ಮರಿಯಮ್ಮನಹಳ್ಳಿ[ಅ.24]: ವಿಜಯಪುರ- ಯಶವಂತಪುರ ರೈಲಿಗೆ ಮರಿಯಮ್ಮನಹಳ್ಳಿಯಲ್ಲಿ ನಿಲುಗಡೆ ನೀಡಲು ರೈಲು ಅಧಿಕಾರಿಗಳು ಒಪ್ಪಿದ ಹಿನ್ನೆಲೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ರೈಲ್ವೆ ಖಾತೆ ರಾಜ್ಯ  ಸಚಿವ ಸುರೇಶ ಅಂಗಡಿ, ಸಂಸದ ವೈ. ದೇವೇಂದ್ರಪ್ಪ ಹಾಗೂ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.

ವಿಜಯಪುರ- ಯಶವಂತಪುರ(ಪ್ರತಿದಿನ) ವಿಶೇಷ ಎಕ್ಸ್‌ಪ್ರೆಸ್ ರೈಲು ಮಂಗಳವಾದಿಂದ ಆರಂಭವಾಗಿದ್ದು, ಹೊಸಪೇಟೆ, ಕೊಟ್ಟೂರು ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಆದರೆ ರೈಲ್ವೆ ವೇಳಾಪಟ್ಟಿಯಂತೆ ಈ ರೈಲಿಗೆ ಮರಿಯಮ್ಮನಹಳ್ಳಿಯಲ್ಲಿ ನಿಲುಗಡೆ ನಿಗದಿಯಾಗಿರಲಿಲ್ಲ. ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ನೈಋತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಹೈದರಾಬಾದ್- ಕರ್ನಾಟಕ, ಉತ್ತರ ಕರ್ನಾಟಕದ ಸಂಸದರ ಸಭೆಯಲ್ಲಿ ಬಳ್ಳಾರಿ ಲೋಕಸಭಾ ಸದಸ್ಯರಾದ ವೈ. ದೇವೇಂದ್ರಪ್ಪ ಅವರು ಮರಿಯಮ್ಮನಹಳ್ಳಿಯಲ್ಲಿ ನಿಲುಗಡೆಗೆ ಒತ್ತಾಯಿಸಿದ್ದರು. ಅವರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ನಿಲುಗಡೆ ನೀಡಲು ಒಪ್ಪಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೊಸಪೇಟೆ- ಹರಿಹರ ರೈಲು ಆರಂಭವಾಗಿ ಕೆಲವೇ ದಿನಗಳಲ್ಲಿ ಈ ಮಾರ್ಗದಲ್ಲಿ ಇನ್ನೊಂದು ಎಕ್ಸ್‌ಪ್ರೆಸ್ ರೈಲು ವಿಜಯಪುರದಿಂದ ಬೆಂಗಳೂರಿಗೆ ಆರಂಭವಾಗಿರುವುದರಿಂದ ಮರಿಯಮ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಹೆಚ್ಚು ಅನುಕೂಲವಾಗಿದೆ. ಬೆಂಗಳೂರು, ವಿಜಯಪುರಕ್ಕೆ ನೇರವಾಗಿ ಹೋಗಿ ಬರಲು ಪ್ರಯಾಣಿಕರಿಗೆ ಪೂರಕವಾಗಿದೆ. ಈ ಎರಡು ರೈಲು ಈ ಭಾಗದ ಜನರಿಗೆ ಹೆಚ್ಚು ಖುಷಿ ತಂದಿದೆ. ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ವಿಜಯಪುರದಿಂದ ಹೊರಡುವ ರೈಲು ಸಂಜೆ 6.25 ಕ್ಕೆ ಹೊಸಪೇಟೆಗೆ ಆಗಮಿಸಲಿದೆ. 6.45 ಕ್ಕೆ ಹೊಸಪೇಟೆಯಿಂದ ಬಿಟ್ಟು ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಕೊಟ್ಟೂರಿಗೆ ರಾತ್ರಿ 8.22 ಕ್ಕೆತಲುಪಲಿದೆ. ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರ ಜತೆಗೆ ಮರಿಯಮ್ಮನಹಳ್ಳಿ ಪಟ್ಟಣದ ಮುಖಂಡರಾದ ಎಂ.ವಿಶ್ವನಾಥ ಶೆಟ್ಟಿ, ಡಿ. ರಾಘವೇಂದ್ರ ಶೆಟ್ಟಿ, ಎಂ.ಶಿವಕುಮಾರ(ಸಿನಿಮಾ ಶಿವಣ್ಣ), ಬಂಗಾರಿ ಮಂಜುನಾಥ ಭಾಗವಹಿಸಿದ್ದರು.

ವಿಜಯಪುರ- ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿಗೆ ಮರಿಯಮ್ಮನಹಳ್ಳಿಯಲ್ಲಿ ನಿಲುಗಡೆ ನೀಡುವಂತೆ ಸಂಸದ ವೈ. ದೇವೇಂದ್ರಪ್ಪ ಅವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ನಿಲುಗಡೆಗೆ ಅನುಮತಿ ದೊರಕಿಸಿಕೊಟ್ಟ ಸಂಸದರಿಗೆ ಪಟ್ಟಣ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮರಿಯಮ್ಮನಹಳ್ಳಿ ಮುಖಂಡ ಎಂ. ವಿಶ್ವನಾಥ ಶೆಟ್ಟಿ ಅವರು ಹೇಳಿದ್ದಾರೆ.