ರಾಮದುರ್ಗ(ಮಾ.02): ಭಾರತ-ಪಾಕ್ ನಡುವಿನ ಬಿಗುವಿನ ವಾತಾವರಣದ ಮಧ್ಯೆಯೇ ಕಾಂಗ್ರೆಸ್ ಮಾಜಿ ಶಾಸಕನ ಆಪ್ತನೋರ್ವ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪಾಕಿಸ್ತಾನ ಪರ ಪೋಸ್ಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಾಂಗ್ರೆಸ್ ಮಾಜಿ ಶಾಸಕ ಅಶೋಕ್ ಪಟ್ಟಣ್ ಅವರ ಆಪ್ತ ಶಫಿ ಬೆಣ್ಣಿ, ನಿನ್ನೆ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಪೋಸ್ಟ್ ಹಾಕಿದ್ದಾನೆ. ಅಲ್ಲದೇ ಮಾಜಿ ಶಾಸಕ ಅಶೋಕ್ ಪಟ್ಟಣ್ ಅವರನ್ನು ಡಾನ್ ಎಂದು ಉಲ್ಲೇಖಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಮಧ್ಯೆ ಶಫಿ ಪೋಸ್ಟ್ ವೈರಲ್ ಆಗುತ್ತಿದ್ದಂತೇ ರೊಚ್ಚಿಗೆದ್ದ ನೂರಾರು ಜನರ ಗುಂಪು ತಡರಾತ್ರಿ ಶಫಿ ಮನೆಗೆ ಮುತ್ತಿಗೆ ಹಾಕಿ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ದೇಶದ್ರೋಹಿ ಶಫಿ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದೆ.

"

ಇನ್ನು ಶಫಿ ಪೋಸ್ಟ್ ವಿರೋಧಿಸಿ ರಾಮದುರ್ಗ ಶಾಸಕ ಮಹದೇವಪ್ಪ ಪಟ್ಟಣ್ ನೇತೃತ್ವದಲ್ಲಿ ಬಿಜೆಪಿ ಇಂದು ಪ್ರತಿಭಟನೆ ನಡೆಸಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.

ಇತ್ತ ಫೇಸ್‌ಬುಕ್ ಪೋಸ್ಟ್‌ಗೆ ಸ್ಪಷ್ಟನೆ ನೀಡಿರುವ ಶಫಿ ಬೆಣ್ಣಿ, ಯಾರೋ ನನ್ನ ಅಕೌಂಟ್ ಹ್ಯಾಕ್ ಮಾಡಿ ಈ ರೀತಿಯ ಪೋಸ್ಟ್ ಮಾಡಿದ್ದಾರೆ ಎಂದು ಸ್ವತಃ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಸದ್ಯ ಶಫಿ ಬೆಣ್ಣಿ ಪೋಸ್ಟ್‌ನಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.