ಬೆಳಗಾವಿ[ನ.3]: ಸ್ಮಾರ್ಟ್‌ಸಿಟಿ ಅಭಿವೃದ್ಧಿಗೆ ಕೈಗೊಂಡ ಚರಂಡಿಗೆ ಸೈಕಲ್ ಸವಾರನೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಇಲ್ಲಿನ ಮಾಂಡೊಳ್ಳಿ ರಸ್ತೆಯ ದ್ವಾರಕಾ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ದ್ವಾರಕಾ ನಗರದ ದೌಲತ ಢವಳ (55) ಎಂದು ಗುರುತಿಸಲಾಗಿದೆ. 

ಈತ ನಗರದ ಚಿತ್ರಮಂದಿರವೊಂದರಲ್ಲಿಕೆಲಸ ಮಾಡುತ್ತಿದ್ದ. ಎಂದಿನಂತೆ ತನ್ನ ಕೆಲಸ ಮುಗಿದ ನಂತರ ಸೈಕಲ್ ಮೂಲಕ ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಹೊರಟಿದ್ದರು. ಈ ವೇಳೆ ದ್ವಾರಕ ನಗರದ ಹತ್ತಿರ ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಚರಂಡಿ ನಿರ್ಮಾಣ ಮಾಡುತ್ತಿರುವ ಗುಂಡಿಯೊಳಗೆ ಬಿದ್ದಿದ್ದಾನೆ. ಕಾಮಗಾರಿ ಅರ್ಧವಾಗಿದ್ದರಿಂದ ಕಬ್ಬಿಣದ ಸಲಾಕೆಗಳು ದೌಲತನ ದೇಹದ ವಿವಿಧ ಭಾಗಗಳಿಗೆ ಚುಚ್ಚಿದ್ದರಿಂದ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಶನಿವಾರ ಬೆಳಗ್ಗೆ ಸ್ಥಳೀಯರು ನೋಡಿದಾಗ ಮೃತದೇಹ ಕಾಣಿಸಿಕೊಂಡಿದೆ. ಇದರಿಂದ ಕುಟುಂಬಸ್ಥರು ಹಾಗೂ ಅಯೋಧ್ಯಾ ನಗರದ ನಿವಾಸಿಗಳು ಕಾಮಗಾರಿಗೆ ವಿಳಂಬವಾಗಿರುವ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದು ಟಿಳಕವಾಡಿ ಪ್ರದೇಶದಲ್ಲಿರುವ ಸ್ಮಾರ್ಟ್‌ಸಿಟಿ ಕಚೇರಿ ಮುಂದೆ ಧರಣಿ ನಡೆಸಿ,ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಈ ಅಹಿತಕರ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸ್ಮಾರ್ಟ್‌ಸಿಟಿ ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದಿರುವುದರಿಂದ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಆದ್ದರಿಂದ ತ್ವರಿತವಾಗಿ ಪೂರ್ಣಗೊಳಿಸುವುದಾರೆ ಮಾತ್ರ ಯೋಜನೆಗಳನ್ನು ಕೈಗೆತ್ತಿಕೊಳ್ಳಿ. ಇಲ್ಲವಾದಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳದೆ ಹಾಗೇ ಬಿಟ್ಟುಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಟಿಳಕವಾಡಿ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪೊಲೀಸರ ಮಾತಿಗೆ ಸೊಪ್ಪು ಹಾಕದೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಮತ್ತು ಮೃತದೇಹದ ಅಂತ್ಯಸಂಸ್ಕಾರವನ್ನೂ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಪೊಲೀಸರು ಕುಟುಂಬಸ್ಥರ ಮನವೊಲಿಸಿದರು. ತದನಂತರ ದೌಲತನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದರು. 

ಈ  ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮಗಾರಿ ಆರಂಭವಾಗಿ ಬಹಳ ದಿನವಾಗಿದೆ. ಆದರೆ ಇಲ್ಲಿನ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ನ.೩ ರಂದು ಗುತ್ತಿಗೆದಾರನಿಗೆ ಬರಲು ತಿಳಿಸಿದ್ದು,ಗುತ್ತಿಗೆ ನಿಯಮಾವಳಿ ಪ್ರಕಾರ ಕ್ರಮಕೈಗೊಳ್ಳಲಾಗುವುದು. ಅಲ್ಲದೇ ನಗರದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಇಂತಹ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬೆಳಗಾವಿ ಸ್ಮಾರ್ಟ್‌ಸಿಟಿ.ಲಿ.  ಎಂ.ಡಿ. ಶಶಿಧರ ಕುರೇರ ಅವರು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ]