‘ದೇಶದಲ್ಲಿ ಇನ್ಮುಂದೆ ಬಿಜೆಪಿ- ಮೋದಿ ಆಡಳಿತವೇ ನಡೆಯಲಿದೆ’
ದೇಶದಲ್ಲಿ ಕುಸಿದು ಹೋದ ಕಾಂಗ್ರೆಸ್| ದೇಶದಲ್ಲಿ ಕಾಂಗ್ರೆಸ್ ಪಕ್ಷ ಕುಸಿದು ಹೋಗಿದ್ದು ಮಹಾರಾಷ್ಟ್ರ ಚುನಾವಣೆ ಪ್ರಚಾರಕ್ಕೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೋಗಲಿಲ್ಲ| ಈ ಮಟ್ಟಿಗೆ ಕಾಂಗ್ರೆಸ್ ದೇಶದಲ್ಲಿ ಕುಸಿದು ಹೋಗಿದೆ ಎಂದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ|
ಬಾಗಲಕೋಟೆ[ಅ.25]: ದೇಶದಲ್ಲಿ ಕಾಂಗ್ರೆಸ್ ಪಕ್ಷ ಕುಸಿದು ಹೋಗಿದ್ದು ಮಹಾರಾಷ್ಟ್ರ ಚುನಾವಣೆ ಪ್ರಚಾರಕ್ಕೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೋಗಲಿಲ್ಲ. ಈ ಮಟ್ಟಿಗೆ ಕಾಂಗ್ರೆಸ್ ದೇಶದಲ್ಲಿ ಕುಸಿದು ಹೋಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಕುಸಿತ ಹರಿಯಾಣ ಮತ್ತು ಮಹಾರಾಷ್ಟ್ರದ ವಿಧಾನಸಭೆಯ ಇಂದಿನ ಫಲಿತಾಂಶದಿಂದ ಸಾಬೀತಾಗಿದೆ. ದೇಶದಲ್ಲಿ ಇನ್ಮುಂದೆ ಬಿಜೆಪಿ ಹಾಗೂ ನರೇಂದ್ರ ಮೋದಿಯವರ ಆಡಳಿತವೇ ನಡೆಯಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರ್ಯ ನಂತರ ಪ್ರಮುಖ ಚುನಾವಣೆಗಳಿಗೆ ಪ್ರಚಾರಕ್ಕೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ವಿಪಕ್ಷವೂ ಇರಲೇಬೇಕು ಸರ್ಕಾರ ತಪ್ಪು ಹೆಜ್ಜೆ ಇಟ್ಟಾಗ ಸಲಹೆ ಸೂಚನೆ ಕೊಡುವುದಕ್ಕೆ ವಿಪಕ್ಷಗಳು ಬೇಕು. ಅದನ್ನು ಉಳಿಸಿಕೊಳ್ಳುವುದು ಬಿಡುವುದು ಆ ಪಕ್ಷಗಳಿಗೆ ಬಿಟ್ಟಿದ್ದು ಎಂದು ತಿಳಿಸಿದರು.
ಮಹದಾಯಿ ನದಿ ವಿಚಾರವಾಗಿ ಕೇಂದ್ರ ಪರಿಸರ ಇಲಾಖೆ ಸಮ್ಮತಿಯ ಪತ್ರ ನೀಡಿದೆ. ನಾವು ಸಹ ಮೋದಿಯವರಿಗೆ ಮನವಿ ಮಾಡಿ ನೀರು ಹಂಚಿಕೆಯ ಅಧಿಸೂಚನೆ ಹೊರಡಿಸಬೇಕು ಎಂದು ಮನವಿ ಮಾಡಿದ್ದೇವೆ. ಆದರೆ ಗೋವಾ ನ್ಯಾಯಾಲಯದ ಮೆಟ್ಟಿಲೇರಿದೆ. ಹೀಗಾಗಿ ಅಧಿಸೂಚನೆ ವಿಳಂಬವಾಗಿದೆ. ಅಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹಾರಾಷ್ಟ್ರ ಹಾಗೂ ಗೋವಾ ಮುಖ್ಯಮಂತ್ರಿಗಳ ಜೊತೆ ಮಾತುಕತೆಯನ್ನು ಒಂದು ಹಂತದಲ್ಲಿ ಮುಗಿಸಿದ್ದಾರೆ. ಆದರೂ ಬರುವ ಒಂದು ತಿಂಗಳೊಳಗೆ ಈ ವಿಷಯದಲ್ಲಿ ಮತ್ತಷ್ಟುಕಾಳಜಿ ವಹಿಸಲಿದ್ದೇವೆ ಎಂದರು.