ಬೆಳಗಾವಿ[ಅ.23]: ನೆರೆಯ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಮಳೆಯಾಗಿದೆ. ಹೀಗಾಗಿ ಮಹಾರಾಷ್ಟ್ರದ ಕೊಯ್ನಾ ಸೇರಿದಂತೆ ವಿವಿಧ ಜಲಾಶಗಳಿಂದ ಕೃಷ್ಣಾ ನದಿಗೆ 1.11 ಲಕ್ಷ ಕ್ಯುಸೆಕ್‌ ನೀರನ್ನು ಹರಿಯಬಿಡಲಾಗಿದೆ. ಕೃಷ್ಣಾ ನದಿಯ ಒಳಹರಿವಿನ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ. ನದಿ ತೀರದ ಗ್ರಾಮಸ್ಥರು ಮತ್ತೆ ಜಲಕಂಟಕ ಎದುರಿಸುವಂತಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿ ಎರಡು ಮತ್ತು ರಾಯಬಾಗ ತಾಲೂಕಿನಲ್ಲಿ 1 ಸೇತುವೆ ಜಲಾವೃತಗೊಂಡಿವೆ.

ಖಾನಾಪುರ ಅರಣ್ಯ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಮಲಪ್ರಭಾ ಜಲಾಶಯದಿಂದ 8704 ಕ್ಯುಸೆಕ್‌ ನೀರನ್ನು ಹರಿಯಬಿಡಲಾಗಿದೆ. ಸೋಮವಾರ 36 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಟ್ಟಿದ್ದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಅಲ್ಲದೇ, ಮಲಪ್ರಭಾ ನದಿ ತೀರದ ಕೆಲವು ಗ್ರಾಮಗಳು ಜಲಾವೃತಗೊಂಡಿದ್ದವು. ನೀರಾವರಿ ಇಲಾಖೆ ಅಧಿಕಾರಿಗಳು ಭಾರೀ ಪ್ರಮಾಣದಲ್ಲಿ ನೀರು ಬಿಡುವ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ಸೂಚನೆ ನೀಡಿದ್ದರು. ಮಂಗಳವಾರ 8704 ಕ್ಯುಸೆಕ್‌ ನೀರನ್ನು ಬಿಟ್ಟಿರುವುದರಿಂದ ಮಲಪ್ರಭಾ ನದಿ ಒಳಹರಿವಿನ ಪ್ರಮಾಣದಲ್ಲಿ ಭಾರೀ ಇಳಿಮುಖವಾಗಿದೆ. ಇದರಿಂದಾಗಿ ನದಿ ತೀರದ ಗ್ರಾಮಸ್ಥರು ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ. ಅದರಂತೆ ಘಟಪ್ರಭಾ ಜಲಾಶಯದಿಂದ 7813 ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದೆ. ಕೃಷ್ಣಾ ನದಿ ಒಳಹರಿವಿನ ನೀರಿನ ಪ್ರಮಾಣ ಏರುಮುಖದತ್ತ ಸಾಗಿದ್ದರೆ, ಮಲಪ್ರಭಾ ಒಳಹರಿವಿನ ಪ್ರಮಾಣ ಇಳಿಮುಖವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚಿಕ್ಕೋಡಿ ಮತ್ತು ರಾಮದುರ್ಗದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಎದುರಿಸಲು ಮುಂಜಾಗ್ರತಾ ಕ್ರಮವಾಗಿ ಎನ್‌ಡಿಆರ್‌ಎಫ್‌ ಎರಡು ತಂಡ ಬೆಳಗಾವಿ ಜಿಲ್ಲೆಗೆ ಆಗಮಿಸಿವೆ. 23 ಸಿಬ್ಬಂದಿ ಎನ್‌ಡಿಆರ್‌ಎಫ್‌ ತಂಡ ಚಿಕ್ಕೋಡಿಗೆ ತೆರಳಿದ್ದರೆ, 24 ಸಿಬ್ಬಂದಿಗಳ ಎನ್‌ಡಿಆರ್‌ಎಫ್‌ ತಂಡ ರಾಮದುರ್ಗಕ್ಕೆ ತೆರಳಿದೆ.

ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ನದಿ ತೀರದ ಹೊಲಗದ್ದೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಮತ್ತೆ ಜಲಾವೃತಗೊಂಡಿದೆ. ಚಿಕ್ಕೋಡಿ ತಾಲೂಕಿನ ಯಡೂರ- ಕಲ್ಲೋಳ, ಭೋಜ- ಕಾರದಗಾ ಮತ್ತು ರಾಯಬಾಗ ತಾಲೂಕಿನ ಕುಡಚಿ- ಉಗಾರ ಸೇತುವೆ ಜಲಾವೃತಗೊಂಡಿದ್ದು,ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದೆ.ಪರ್ಯಾಯ ರಸ್ತೆಗಳ ಮೂಲಕ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ. ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ಬೆಳಗಾವಿಯಲ್ಲಿ ಮುಂದುವರಿದ ಮಳೆ:

ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಮಂಗಳವಾರ ಮುಂದುವರಿದಿದೆ. ಸತತವಾಗಿ ನಾಲ್ಕೈದು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದಿದೆ.

ಬಾಬು ಅಪ್ಪಯ್ಯ ಮುದ್ದಣ್ಣವರ ಅವರ ಮಾಲೀಕತ್ವಕ್ಕೆ ಸೇರಿದ ಮನೆಯೇ ಕುಸಿದು ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ. ಮಧ್ಯಾಹ್ನ 12ರ ಸುಮಾರಿಗೆ ಆರಂಭವಾದ ಮಳೆ ಸಂಜೆ 4 ಗಂಟೆವರೆಗೂ ಎಡೆಬಿಡದೇ ಸುರಿದಿದೆ. ನಂತರ ಮಳೆ ವಿಶ್ರಾಂತಿಗೆ ಜಾರಿತ್ತು. ಇತ್ತೀಚೆಗೆ ಸುರಿದಿದ್ದ ಭಾರೀ ಮಳೆಗೆ ನಗರದ ರಸ್ತೆಗಳಲ್ಲಿ ಬಿದ್ದಿದ್ದ ತೆಗ್ಗು ಗುಂಡಿಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ತಾತ್ಕಾಲಿಕವಾಗಿ ಕಡಿ ಹಾಕಿ ಮುಚ್ಚಿದ್ದರು. ಆದರೆ, ಈಗ ಸುರಿದ ಮಳೆಗೆ ಮತ್ತೆ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ನಗರದ ಬಹುತೇಕ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ. ವಾಹನ ಸವಾರರು ಹರಸಾಹಸ ಮಾಡಿಯೇ ವಾಹನ ಚಾಲನೆ ಮಾಡಬೇಕಾದ ಸ್ಥಿತಿ ಎದುರಾಗಿದೆ.

ಕೊಚ್ಚಿ ಹೋಗುತ್ತಿದ್ದ ಅಕ್ಕ ತಂಗಿ ರಕ್ಷಿಸಿದ ಸ್ಥಳೀಯರು

ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಸಹೋದರಿಯರನ್ನು ಸ್ಥಳೀಯರೇ ರಕ್ಷಣೆ ಮಾಡಿರುವ ಘಟನೆ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.

ಸೂರಾದೇವಿ ಮಾರುತಿ ನಾಯಿಕ್‌ (12) ಮತ್ತು ಈಕೆಯ ತಂಗಿ ಸಿದ್ದವ್ವ ಮಾರುತಿ ನಾಯಿಕ್‌ (10) ರಕ್ಷಣೆಗೊಂಡ ಬಾಲಕಿಯರು. ಕಳೆದ ಎರಡು ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ರಾಯಬಾಗ ತಾಲೂಕಿನ ನಾನಾ ಹಳ್ಳಗಳು ತುಂಬಿ ಹರಿಯುತ್ತಿವೆ. ಮೇಖಳಿ ಗ್ರಾಮದ ಹೊರವಲಯದಲ್ಲಿಯೂ ಹಳ್ಳ ತುಂಬಿ ಹರಿಯುತ್ತಿದೆ. ಈ ಹಳ್ಳ ದಾಟಲು ಸೂರಾದೇವಿ, ಸಿದ್ದವ್ವ ಮುಂದಾಗಿದ್ದಾರೆ. ಆಗ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದರು. ಈ ವೇಳೆ ಕೂಗಿಕೊಂಡಿದ್ದಾರೆ. ಆಗ ಇವರನ್ನು ನೋಡಿದ ಸ್ಥಳೀಯರು ಜೀವದ ಹಂಗು ತೊರೆದು ಇಬ್ಬರು ಸಹೋದರಿಯರನ್ನು ರಕ್ಷಣೆ ಮಾಡಿದ್ದಾರೆ.