ಬಳ್ಳಾರಿ(ನ.15): ಪ್ರಜಾಪ್ರಭುತ್ವದಲ್ಲಿ ಎಲ್ಲದಕ್ಕೂ ಅವಕಾಶವಿದೆ. ಎರಡು ಬಾರಿ ಬಿಜೆಪಿಯಿಂದ ಗೆದ್ದಿದ್ದೆನು. ಬೇರೆ ಕಾರಣದಿಂದ ಮಾತೃಪಕ್ಷ ಬಿಟ್ಟು ಹೋಗಿದ್ದೆ. ಆಸೆ ಆಕಾಂಕ್ಷೆ, ಅಧಿಕಾರ ಮಂತ್ರಿ ಸ್ಥಾನಕ್ಕಾಗಿ ಸಾರ್ವಜನಿಕ ಜೀವನಕ್ಕೆ ಬಂದವನಲ್ಲ ನಾನು. ಅಭಿವೃದ್ಧಿಯ ಕನಸಿಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆ ಎಂದು ಅನರ್ಹ ಶಾಸಕ ಆನಂದ್ ಸಿಂಗ್ ಅವರು ಹೇಳಿದ್ದಾರೆ. 

ಶುಕ್ರವಾರ ನಗರದಲ್ಲಿ ಕಾರ್ಯಕರ್ತರ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮೇಲೂ ಸಾಕಷ್ಟು ಆರೋಪಗಳಿವೆ. ರಾಜಕೀಯ ಜೀವನದಲ್ಲಿ ಆರೋಪಗಳು ಬರುವುದು ಸಹಜ. ನನ್ನ ಮೇಲೆ ಅಸೂಯೆತನದ ಆರೋಪವೂ ಇದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಾಕಷ್ಟು ಯೋಜನೆಗಳು ಮಾಡುವುದಿತ್ತು. ಆದ್ರೇ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಈಡೇರಿಸಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಬೇಡಿಕೆ ಈಡೇರಲಿಲ್ಲ. ರಾಜ್ಯಾದ್ಯಂತ ಅನುದಾನ ಸಿಗಲಿಲ್ಲ. ಸರ್ಕಾರ ಉಳಿಸೋದು ಬಿಳಿಸೋದೆ ಬರೀ ಕೆಲಸವಾಯ್ತು, ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಕೊರತೆ ಇತ್ತು. ಹೀಗಾಗಿ ನಾನು ರಾಜೀನಾಮೆ ನೀಡಿದೆ ಎಂದು ಹೇಳಿದ್ದಾರೆ. 

ಈ ಮೊದಲು ಚುನಾವಣೆಯಲ್ಲಿ ನಿಲ್ಲೋದಿಲ್ಲ ಎಂದು ಹೇಳಿದ್ದೆ, ಅದನ್ನು ವೈರಲ್ ಮಾಡಿದ್ರು. ಆ ಮಾತಿಗೆ ಬದ್ಧನಾಗಿದ್ದೇನೆ. ಬೇರೆ ಯುವಕರಿಗೆ ಅವಕಾಶ ಕೊಡಬೇಕು ಎನ್ನುವುದಾಗಿದೆ ಎಂದು ಹೇಳಿದ್ದಾರೆ. 
ಸಿಎಂ ಯಡಿಯೂರಪ್ಪ ನಮ್ಮ ಕ್ಷೇತ್ರಕ್ಕೆ  ಅನುದಾನ ನೀಡಿದ್ದಾರೆ. ರಾಜೀನಾಮೆ ಕೋಡೋದಕ್ಕೆ ಮುಂಚೆ ಸಾಕಷ್ಟು ನಾಯಕರಿಗೆ ನಮ್ಮ ನೋವನ್ನು ಹೇಳಿದ್ದೇನೆ. ಕ್ಷೇತ್ರದ ಜನರಿಗೆ ಕೊಟ್ಟ ಮಾತು ಪೂರೈಸಲು ಆಗದ ಕಾರಣ ರಾಜೀನಾಮೆ ನೀಡಿದ್ದೇನೆ ಹೊರತು ನಾಟಕ ಮಾಡಿ ರಾಜೀನಾಮೆ ನೀಡಿಲ್ಲ ಎಂದು ತಿಳಿಸಿದ್ದಾರೆ. 

ಮಗಳು ಮಾವನ ಮನೆ ಹೋದ ಬಳಿಕ ತಂದೆ ಮನೆ ಮರೆಯಲ್ಲ. ನನ್ನದು ಕೂಡ ಅದೇ ಪರಿಸ್ಥಿತಿಯಾಗಿದೆ. ಯಾರಿಗೂ ನೋವಾಗುವಂತೆ ನಾನು ನಡೆದುಕೊಂಡಿಲ್ಲ. ವಿಜಯನಗರ ಜಿಲ್ಲೆಯಾಗೋದು ಏಕಪಕ್ಷೀಯ ನಿರ್ಧಾರವಲ್ಲ. ಹಲವು ಹೋರಾಟದ ಫಲ ಇದಾಗಿದೆ. ಕೆಲ ವಿಚಾರಗಳಲ್ಲಿ ಸ್ವಲ್ಪ ಸ್ವಾರ್ಥ ಇದೆ.‌ ಕ್ಷೇತ್ರದ ವಿಚಾರದಲ್ಲಿ ನಾನು ಸ್ವಾರ್ಥಿಯಾಗಿದ್ದೇನೆ. ಜನರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ. ಸಚಿವ ಸಂಪುಟದಲ್ಲಿ  ವಿಜಯನಗರ ಜಿಲ್ಲೆ ರಚನೆಯ ವಿಷಯ ಬಂದಿತ್ತು. ಆದರೆ, ಕೆಲವರ ಭಿನ್ನಾಭಿಪ್ರಾಯದಿಂದ ಮುಂದೂಡಲಾಯ್ತು ಎಂದು ಹೇಳಿದ್ದಾರೆ. 

ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ನೀಡಿರದ ವಿಚಾರದ ಬಗ್ಗೆ ಮಾತನಾಡಿದ ಸಿಂಗ್, ಶ್ರೀರಾಮುಲು ನನಗಿಂತ ಸೀನಿಯರ್ ಆಗಿದ್ದಾರೆ. ನಿತ್ಯ ಶ್ರೀರಾಮುಲು ಜೊತೆಗೆ ಸಂಪರ್ಕದಲ್ಲಿ ಇದ್ದೇನೆ ಆದ್ರೇ ರಾಜಕೀಯ ಬಗ್ಗೆ ಮಾತನಾಡಿಲ್ಲ. ರಾಮುಲು ಜೊತೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಶ್ರೀರಾಮುಲು ಅವರಿಗೆ ಜಿಲ್ಲಾ ಉಸ್ತುವಾರಿ ನೀಡ್ತಾರೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಜೊತೆಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. 

ವಿಜಯನಗರ ಜಿಲ್ಲೆ ಆಗುವ ವಿಚಾರದಲ್ಲಿ ಸೋಮಶೇಖರ್ ರೆಡ್ಡಿ ಕರುಣಾಕರ ರೆಡ್ಡಿ ಮಾತ್ರ ವಿರೋಧಿಸಿದ್ದಾರೆ. ಜಿಲ್ಲೆಯ ವಿಚಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ವ್ಯಕ್ತವಾಯಿತು. ಜಿಲ್ಲೆಯ ನಿಯೋಗ ತೆಗೆದುಕೊಂಡು ಹೋಗುವಾಗ ಎಲ್ಲರ ಜೊತೆಗೆ ಮಾತನಾಡಿದ್ದೇನೆ. ಮಾಜಿ ಸಿಎಂ ಕುಮಾರಸ್ವಾಮಿ ಮಾತಿಗೆ ಉತ್ತರ ನೀಡೋದಿಲ್ಲ, ಸೋಲಿಸೋದು ಗೆಲ್ಲಿಸೋದು ಮತದಾರರಿಗೆ ಬಿಟ್ಟ ವಿಷಯವಾಗಿದೆ. ಇವರಿಂದ ಸೋಲಿಸೋದು ಸಾಧ್ಯವಿಲ್ಲ ಎಂದಿದ್ದಾರೆ. 

ಕಾರ್ಯಕರ್ತರ ಸಭೆಯ ಬಳಿಕ ಆನಂದ ಸಿಂಗ್ ಅವರು ಹಂಪಿಯ ವಿರೂಪಾಕ್ಷೇಶ್ವರ ದರ್ಶನ ಪಡೆದಿದ್ದಾರೆ.