ಮೂಡಲಗಿ[ಜ.18]: ಸಾಮಾನ್ಯವಾಗಿ ಒಂದು ಟ್ರ್ಯಾಕ್ಟರ್‌ನಲ್ಲಿ 2 ಅಥವಾ 3 ಟ್ರೈಲರ್‌ ಕಬ್ಬು ಸಾಗಿಸುವುದನ್ನು ನಾವು ನೋಡಿರಬಹುದು. ಆದ್ರೆ ಇಲ್ಲೊಬ್ಬ ಸಾಹಸಿಚಾಲಕ ಒಂದೇ ಟ್ರ್ಯಾಕ್ಟರ್‌ ಎಂಜಿನ್‌ಗೆ ಬರೋಬ್ಬರಿ ಕಬ್ಬು ತುಂಬಿದ 10 ಟ್ರೈಲರ್‌ಗಳನ್ನು ಜೋಡಿಸಿ 12 ಕಿಮೀ ದೂರದ ಸಕ್ಕರೆ ಕಾರ್ಖಾನೆಯೊಂದಕ್ಕೆ ಕಬ್ಬು ಸಾಗಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಸದ್ಯ ಟ್ರ್ಯಾಕ್ಟರ್‌ ಚಾಲನೆ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಹನಮಂತ ಗದಿಗೆಪ್ಪ ಮಕಾಣಿ ಎಂಬಾತನೇ ಸಾಹಸ ಮೆರೆದ ಚಾಲಕ. ಮೂಡಲಗಿ ಸಮೀಪದ ಸುಣಧೋಳಿ ಗ್ರಾಮದಿಂದ ಪಿ.ಜಿ.ಹುಣಶಾಳ ಗ್ರಾಮದ ಸತೀಶ ಶುಗ​ರ್‍ಸ್ ಸಕ್ಕರೆ ಕಾರ್ಖಾನೆಗೆ ಒಂದೇ ಬಾರಿಗೆ ಕಬ್ಬು ಸಾಗಿಸಿದ್ದಾನೆ. ಕಬ್ಬು ತುಂಬಿದ ಟ್ರ್ಯಾಕ್ಟರ್‌ ರಸ್ತೆಯಲ್ಲಿ ಸಾಗುವಾಗ ರಸ್ತೆಯಲ್ಲಿದ್ದ ಪ್ರಯಾಣಿಕರು, ಸಾರ್ವಜನಿಕರಿಗೆ ರಸ್ತೆ ಮೇಲೆ ರೈಲು ಬಂದಂತ ಅನುಭವ ನೀಡಿದ್ದು, ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ಸುಣಧೋಳಿ ಗ್ರಾಮದಿಂದ ಸುಮಾರು 12 ಕಿಮೀ ದೂರ ಇರುವ ಈ ಕಾರ್ಖಾನೆಗೆ ಕಬ್ಬು ಸಾಗಾಟ ಮಾಡಿ ಸಾಧನೆ ಮಾಡಿದ ಚಾಲಕನಿಗೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.