ಬೆಳಗಾವಿ[ನ.4]: ಇತ್ತೀಚೆಗೆ ಹೆಚ್ಚುತ್ತಿರುವ ತಂತ್ರಾಜ್ಞಾನದ ಮೂಲಕ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಬೇಕಿದೆ. ಆದ್ದರಿಂದ ಆಧುನಿಕ ತಂತ್ರಜ್ಞಾನವನ್ನು ಪ್ರತಿಯೊಬ್ಬ ಸಿಬ್ಬಂದಿ ಅರಿಯಬೇಕಿದೆ. ಈ ನಿಟ್ಟಿನಲ್ಲಿಅಧಿಕಾರಿಗಳಿಗೆ ವಿದೇಶದಲ್ಲೂ ತರಬೇತಿ ಒದಗಿಸುವ ನಿಟ್ಟಿನಲ್ಲಿ ಸ್ಕಾಟ್ಲ್ಯಾಂಡ್, ಪೋಲೆಂಡ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿ ವಿಧ ಕಡೆ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಚರ್ಚೆ ನಡೆಯುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಭಾನುವಾರ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಆವರಣದಲ್ಲಿ 6.64  ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 36 ಪೊಲೀಸ್‌ ವಸತಿ ಗೃಹಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಂತ್ರಜ್ಞಾನ ಬದಲಾದಂತೆ ಅಪರಾಧದ ಸ್ವರೂಪ ಬದಲಾಗುತ್ತಿದೆ. ಅದಕ್ಕೆ ಅನುಗುಣವಾಗಿ ಸೈಬರ್ ಪೊಲೀಸ್‌ ಠಾಣೆ ಸ್ಥಾಪಿಸಲಾಗುತ್ತಿದೆ. ಬೆಳಗಾವಿಯಲ್ಲಿ ಈಗಾಗಲೇ ಸಿಇಎನ್ ಠಾಣೆ ಆರಂಭಿಸಲಾಗಿದೆ. ಶೀಘ್ರದಲ್ಲಿಯೇ ಮತ್ತೊಂದು ಸಿಇಎನ್ ಪೊಲೀಸ್ ಠಾಣೆಯನ್ನು ಮಂಜೂರು ಮಾಡಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸಲಾಗುತ್ತಿದೆ. ಅಪರಾಧಗಳ ತನಿಖೆಯ ಸ್ವರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ತರಲಾಗುತ್ತಿದೆ. ವಿಶ್ವದಲ್ಲೇ ಶ್ರೇಷ್ಠ ಪೊಲೀಸ್‌ ವ್ಯವಸ್ಥೆಯನ್ನಾಗಿ ರೂಪಿಸಲಾಗುವುದು. ಪೊಲೀಸ್ ಠಾಣೆಗಳ ಹಳೆಯ ಕಟ್ಟಡಗಳನ್ನು ಆಧುನೀಕರಣಗೊಳಿಸಲು ಪ್ರಸ್ತಾವ ಸಲ್ಲಿಸಿದರೆ ಮುಂದಿನ ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ ಎಂದರು.

ಪೊಲೀಸ್ ಸಿಬ್ಬಂದಿ ವಿಶಿಷ್ಟವಾದ ಸೇವೆಯಲ್ಲಿ ತೊಡಗಿರುತ್ತಾರೆ. ಅಪಘಾತ, ಅಪರಾಧ, ಅವಘಡ ಮಾತ್ರವಲ್ಲ ಕೌಟುಂಬಿಕ ಜಗಳ ನಡೆದಾಗಲೂ ಪೊಲೀಸರ ಅಗತ್ಯವಿರುತ್ತದೆ. ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್‌ ಸಿಬ್ಬಂದಿಗೆ ಕನಿಷ್ಠಪಕ್ಷ ಅವರ ಕುಟುಂಬ ನೆಮ್ಮದಿಯಿಂದ ಇರುವ ಹಾಗೆ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಸಮಾಜದ ಮುಖಂಡರುಹಾಗೂ ಸಾರ್ವಜನಿಕರು ಪೊಲೀಸರ ಜತೆ ಸಹಕರಿಸಿದರೆ ಶಾಂತಿಯುತ ವಾತಾವರಣ ನಿರ್ಮಿಸಲು ಸಾಧ್ಯವಿದೆ ಎಂದು ಹೇಳಿದರು. 

ಬೆಳಗಾವಿ ತಾಲೂಕು ಪಂಚಾಯತಿ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಹಗಲಿರುಳು ಜನಸೇವೆಯಲ್ಲಿ ತೊಡಗಿರುವ ಪೊಲೀಸ್‌ ಸಿಬ್ಬಂದಿಗೆ ವಸತಿ ಗೃಹಗಳನ್ನು ಒದಗಿಸಿರುವುದು ಸಂತೋಷದ ವಿಷಯವಾಗಿದೆ ಎಂದರು. ಉತ್ತರ ವಲಯ ಐಜಿಪಿ ಎಚ್.ಜಿ.ರಾಘವೇಂದ್ರ ಸುಹಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಕಲಾವತಿ ಧರೆಣ್ಣವರ ಮತ್ತಿತರರು ಉಪಸ್ಥಿತರಿದ್ದರು.

ರೈತರ ಮೇಲಿನ ಕೇಸ್ ಹಿಂಪಡೆಯಲು ಸಮಿತಿ ರಚನೆ 

ವಿವಿಧ ಹೋರಾಟಗಳ ಸಂದರ್ಭಗಳಲ್ಲಿ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿದೆ. ಉಪ ಸಮಿತಿಯು ಆಯಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಿಂದ ಮಾಹಿತಿ ಪಡೆಯುತ್ತಿದೆ. ಮಾಹಿತಿ ಪಡೆದ ನಂತರ ಉಪ ಸಮಿತಿಯು ವರದಿ ಸಲ್ಲಿಸಿದ ತಕ್ಷಣ ಸರ್ಕಾರ ಸಕರಾತ್ಮಕ ಕ್ರಮ ಜರುಗಿಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಹಿರೇಬಾಗೇವಾಡಿಯಲ್ಲಿ ಭಾನುವಾರ ಭಾರತೀಯ ಕೃಷಿಕ ಸಮಾಜ(ಸಂ)ದ ವತಿಯಿಂದ ಸಂಘಟನೆಯ ಪದಾಧಿಕಾರಿಗಳು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದರು. ಆದಷ್ಟು ಬೇಗ ಈ ಪ್ರಕ್ರಿಯೆಯ ಪೂರ್ಣಗೊಳಿಸಲಾಗುವದು ಎಂದರು. ಕಳಸಾ, ಬಂಡೂರಿ ಯೋಜನೆಯನ್ನುಆದಷ್ಟು ಬೇಗ ಪೂರ್ಣಗೊಳಿಸಲು ಸರ್ಕಾರ ಬದ್ದವಾಗಿದೆ. ಈ ಯೋಜನೆಯ ಕಾಮಗಾರಿಗಳಿಗೆ ಕೇಂದ್ರ ಅರಣ್ಯ ಮತ್ತು ಪರಿಸರಇಲಾಖೆಯು ಸಮ್ಮತಿ ನೀಡಿದೆ. ಕಾಮಗಾರಿ ಆರಂಭಕ್ಕೆ ಸರ್ಕಾರ ತಕ್ಷಣ ಕ್ರಮ ಜರುಗಿಸಲಿದೆ ಎಂದು ತಿಳಿಸಿದರು. 

ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆಯ ಬೇಡಿಕೆಗೆ ಸರ್ಕಾರ ಸ್ಪಂದಿಸಲಿದೆ. ಶೇಷಗಿರಿ ಅಣೆಕಟ್ಟಿನ ಬಗ್ಗೆಯೂ ಸರ್ಕಾರ ಗಮನ ಹರಿಸಲಿದೆ ಎಂದರು. ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ಕಳಸಾ, ಬಂಡೂರಿ ಕಾಮಗಾರಿಗಳನ್ನು ಬೇಗ ಆರಂಭಿಸಬೇಕು. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆ ಮಾಡಬೇಕು ಹಾಗೂ ಶೇಷಗಿರಿ ಆಣೆಕಟ್ಟಿನ ಕಾಮಗಾರಿ ಆರಂಭಿಸುವಂತೆ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದರು.