ಬೆಳಗಾವಿ(ಅ.9): ಬೆಳಗಾವಿ ಸ್ಮಾರ್ಟ್‌ಸಿಟಿ ಕಂಪನಿ ಪಿಎಂಸಿ ಮತ್ತು ಐಸಿಸಿಸಿ ಗುತ್ತಿಗೆದಾರರು ಬಿಇಎಲ್‌ ಅನ್ನು ಬದಲಾವಣೆ ಮಾಡಬೇಕು ಎಂದು ಬೆಳಗಾವಿ ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟೋಪಣ್ಣವರ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್‌ಸಿಟಿ ಯೋಜನೆಯ ಮೊದಲ ಹಂತದ 20 ಸ್ಮಾರ್ಟ್‌ಸಿಟಿಗಳ ಪೈಕಿ ಬೆಳಗಾವಿ ನಗರ ಕೂಡ ಆಯ್ಕೆಯಾಗಿದೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನವೂ ಬಿಡುಗಡೆಯಾಗಿದೆ. ಆದರೆ ಬೆಳಗಾವಿ ಸ್ಮಾರ್ಟ್‌ಸಿಟಿಯ ಪಿಎಂಸಿ ಟ್ಯಾಕ್ಟ್ಬೆಲ್‌ ಇಂಡಿಯಾ ಕಂಪನಿಯ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿದ್ದಾರೆ. ಇವರ ಒಪ್ಪಂದದ ಪ್ರಕಾರ ಎಷ್ಟು ಜನ ಇಲ್ಲಿ ಕೆಲಸಕ್ಕೆ ಇರಬೇಕಾಗಿತ್ತೋ ಅಷ್ಟು ಜನ ಇಲ್ಲ. ಎಷ್ಟುಅನುಭವ ಇರಬೇಕಿತ್ತೋ ಅದು ಇಲ್ಲ. ಇವರ ಕಾರ್ಯವೈಖರಿಯಿಂದ ಸ್ಮಾರ್ಟ್‌ಸಿಟಿ ಕಾಮಗಾರಿ ಪೂರ್ಣಗೊಳ್ಳದೇ ವಿಳಂಬವಾಗಿದೆ. ಪಿಎಂಸಿ ಟ್ರಾಕ್ಟಬೆಲ್‌ ಕಂಪನಿಯು ಗುತ್ತಿಗೆದಾರರದಿಂದ ಹಣ ಪಡೆದಿರುವ ಆರೋಪ ಕೇಳಿ ಬಂದಿದೆ ಎಂದು ದೂರಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕರ್ನಾಟಕದಲ್ಲಿ ಒಟ್ಟು 6 ಸ್ಮಾರ್ಟ್‌ಸಿಟಿಗಳಿವೆ. ಬೆಳಗಾವಿ ಸ್ಮಾರ್ಟ್‌ಸಿಟಿಗೆ ಒಟ್ಟಾರೆ 1000 ಕೋಟಿ ಅನುದಾನ ಇದೆ. ಬೆಳಗಾವಿ ಸ್ಮಾರ್ಟ್‌ಸಿಟಿಯು ರಸ್ತೆ ನಿರ್ಮಾಣಕ್ಕೆ 350 ಕಾಮಗಾರಿಗೆ ಟೆಂಡರ್‌ ಕರೆದಿದ್ದಾರೆ. ಅದು ಪಿಎಂಸಿಯಲ್ಲಿ ರಸ್ತೆ ತಜ್ಞರು ಇಲ್ಲದೆ 350 ಕೋಟಿ ಟೆಂಡರ್‌ ಕರೆದು ಕಾಮಗಾರಿ ಪ್ರಾರಂಭಿಸಿದ್ದಾರೆ. ಈ ಕಂಪನಿ ಮಾಡುತ್ತಿರುವ ಸ್ಮಾರ್ಟ್‌ ರಸ್ತೆ ಮುಂಚಿನ ರಸ್ತೆ ಹಾಗೂ ಸದ್ಯ ಮಾಡುತ್ತಿರುವ ರಸ್ತೆಗೆ ಬಹಳಷ್ಟುವ್ಯತ್ಯಾಸ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ನೆರೆ ಹಾವಳಿಯಿಂದ ಹಾಳಾದ ರಸ್ತೆಗಳು 

ಕೆಲ ತಿಂಗಳ ಹಿಂದೆ ಬೆಳಗಾವಿಯಲ್ಲಿ ನೆರೆ ಹಾವಳಿಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಚರಂಡಿ ರಸ್ತೆ ಸರಾಗವಾಗಿ ಹರಿಯದಂತೆ ಯೋಜನೆ ರೂಪಿಸದೆ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಮತ್ತೆ ಮಳೆ ಬಂದರೆ ಇವರು ಮಾಡಿದ ರಸ್ತೆ ಮೇಲೆ ಚರಂಡಿ ನೀರು ನಿಲ್ಲುವ ಪರಿಸ್ಥಿತಿ ಬರುತ್ತದೆ. ಸದ್ಯ ಸ್ಮಾರ್ಟ್‌ಸಿಟಿ ರಸ್ತೆಯ ಕಾಮಗಾರಿಯಾಗುತ್ತಿವೆ. ಅಲ್ಲಿ ಗುತ್ತಿಗೆದಾರರು ಅವರಿಗೆ ಸಹಾಯವಾಗುವ ರೀತಿ ಸರ್ವೆ ಮಾಡಿ ಆ ನಕ್ಷೆಯನ್ನು ಪಿಎಂಸಿಗೆ ನೀಡಿ ಪಿಎಂಸಿಯಲ್ಲಿ ರಸ್ತೆ ತಜ್ಞರೇ ಇಲ್ಲ. ಅದಕ್ಕೆ ಪಿಎಂಸಿ ತಂಡದ ನಾಯಕ ಸಹಿ ಮಾಡುತ್ತಾರೆ. ಹೀಗಾಗಿ ಗುತ್ತಿಗೆದಾರರ ಮನಸಿಗೆ ಬಂದ ಹಾಗೆ ಕೆಲಸ ನಡೆಯಿತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಸ್ಮಾರ್ಟ್‌ಸಿಟಿ ಲಿ. ಇಂಟಿಗ್ರೇಟೆಡ್‌ ಕಮಾಂಡೆಂಟ್‌ ಕಂಟ್ರೋಲ್‌ ಸೆಂಟರ್‌ ಕಾಮಗಾರಿಯನ್ನು ಭಾರತ ಎಲೆಕ್ಟ್ರಿಕಲ್‌ ಲಿ. ಕಂಪನಿಗೆ ಟೆಂಡರ್‌ ನೀಡಿದ್ದಾರೆ. ಈ ಕಂಪನಿ (ಬಿಇಎಲ್‌)ಗೆ ಸ್ಮಾರ್ಟ್‌ಸಿಟಿಯಲ್ಲಿ ಕೆಲಸ ಮಾಡುವ ಅರ್ಹತೆ ಇರಲಿಲ್ಲ. ಆದರೆ ಸ್ಮಾರ್ಟ್‌ಸಿಟಿಯ ಮೊದಲ ಕಾಮಗಾರಿ ನೀಡಿದ್ದಾರೆ. ಮೂರು ವರ್ಷ ಕಳೆದರೂ ಆ ಕಾಮಗಾರಿ ಮುಗಿದಿಲ್ಲ. ನಮ್ಮ ಕಡೆ ಕೆಲಸ ತೆಗೆದುಕೊಂಡು ಉಪಗುತ್ತಿಗೆದಾರರಿಗೆ ನೀಡಿದ್ದಾರೆ. ಆದ್ದರಿಂದ ಮೂರು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಈ ಕಾಮಗಾರಿಗೆ ಕುರಿತಂತೆ ಪಿಎಂಸಿ ಕಡೆ ಐಸಿಟಿ ತಜ್ಞರು ಇರುತ್ತಾರೆ. ಆದರೆ ಐಸಿಟಿಯವರಿಗೆ ಏನೂ ಜ್ಞಾನ ಇಲ್ಲದವರನ್ನು ಬೆಳಗಾವಿ ಸ್ಮಾರ್ಟ್‌ಸಿಟಿಗೆ ನೇಮಕ ಮಾಡಿದ್ದರೆ, ಈಗಾಗಲೇ 5 ಜನ ಐಸಿಟಿಯವರನ್ನು ಬದಲಾವಣೆಯಾಗಿದ್ದಾರೆ. ಇವರಿಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ದೂರಿದರು.