ಹಾವೇರಿ: ಎಲ್ಲೆಂದರಲ್ಲಿ ಒಡೆದಿರುವ ಕಾಲುವೆ, ಆತಂಕದಲ್ಲಿ ರೈತರು

ಎಲ್ಲೆಂದರಲ್ಲಿ ಒಡೆದಿರುವ ಕಾಲುವೆ, ದುರಸ್ತಿಗೆ ನಿರ್ಲಕ್ಷ್ಯ| ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಬೆಳೆದಿದೆ ಕಸ| ಕಳಪೆ ಕಾಮಗಾರಿಗೆ ರೈತರ ಆಕ್ರೋಶ| ಕಳೆದ ಎರಡು ತಿಂಗಳ ಹಿಂದೆ ಸುರಿದ ಮಹಾಮಳೆಯಿಂದ ಜಿಲ್ಲೆಯ ಬಹುತೇಕ ಭಾಗದಲ್ಲಿ ನಿರ್ಮಿಸಿದ ಕಾಲುವೆಗಳು ಒಡೆದು ಹೋಗಿವೆ| ಕೆಲವೊಂದು ಕಾಲುವೆಗಳು ಬಿರುಕು ಬಿಟ್ಟಿವೆ| ಮುಂದಿನ ದಿನಗಳಲ್ಲಿ ಈ ತುಂಗಾ ಮೇಲ್ದಂಡೆ ಕಾಲುವೆಗೆ ನೀರು ಹರಿಸಿದರೆ ಜಮೀನುಗಳಿಗೆ ನುಗ್ಗಿ ಬೆಳೆಹಾನಿಯಾಗುವ ಸಂಭವ ಹೆಚ್ಚಾಗಿದೆ|  

Canals Crack in Haveri District

ಹಾವೇರಿ(ಅ.14): ಜಿಲ್ಲೆಯ ರೈತರ ಪಾಲಿಗೆ ವರವಾಗಿ ಬಂದಿದ್ದ ತುಂಗಾ ಮೇಲ್ದಂಡೆ ಯೋಜನೆ ಇದೀಗ ರೈತರಿಗೆ ಶಾಪವಾಗಿ ಕಾಡುವಂತಾಗಿದೆ. ಇತ್ತೀಚೆಗೆ ಸುರಿದ ಮಹಾಮಳೆಯಿಂದಾಗಿ ಕಾಲುವೆಗಳು ಎಲ್ಲೆಂದರಲ್ಲಿ ಒಡೆದು ಹೋಗಿದ್ದು, ಕಾಲುವೆಯ ಅಕ್ಕಪಕ್ಕದ ರೈತರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ಹೌದು, 1991-92ರಲ್ಲಿ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಗಾಜನೂರ ಬಳಿ ತುಂಗಾ ನದಿಯಿಂದ ಆರಂಭಗೊಂಡ ಯೋಜನೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರೈತರ ಹೊಲಗಳಲ್ಲಿ ಉಪ ಕಾಲುವೆಗಳನ್ನು ನಿರ್ಮಿಸಲಾಗಿದೆ.
ಆದರೆ ಕಳೆದ ಎರಡು ತಿಂಗಳ ಹಿಂದೆ ಸುರಿದ ಮಹಾಮಳೆಯಿಂದ ಜಿಲ್ಲೆಯ ಬಹುತೇಕ ಭಾಗದಲ್ಲಿ ನಿರ್ಮಿಸಿದ ಕಾಲುವೆಗಳು ಒಡೆದು ಹೋಗಿದ್ದು ಕೆಲವೊಂದು ಕಾಲುವೆಗಳು ಬಿರುಕು ಬಿಟ್ಟಿವೆ. ಈಗಾಗಲೇ ಅತಿವೃಷ್ಟಿಯಿಂದಾಗಿ ರೈತರು ಬೆಳೆಗಳನ್ನು ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ಮತ್ತೆ ಮುಂದಿನ ದಿನಗಳಲ್ಲಿ ಈ ತುಂಗಾ ಮೇಲ್ದಂಡೆ ಕಾಲುವೆಗೆ ನೀರು ಹರಿಸಿದರೆ ಜಮೀನುಗಳಿಗೆ ನುಗ್ಗಿ ಬೆಳೆಹಾನಿಯಾಗುವ ಸಂಭವ ಹೆಚ್ಚಾಗಿದೆ.

ಆಳೆತ್ತರದಲ್ಲಿ ಕಸ

ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಆಳೆತ್ತರದ ಕಸ, ಹೂಳು ತುಂಬಿಕೊಂಡಿದ್ದು, ಅಲ್ಲಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಇದರಿಂದಾಗಿ ಕಾಲವೆಗೆ ಹರಿಸಿದ ನೀರು ಅಲ್ಲಿಯೇ ನಿಂತು ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಮಾತ್ರ ಈ ಕಾಲುವೆಗೆ ನೀರು ಬಿಡುವುದರಿಂದ ಕೆಲಕಡೆಗಳಲ್ಲಿ ಕಾಲುವೆಗಳು ಒಡೆದು ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ.

ಕಳಪೆ ಕಾಮಗಾರಿ

ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಈಗಾಗಲೇ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕಾಲುವೆಗಳು ಒಡೆದು ಹೋಗಿವೆ. ಮಳೆ ನೀರಿನ ರಭಸಕ್ಕೆ ಕೆಲವೊಂದು ಉಪಕಾಲುವೆಗಳು ಕಿತ್ತುಕೊಂಡು ಹೋಗಿವೆ. ಇದರಿಂದಾಗಿ ಕಾಲುವೆ ನೀರು ಜಮೀನುಗಳಿಗೆ ನುಗ್ಗಿ ರೈತರು ಹಾನಿ ಅನುಭವಿಸುವಂತಾಗಿದೆ. ಇನ್ನು ಕೆಲವಡೆ ಕಾಲುವೆಗಳು ಬಿರುಕು ಬಿಟ್ಟಿದ್ದು ಕಾಲುವೆಗೆ ನೀರು ಹರಿಸಿದರೆ ಒಡೆದು ಹೋಗುವ ಸ್ಥಿತಿಯಲ್ಲಿವೆ. ಕಾಲುವೆಯ ಕಳಪೆ ಕಾಮಗಾರಿ ರೈತರ ನಿದ್ದೆಗೆಡುವಂತೆ ಮಾಡಿದ್ದು, ಇತ್ತ ಜಮೀನು ಹೋಯಿತು ಕಾಲುವೆಯೂ ಕಿತ್ತುಕೊಂಡು ಹೋಯಿತು ಎನ್ನುವ ಸ್ಥಿತಿ ರೈತರಿಗೆ ಬಂದೊದಗಿದೆ.

ದುರಸ್ತಿಗೆ ಮುಂದಾಗದ ಅಧಿಕಾರಿಗಳು

ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಯಿಂದ ಉಪ ಕಾಲುವೆ ಮೂಲಕ ನೀರು ಬಿಡಲಾಗುತ್ತದೆ. ಆದರೆ ಉಪಕಾಲುವೆಗಳನ್ನು ಸರಿಯಾಗಿ ನಿರ್ಮಿಸದ ಕಾರಣ ಹೊಲಗಾಲುವೆಗಳಿಗೆ ನೀರು ಬರುತ್ತಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೇ ಕಾಲುವೆಗಳು ಕಳಪೆಯಾಗಿದ್ದರಿಂದ ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗಿದ್ದು, ನೀರು ಹೊಲಗಳಿಗೆ ನುಗ್ಗಿ ಬೆಳೆಗಳು ಹಾನಿಗಿಡಾಗುತ್ತಿವೆ. ಇಷ್ಟಾದರೂ ಕೂಡ ಅಧಿಕಾರಿಗಳು ಒಡೆದು ಹೋಗಿರುವ ಕಾಲುವೆಗಳ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ರೈತ ವೀರಣ್ಣ ಹೊಸಮನಿ ಅವರು, ಜಿಲ್ಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆ ರೈತರಿಗೆ ವರವಾದ ದಿನಗಳಿಗಿಂತ ಶಾಪವಾಗುವ ದಿನಗಳೇ ಹೆಚ್ಚಾಗುವ ಹಂತಕ್ಕೆ ಬಂದು ನಿಂತಿದೆ. ಕಳಪೆ ಕಾಮಗಾರಿಯಿಂದಾಗಿ ಎಲ್ಲೆಂದರಲ್ಲಿ ಕಾಲುವೆಗಳು ಒಡೆದು ಹೋಗಿದ್ದು, ನೀರು ಹೊಲಗಳಿಗೆ ನುಗ್ಗಿ ಬೆಳೆದು ನಿಂತ ಬೆಳೆಗಳು ಹಾನಿಯಾಗುವ ಆತಂಕವಿದೆ. ಕೂಡಲೇ ಕಾಲುವೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಕಾಲುವೆಯಲ್ಲಿ ರಭಸವಾಗಿ ನೀರು ಹರಿದಿದ್ದರಿಂದ ಕಾಲುವೆಗಳು ಕಿತ್ತುಕೊಂಡು ಹೋಗಿವೆ. ಅಲ್ಲದೇ ಕಾಲುವೆ ಅಕ್ಕಪಕ್ಕದಲ್ಲಿ ಬೆಳೆದು ನಿಂತ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಕಾಲುವೆ ಪಕ್ಕದ ರಸ್ತೆಯ ದುರಸ್ತಿಗೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 
 

Latest Videos
Follow Us:
Download App:
  • android
  • ios