ಬಾಗಲಕೋಟೆಯ ಬೀಳಗಿಯಲ್ಲಿ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿ ಪ್ರೀತಿಸಿದ ನವಜೋಡಿಯೊಂದು ಜಾತಿ ವಿರೋಧದ ನಡುವೆ ವಿವಾಹವಾಗಿದ್ದಾರೆ. ಆದರೆ ಹುಡುಗಿ ಮನೆಯವರು ಅಪಹರಣ ಪ್ರಕರಣ ದಾಖಲಿಸಿದ್ದು, ಜೀವಭಯದಿಂದ ಈ ದಂಪತಿ ರಕ್ಷಣೆ ಕೋರಿ ಎಸ್ಪಿ ಮೊರೆ ಹೋಗಿದ್ದಾರೆ.
ಬಾಗಲಕೋಟೆ (ಅ.28): ಸೋಷಿಯಲ್ ಮೀಡಿಯಾ ಜಮಾನಾದಲ್ಲಿ ಪ್ರೀತಿ ಹುಟ್ಟಲು ಕಣ್ಣೋಟವೇ ಬೇಕಿಲ್ಲ, ಇನ್ಸ್ಟಾಗ್ರಾಂನಲ್ಲಿ ಒಂದು ಮೆಸೇಜ್ ಸಾಕು. ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲೂ ಇಂತಹದ್ದೇ ಒಂದು ಇನ್ಸ್ಟಾಗ್ರಾಂ ಪ್ರೇಮಕಥೆ ಅರಳಿತ್ತು. ಆದರೆ, ಆ ನವಜೋಡಿಯ ಪ್ರೀತಿಗೆ ಎಂದಿನಂತೆ ಜಾತಿ ಎಂಬ ಕಂಟಕ ಎದುರಾಗಿದೆ. ಮನೆಯವರ ವಿರೋಧದ ನಡುವೆಯೂ ಹಸೆಮಣೆ ಏರಿದ ಪ್ರೇಮಿಗಳ ವಿರುದ್ಧ ಇದೀಗ ಹುಡುಗಿ ಮನೆಯವರು ಕಿಡ್ನಾಪ್ ಕೇಸ್ ದಾಖಲಿಸಿದ್ದು, ಜೀವಭಯದಿಂದ ನವದಂಪತಿ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಮೊರೆ ಹೋಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಶುರುವಾದ ಪ್ರೀತಿ, ದೇವಸ್ಥಾನದಲ್ಲಿ ಮದುವೆ!
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ 23 ವರ್ಷದ ಬಿಕಾಂ (B.Com) ಪದವೀಧರ ವಿಜಯ್ ತೋಟದ ಹಾಗೂ 19 ವರ್ಷದ ಬಿಎಸ್ಸಿ (B.Sc) ವಿದ್ಯಾರ್ಥಿನಿ ಪಲ್ಲವಿ ಶೆಟ್ಟೆಪ್ಪನವರ ನಡುವೆ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ಈ ಪರಿಚಯ ದಿನ ಕಳೆದಂತೆ ಗಾಢ ಪ್ರೇಮವಾಗಿ ಮಾರ್ಪಟ್ಟಿತ್ತು. ಇಬ್ಬರ ಜಾತಿಗಳು ಬೇರೆಯಾಗಿದ್ದರಿಂದ ಇವರ ಪ್ರೀತಿಗೆ ಪಲ್ಲವಿ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಜಾತಿ ಬೇಲಿಯನ್ನು ಮುರಿದು ಒಂದಾಗಲು ನಿರ್ಧರಿಸಿದ ಈ ಪ್ರೇಮಿಗಳು, ಕಳೆದ ಸೆಪ್ಟೆಂಬರ್ 4ರಂದು ದೇವಸ್ಥಾನವೊಂದರಲ್ಲಿ ಶಾಸ್ತ್ರೋಕ್ತವಾಗಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಹುಡುಗಿ ಮನೆಯವರಿಂದ ಕಿಡ್ನಾಪ್ ಕೇಸ್ ದಾಖಲು!
ಮಗಳು ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದನ್ನು ಸಹಿಸದ ಪಲ್ಲವಿ ಪೋಷಕರು ಮತ್ತು ಸಂಬಂಧಿಕರು, ಬೀಳಗಿ ಪೊಲೀಸ್ ಠಾಣೆಯಲ್ಲಿ ವಿಜಯ್ ತೋಟದ ವಿರುದ್ಧ ಅಪಹರಣ (Kidnap) ದೂರು ದಾಖಲಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವಿಜಯ್ ಕುಟುಂಬಸ್ಥರನ್ನು ಪದೇ ಪದೇ ಠಾಣೆಗೆ ಕರೆಸಿ ವಿಚಾರಣೆ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
‘ನಾವಿಬ್ಬರೂ ವಯಸ್ಕರು, ಕಿಡ್ನಾಪ್ ಕಟ್ಟುಕತೆ’ ಎಂದ ಪ್ರೇಯಸಿ ಪಲ್ಲವಿ:
ಈ ಬೆಳವಣಿಗೆಯಿಂದ ಕಂಗಾಲಾದ ನವದಂಪತಿ ನೇರವಾಗಿ ಬಾಗಲಕೋಟೆ ಎಸ್ಪಿ ಕಚೇರಿಗೆ ತೆರಳಿ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರೇಯಸಿ ಪಲ್ಲವಿ, 'ನಾವಿಬ್ಬರೂ ಮೇಜರ್ (ವಯಸ್ಕರು). ನಾನು ಸ್ವ-ಇಷ್ಟದಿಂದ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ನನ್ನ ಮನೆಯವರು ನೀಡಿರುವ ದೂರು ಸಂಪೂರ್ಣ ಸುಳ್ಳು' ಎಂದು ಸ್ಪಷ್ಟಪಡಿಸಿದ್ದಾರೆ. 'ನನ್ನ ಮನೆಯವರು ಮತ್ತು ಸಂಬಂಧಿಕರಿಂದ ನಮಗೆ ಮತ್ತು ನಮ್ಮ ಪತಿಯ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಸುಖಾಸುಮ್ಮನೆ ನಮ್ಮ ಗಂಡನ ಮನೆಯವರನ್ನು ಬೀಳಗಿ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ. ದಯವಿಟ್ಟು ನಮ್ಮಿಬ್ಬರ ಪ್ರಾಣಕ್ಕೆ ರಕ್ಷಣೆ ನೀಡಿ' ಎಂದು ಎಸ್ಪಿ ಕಚೇರಿಯಲ್ಲಿ ಜೋಡಿ ಕಣ್ಣೀರಿಟ್ಟಿದೆ.
ವಯಸ್ಕರಾಗಿ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದರೂ, ಕುಟುಂಬದ ಮರ್ಯಾದೆ ಮತ್ತು ಜಾತಿಯ ಹೆಸರಿನಲ್ಲಿ ಬೆದರಿಕೆ ಎದುರಿಸುತ್ತಿರುವ ಈ ಪ್ರೇಮಿಗಳ ರಕ್ಷಣೆಗೆ ಪೊಲೀಸ್ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.






