ಬಳ್ಳಾರಿ [ಅ.12]: ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅಭಿನವ ಕಾಶಿ ವಿಶ್ವನಾಥ ಎಂಬ ಖಾವಿಧಾರಿ ಸ್ವಾಮಿಯನ್ನು ಯುವತಿಯ ಕುಟುಂಬ ಸದಸ್ಯರು ಥಳಿಸಿದ ಘಟನೆ ಹೊಸಪೇಟೆ ಬಳಿ ಜರುಗಿದೆ. ಸ್ವಾಮಿಯ ಬಟ್ಟೆ ಬಿಚ್ಚಿಸಿ ಥಳಿಸುವ ವೀಡಿಯೋ ವೈರಲ್ ಆಗಿದ್ದು, ಕಾಮಿ ಸ್ವಾಮಿಯ ಕರ್ಮಕಾಂಡ ಬಯಲಾಗಿದೆ.

ಆಗಿರುವುದಿಷ್ಟು: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಭಿನವ ಕಾಶಿ ವಿಶ್ವನಾಥ ಹೆಸರಿನ ಖಾವಿಧಾರಿ ಸ್ವಾಮಿ ಭಕ್ತರು ಕರೆಯುವ ಮನೆಗಳಿಗೆ ಪಾದಪೂಜೆಗೆ ಹೋಗುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಯಲಬುರ್ಗಾ ತಾಲೂಕಿನ ಮನೆಯೊಂದರಲ್ಲಿ ಪಾದಪೂಜೆಗೆ ತೆರಳಿದ್ದಾಗ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ಯುವತಿಯು ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿದ್ದಾಳೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈತ ಶುಕ್ರವಾರ ಹೊಸಪೇಟೆ ಬಳಿ ಪಾದಪೂಜೆಗೆ ಬರುತ್ತಿದ್ದಾನೆ ಎಂದು ತಿಳಿದು ಯುವತಿಯ ಕುಟುಂಬ ಸದಸ್ಯರು ಹೊಸಪೇಟೆಗೆ ಬಂದಿದ್ದು, ಸ್ವಾಮಿಯ ಕಾರು ತಡೆದಿದ್ದು, ಮೈಮೇಲಿನ ಬಟ್ಟೆ ತೆಗೆಸಿ ಥಳಿಸಿದ್ದಾರೆ. ತಪ್ಪು ಮಾಡಿದ್ದೇನೆ ಕ್ಷಮಿಸಿಬಿಡಿ ಎಂದು ಈತ ಕೇಳಿಕೊಳ್ಳುತ್ತಿರುವುದು ವೀಡಿಯೋದಲ್ಲಿ ಕಂಡುಬರುತ್ತಿದೆ. ಕೆಲ ಹೊತ್ತಿನ ಬಳಿಕ ಈತ ಕಾರಿನಲ್ಲಿ ಪರಾರಿಯಾಗುವ ದೃಶ್ಯ ಕಂಡುಬರುತ್ತದೆ. ಈ ಸಂಬಂಧ ಪ್ರಕರಣ ದಾಖಲಾಗಿಲ್ಲ.