ಬಳ್ಳಾರಿಯ ದೇವಿನಗರ ಕ್ಯಾಂಪ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಳ್ಳಾರಿ (ಜು.28) ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಬಳ್ಳಾರಿಯ ದೇವಿನಗರ ಕ್ಯಾಂಪ್ ಬಳಿ ನಡೆದಿದೆ. ಬಳ್ಳಾರಿಯಿಂದ ಸಿಂಧನೂರು ಕಡೆ ಹೊರಟಿದ್ದ ಮಾರುತಿ ಫ್ರಾಂಕ್ಸ್ ಕಾರು ಹಾಗೂ ಬಳ್ಳಾರಿ ಕಡೆ ಬರುತ್ತಿದ್ದ ಟಿಪ್ಪರ್ ಲಾರಿ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ಮಾರುತಿ ಫ್ರಾಂಕ್ಸ್ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಈ ಪೈಕಿ ಇಬ್ಬರು ಸ್ಥಳಕ್ಕೆ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕ ಹಾಗೂ ಮತ್ತೊರ್ವ ಪ್ರಯಾಣಿಕ ಸಾವು

ಮಾರುತಿ ಫ್ರಾಂಕ್ಸ್ ಕಾರಿನ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕ ಶೇಖರಗೌಡ ಹಾಗೂ ಸಿಂಧನೂರು ಮೂಲಕ ಚಾಲಕ ಜಿ. ಬಸವರಾಜ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ದ್ಯಾವಪ್ಪ ಜಲಾಲಮ್ಮ ಮತ್ತು ಶಂಬುಲಿಂಗ ಗಂಭೀರವಾಗಿ ಗಾಯಗೊಂಡಿದ್ದಾರೆ .

ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಪ್ರಕರಣ ಸಂಬಂಧ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬಳ್ಳಾರಿ ಎಸ್ಪಿ ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.

ವಿಮ್ಸ್ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

ತೀವ್ರವಾಗಿ ಗಾಯಗೊಂಡಿರುವ ಮೂವರಿಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ತೀವ್ರ ನಿಘಾ ಘಟಕದಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಪ್ರಯಾಣಿಕರ ಕುಟುಂಬಸ್ಥರು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಸಿಲಿಂಡರ್ ದುರಂತದಲ್ಲಿ ಮಹಿಳೆ ಸಾವು

ಸಿಲಿಂಡರ್ ದುರಂತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಳ್ಳಾರಿ ಶಿಕ್ಷಕಿ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿ ಆಗದೆ ಗಂಗಮ್ಮ ಬಳ್ಳಾರಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜುಲೈ 24 ರಂದು ಹುಬ್ಬಳ್ಳಿಯ ಶಕ್ತಿ ನಗರದಲ್ಲಿ ಸಿಲಿಂಡರ್ ಗ್ಯಾಸ್ ಲೀಕ್ ಮೂಲಕ ದುರಂತ ನಡೆದಿತ್ತು. ಗ್ಯಾಸ್ ಲೀಕ್ ಆಗಿದ್ದ ವೇಳೆ ಮೊಬೈಲ್ ಟಾರ್ಚ್ ಆನ್ ಮಾಡಿದ್ದರಿಂದ ದುರ್ಘಟನೆ ನಡೆದಿತ್ತು. ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಗಾಯಗಳಾಗಿದ್ದವು. ಪತಿ - ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಗಾಯವಾಗಿತ್ತು. ಗಂಗಮ್ಮಳಿಗೆ ಶೇ 65 ರಷ್ಟು ಗಾಯಗಳಾಗಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಗಂಗಮ್ಮ ಇಂದು ಕಿಮ್ಸ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ. ಉಳಿದ ಮುವ್ವರಿಗೆ ಚಿಕಿತ್ಸೆ ಮುಂದುವರಿದಿದೆ. ಹುಬ್ಬಳ್ಳಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.