ಟ್ರಾಫಿಕ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋದವರಿಗೆ 15 ಸಾವಿರ ದಂಡ !
ಟ್ರಾಫಿಕ್ ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದಾಗ ಕೆಲವರು ಅದೇ ಸ್ಪೀಡ್‌ನಲ್ಲಿ ಮುಂದೆ ಸಾಗುವುದೇ ಹೆಚ್ಚು. ಈ ರೀತಿ ಸಾಗೋ ವೇಳೆ ಪೊಲೀಸರನ್ನು ಅಣಕಿಸುವ ಜಾಯಮಾನ ಕೂಡ ಹಲವರಿಗಿದೆ. ಇದೇ ರೀತಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋಗಿ 15ಸಾವಿರ ರೂಪಾಯಿ ದಂಡ ಕಟ್ಟಿದ ಘಟನೆ ನಡೆದಿದೆ.
ಚಂಢಿಘಡ(ಡಿ.01): ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ವೇಳೆ ಕೆಲ ವಾಹನ ಸವಾರರು ಸ್ಪಂದಿಸುವುದಿಲ್ಲ. ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದಾಗ, ನಿಧಾನ ಮಾಡಿ ಪೊಲೀಸರು ಹತ್ತಿರಬಂದಂತೆ ವೇಗವಾಗಿ ಚಲಿಸುವ ಜಾಯಮಾನ ಹೆಚ್ಚು. ಇಷ್ಟೇ ಅಲ್ಲ ಪೊಲೀಸರನ್ನು ಅಣಕಿಸಿ ಮುಂದೆ ಸಾಗುವ ಊದಾಹರಣೆಗಳೂ ಇವೆ. ಇದೇ ರೀತಿ ಪೊಲೀಸರನ್ನು ಅಣಕಿಸಿ, ಬೈಕ್ ನಿಲ್ಲಿಸದೇ ಮುಂದೆ ಸಾಗಿದವರಿಗೆ ಪೊಲೀಸರು ಸರಿಯಾಗಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಕಾರಿನಲ್ಲಿ ಮದ್ಯಪಾನ ಮಾಡಿ ಪೊಲೀಸರೊಂದಿಗೆ ಜಗಳ; ಮೂವರು ಯುವಕರು ಅರೆಸ್ಟ್!
ಈ ಘಟನೆ ನಡೆದಿರುವುದು ಪಂಜಾಬ್‌ನ ಚಂಡಿಘಡದಲ್ಲಿ. ಯಮಹಾ Rx 100 ಬೈಕ್ ಮೂಲಕ ತ್ರಿಬಲ್ ರೈಡರ್ಸ್ ಸಾಗಿ ಬಂದಿದ್ದಾರೆ. ಬೈಕ್‌ನಲ್ಲಿ ಮೂವರ ಪ್ರಯಾಣ ನಿಯಮ ಉಲ್ಲಂಘನೆ, ಇಷ್ಟೇ ಅಲ್ಲ ಯಾರೂ ಕೂಡ ಹೆಲ್ಮೆಟ್ ಹಾಕಿಲ್ಲ. ತಪಾಸಣೆ ಮಾಡುತ್ತಿದ್ದ ಪೊಲೀಸರು ತ್ರಿಬಲ್ ರೈಡ್ ಗಮನಿಸಿ ಬೈಕ್ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಆದರೆ ತ್ರಿಬಲ್ ರೈಡರ್ಸ್ ಬೈಕ್ ವೇಗ ಕಡಿಮೆ ಮಾಡಿ ನಿಲ್ಲಿಸುವಂತೆ ನಾಟಕವಾಡಿದ್ದಾರೆ.
ಇದನ್ನೂ ಓದಿ: ಆಧುನಿಕ ಬಾಹುಬಲಿ; ನಡು ರಸ್ತೆಯಲ್ಲಿದ್ದ ಸ್ವಿಫ್ಟ್ ಕಾರನ್ನೇ ಎತ್ತಿ ಬದಿಗಿಟ್ಟ ಚಾಲಕ!
ಪೊಲೀಸರು ಹತ್ತಿರ ಬರುತ್ತಿದ್ದಂತೆ ವೇಗವಾಗಿ ಬೈಕ್ ಚಲಾಯಿಸಿ ಮುಂದೆ ಸಾಗಿದ್ದಾರೆ. ಇಷ್ಟೇ ಅಲ್ಲ ಪೊಲೀಸರನ್ನು ಅಣಕಿಸಿ ನಮ್ಮನ್ನು ಹಿಡಿಯಿರಿ ಎಂದಿದ್ದಾರೆ. ಕರ್ತವ್ಯದಲ್ಲಿ ಪೊಲೀಸರು ಬೈಕ್ ನಂಬರ್ ಗಮನಿಸಲು ಸಾಧ್ಯವಾಗಲಿಲ್ಲ. ಆದರೆ ದಾರಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿ ವಾಹನ ನಂಬರ್ ಜಾಡು ಹಿಡಿದು ಹೊರಟಿದ್ದಾರೆ.
48 ಗಂಟೆಗಳಲ್ಲಿ ಬೈಕ್ ಮಾಲೀಕನನ್ನು ಪತ್ತೆ ಹಚ್ಚಿ ವಿವಿದ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಬರೋಬ್ಬರಿ 14,500 ರೂಪಾಯಿ ದಂಡ ಹಾಕಿದ್ದಾರೆ. ಈ ವೇಳೆ ತಾನು ಬೈಕ್ ಮಾರಾಟ ಮಾಡಿರುವುದಾಗಿ ಮಾಲೀಕ ಹೇಳಿದ್ದಾನೆ. ಮಾರಾಟ ಮಾಡಿದ ವ್ಯಕ್ತಿಯ ವಿಳಾಸ ಪಡೆದು ಆತನನ್ನು ಹಿಡಿದಿದ್ದಾರೆ. ಇಷ್ಟೇ ಅಲ್ಲ ಬೈಕ್ ಸವಾರಿ ಮಾಡಿದ ಮೂವರನ್ನು ಹಿಡಿದು 14500 ರೂಪಾಯಿ ದಂಡ ಹಾಕಿದ್ದಾರೆ. ಇನ್ನು ಮೊದಲ ಮಾಲೀಕ ದಾಖಲೆಗಳನ್ನು ವರ್ಗಾವಣೆ ಮಾಡದ ಕಾರಣಕ್ಕೆ 5000 ರೂಪಾಯಿ ದಂಡ ಹಾಕಿದ್ದಾರೆ.
ಇದನ್ನೂ ಓದಿ: ಬೌನ್ಸ್ ಸ್ಕೂಟರ್‌ಗೆ ಬೆಂಕಿ; ಆರೋಪಿಗಳನ್ನು ಬಂಧಿಸಿದ ಪೊಲೀಸ್!
ತ್ರಿಬಲ್ ರೈಡ್ ಸವಾರರು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ನಿಯಮ ಉಲ್ಲಂಘಿಸುವವರು ಯಾರೇ ಆಗಿದ್ದರೂ ಕಾನೂನಿನಲ್ಲಿ ವಿನಾಯಿತಿ ಇಲ್ಲ. ದಂಡ ಕಟ್ಟಿ, ನಿಯಮ ಪಾಲಿಸಿ. ಇತರರ ಜೀವದೊಂದಿದೆ ಚೆಲ್ಲಾಟವಾಡಬೇಡಿ ಎಂದು ವಾರ್ನಿಂಗ್ ನೀಡಿದ್ದಾರೆ.