರು ಹರಿಸಿದ್ದು ಬಿಟ್ಟರೆ ಮರಳಿ ನೀರು ಹರಿಸಿಲ್ಲ. ಕೊನೆ ಹಳ್ಳಿಯ ರೈತರಿಗೆ ಒಂದು ಹನಿ ನೀರು ತಲುಪಿಲ್ಲ. ಮಳೆ ಇಲ್ಲದೆ ಕಂಗಾಲಾಗಿರುವ ರೈತನಿಗೆ ಕಾಲುವೆಯಿಂದ ನೀರು ಮುಟ್ಟದೆ ಇರುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
ರಾಯಬಾಗ ತಾಲೂಕು ಮುಗಿದು ಚಿಕ್ಕೋಡಿ ತಾಲೂಕು ಗಡಿಯಿಂದ ಹಾಯ್ದು ಹೋಗಿರುವ ಆರ್‌ಎಚ್‌ಎಲ್‌ಡಿ ಕಾಲುವೆಯಲ್ಲಿ ಸಾಕಷ್ಟುಹೂಳು ತುಂಬಿದೆ. ಕೇರೂರ, ಅರಬ್ಯಾನವಾಡಿ, ನನದಿ ಮುಂತಾದ ಕಡೆಗಳಲ್ಲಿ ಕಾಲುವೆಯಲ್ಲಿ ಜಾಲಿ ಮುಳ್ಳಿನ ಗಿಡ, ಕಸಕಡ್ಡಿ ಬೆಳೆದಿವೆ. ಕಾಲುವೆ ಗೋಡೆಗಳು ಕುಸಿದಿವೆ. ಕೆಲವೊಂದು ಭಾಗದಲ್ಲಿ ಕಾಲುವೆ ನಡುವೆಯಲ್ಲಿ ಮಣ್ಣಿನ ದಿಬ್ಬ ಕುಸಿತು ಕಂಡಿವೆ. ಹೀಗಾಗಿ ಕೊನೆ ಹಳ್ಳಿಗಳಿಗೆ ನೀರು ಹೋಗುತ್ತಿಲ್ಲ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ರೈತರ ಆಕೋಶ.

ಒಮ್ಮೆ ನೀರು ಹರಿದರೆ ಬದುಕು ಬಂಗಾರ:

ರಾಯಬಾಗ ಉನ್ನತ ಮಟ್ಟದ ಕಾಲುವೆ ವ್ಯಾಪ್ತಿಯ ರೈತರು ಹೆಚ್ಚಾಗಿ ಈ ಕಾಲುವೆ ನೀರನ್ನು ಅವಲಂಬಿಸಿ ಜೀವನ ನಡೆಸುತ್ತಾರೆ. ಆದರೆ, ಸಮರ್ಪಕ ನೀರು ಹರಿಯದೇ ಇರುವ ಕಾರಣದಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ. ಹಿಂಗಾರು ಅಥವಾ ಮುಂಗಾರಿನಲ್ಲಿ ಒಂದು ಬಾರಿ ಈ ಕಾಲುವೆಗೆ ನೀರು ಹರಿದರೇ ಸಾಕು ರೈತರ ಬಾಳು ಬಂಗಾರವಾಗುತ್ತಿದೆ.

ವರ್ಷದಲ್ಲಿ 20 ದಿನ ಈ ಕಾಲುವೆ ನೀರು ಹರಿದರೇ ಬಾವಿ, ಕೊಳವೆಬಾವಿಯಲ್ಲಿ ಅಂತರ್ಜಲಮಟ್ಟಹೆಚ್ಚಳವಾಗುತ್ತದೆ. ಹೀಗಾಗಿ ಭೂಮಿಯಲ್ಲಿ ಭಿತ್ತಿದ ಒಂದು ಬೆಳೆಯಾದರೂ ಕೈಗೆ ಬರುತ್ತದೆ ಎಂಬ ಆಶಾಭಾವ ಹೆಚ್ಚಿದೆ ಎಂದು ಕೇರೂರ ಗ್ರಾಮದ ರೈತ ಸಿದ್ದಗೌಡ ಪಾಟೀಲ ಅವರು ಹೇಳಿದ್ದಾರೆ. 

ಆರ್‌ಎಚ್‌ಎಲ್‌ಡಿ ಕಾಲುವೆ ಮೂಲಕ ಒಂದು ಬಾರಿ ನೀರು ಹರಿಸಿದರೇ ಚಿಕ್ಕೋಡಿ ತಾಲೂಕಿನ ನಾಲ್ಕೈದು ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ. ಸರ್ಕಾರ ಯಾಕೆ ನೀರು ಹರಿಸುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ಕಾಲುವೆಯಲ್ಲಿ ಕಸ-ಕಡ್ಡಿ, ಗಿಡ-ಗಂಟಿಯಿಂದ ಕಾಲುವೆ ಮುಚ್ಚಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ನೀರು ಹರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಕೇರೂರ ರೈತ ದೊಂದಿಬಾ ಹಕ್ಯಾಗೋಳ ಅವರು ತಿಳಿಸಿದ್ದಾರೆ. 
ಇನ್ನು ಈ ಬಗ್ಗೆ ಮಾಹಿತಿ ನೀಡಿದ ರಾಯಬಾಗ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರು ಎಚ್‌.ಎಲ್‌.ಪೂಜೇರಿ ಅವರು, ಹಿಂಗಾರಿನಲ್ಲಿ 20 ದಿನ ಈ ಕಾಲುವೆಗೆ ನೀರು ಹರಿಸುವ ಅವಕಾಶ ಇದ್ದು, ಆದರೆ ಸಮರ್ಪಕ ಮಳೆ ಆಗದ ಕಾರಣ ಕಾಲುವೆಗೆ ನೀರು ಹೊಗುತ್ತಿಲ್ಲ, ಚಿಕ್ಕೋಡಿ ತಾಲೂಕಿನ ಕೊನೆ ಹಳ್ಳಿ ರೈತರಿಗೆ ನೀರು ಕೊಡಬೇಕೆಂದು ನಾವು ಸತತ ಪ್ರಯತ್ನ ಮಾಡಿದರೂ ಕೂಡಾ ಸಾಧ್ಯವಾಗುತ್ತಿಲ್ಲ. ಪ್ರಸಕ್ತ ವರ್ಷದಲ್ಲಿ ರಾಯಬಾಗÜ ಕೆರೆ ತುಂಬಿಸಿ ನೀರು ಹರಿಸುವ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದ್ದಾರೆ. 

ನೀರು ಹರಿಸಲು ಕಾಲುವೆಗೆ ಇಳಿದು ಬೊಬ್ಬೆ ಹೊಡೆದು ಪ್ರತಿಭಟನೆ

ಘಟಪ್ರಭಾ ಎಡದಂಡೆ ಕಾಲುವೆ ವ್ಯಾಪ್ತಿಯ ರಾಯಬಾಗ ಉನ್ನತ ಮಟ್ಟದ ಕಾಲುವೆಗೆ ನೀರು ಸಮರ್ಪಕ ನೀರು ಹರಿಸಿ ರೈತರ ಬಹುದಿನಗಳ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ಕಾಲುವೆಗೆ ಇಳಿದು ಬೊಬ್ಬೆ ಹೊಡೆದು ಪ್ರತಿಭಟನೆ ನಡೆಸಿದರು.

ಜೆಎಲ್‌ಬಿಸಿ ಕಾಲುವೆ ಮೂಲಕ ರಾಯಬಾಗ ಉನ್ನತ ಮಟ್ಟದ ಕಾಲುವೆಗೆ ನೀರು ಹರಿದರೇ ಚಿಕ್ಕೋಡಿ ತಾಲೂಕಿನ ಕಾಡಾಪುರ, ಕೇರೂರ, ಕೇರೂರವಾಡಿ, ಅರಬ್ಯಾನವಾಡಿ, ನನದಿ, ನನದಿವಾಡಿ, ರೂಪಿನಾಳ, ಹಿರೇಕೊಡಿ ಮುಂತಾದ ಹಳ್ಳಿಯ ರೈತರಿಗೆ ಅನುಕೂಲವಾಗುತ್ತದೆ. ಆದರೆ, ಕಳೆದ ಎರಡು ದಶಕಳಿಂದ ಕಾಲುವೆಗೆ ನೀರು ಹರಿದಿಲ್ಲ. ಕಾಲುವೆಯಲ್ಲಿ ಗಿಡಗಂಟಿ ಬೆಳೆದು ಹೂಳು ತುಂಬಿಕೊಂಡಿದೆ. ಇದರಿಂದ ಸಮರ್ಪಕ ನೀರು ಹರಿಯುತ್ತಿಲ್ಲ ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವರ್ಷ ಸಮರ್ಪಕ ಮಳೆ ಆಗದ ಕಾರಣ ನೀರು ಹರಿಯುತ್ತಿಲ್ಲ ಎಂಬ ಕಾರಣದ ನೆಪವೊಡ್ಡಿ ಅಧಿಕಾರಿಗಳು ನೀರು ಹರಿಸಲು ಮನಸ್ಸು ಮಾಡುತ್ತಿರಲಿಲ್ಲ. ಆದರೆ, ಪ್ರಸಕ್ತ ವರ್ಷದಲ್ಲಿ ಭಾರಿ ಮಳೆ ಸುರಿದಿದೆ. ಹಿಡಕಲ್‌ ಜಲಾಶಯ ಭರ್ತಿಯಾಗಿದೆ. ಇನ್ನು ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆ ಆಗುತ್ತದೆ. ಮಳೆಗಾಲದಲ್ಲಿಯೇ ಕಾಲುವೆಗೆ ನೀರು ಹರಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕೋಡಿ ತಾಲೂಕಿನಲ್ಲಿ ಕೇರೂರ ಗ್ರಾಮ ಭೌಗೋಳಿಕವಾಗಿ ದೊಡ್ಡ ಕ್ಷೇತ್ರವಾಗಿದೆ. ಇಲ್ಲಿಯ ರೈತರು ಕಾಲುವೆ ನೀರನ್ನು ನಂಬಿಕೊಂಡಿದ್ದಾರೆ. ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರಿನಲ್ಲಿ ತಲಾ ಎರಡು ಬಾರಿ ನೀರು ಹರಿಸಿದರೇ ರೈತರ ಬಾಳು ಹಸನಾಗುತ್ತದೆ. ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆಯಲ್ಲಿನ ಹೂಳು ತೆಗೆದು ಕೊನೆ ಹಳ್ಳಿಯವರಿಗೆ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದರು.