ಧಾರ್ಮಿಕ ಕೇಂದ್ರಗಳಲ್ಲೂ ಸಂಚಾರ ಪೊಲೀಸರಿಂದ ಜಾಗೃತಿ!
ಸಾಮಾಜಿಕ ಜಾಲತಾಣದ ಮೂಲಕ ಜಾಗೃತಿ ಮೂಡಿಸುತ್ತಿದ್ದ ಸಂಚಾರ ಪೊಲೀಸರು ಇದೀಗ ಧಾರ್ಮಿಕ ಕೇಂದ್ರಗಳಲ್ಲಿಯೂ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಬೆಂಗಳೂರು [ಸೆ.16]: ಸಂಚಾರ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ ಕುರಿತು ಶಾಲಾ-ಕಾಲೇಜು, ಮನೆ-ಮನೆಗಳಿಗೆ ತೆರಳಿ ಹಾಗೂ ಜಾಹೀರಾತು, ಸಾಮಾಜಿಕ ಜಾಲತಾಣದ ಮೂಲಕ ಜಾಗೃತಿ ಮೂಡಿಸುತ್ತಿದ್ದ ಸಂಚಾರ ಪೊಲೀಸರು ಇದೀಗ ಧಾರ್ಮಿಕ ಕೇಂದ್ರಗಳಲ್ಲಿಯೂ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಉತ್ತರ ವಿಭಾಗದ ಸಂಚಾರ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನ, ಧಾರ್ಮಿಕ ಕೇಂದ್ರಗಳಾದ ಮಸೀದಿ, ಚಚ್‌ರ್‍ಗಳಿಗೆ ತೆರಳಿ ಕರಪತ್ರ ಹಂಚಿ ಜಾಗೃತಿ ಮೂಡಿಸಿದ್ದಾರೆ, ಜತೆಗೆ ಧರ್ಮಗುರುಗಳ ಮೂಲಕವೂ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಜನ ದಟ್ಟಣೆ ಇರುವ ಬಸ್ ನಿಲ್ದಾಣ, ಪಾರ್ಕಿಂಗ್, ಹೋಟೆಲ್‌ಗಳ ಬಳಿ ಸಾರ್ವಜನಿಕರಿಗೆ ಸಂಚಾರ ಪಾಲನೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಮೂರು ದಿನಗಳಿಂದ ಜಾಗೃತಿ ಕಾರ್ಯಕ್ರಮ ಆರಂಭಿಸಿರುವ ಪೊಲೀಸರು, ಯಲಹಂಕ, ಹೆಬ್ಬಾಳ, ಚಿಕ್ಕಜಾಲ, ದೇವನಹಳ್ಳಿ, ಆರ್.ಟಿ.ನಗರ ಸೇರಿ ಎಲ್ಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿರುವ ಮಸೀದಿಗಳಿಗೆ ಭೇಟಿ ನೀಡಿ, ಕರಪತ್ರ ವಿತರಣೆ ಮಾಡಿದ್ದಾರೆ. ಅಲ್ಲದೆ, ಮಸೀದಿಯ ಮೌಲ್ವಿಗಳಿಂದ ಸಂಚಾರ ನಿಯಮ ಪಾಲನೆ ಬಗ್ಗೆ ತಿಳಿ ಹೇಳಿಸುವ ಪ್ರಯತ್ನ ಮಾಡಿದ್ದಾರೆ. ಇದೇ ರೀತಿಯ ಜಾಗೃತಿ ಕಾರ್ಯಕ್ರಮಗಳು ಕೂಡ ಪಶ್ಚಿಮ ವಿಭಾಗ ಮತ್ತು ಪೂರ್ವ ವಿಭಾಗಗಳಲ್ಲಿಯೂ ನಡೆಯುತ್ತಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
24 ಗಂಟೆ, 34 ಲಕ್ಷ ರು. ದಂಡ ಸಂಗ್ರಹ!
ಸಂಚಾರ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ತಮ್ಮ ಕಾರ್ಯಾಚರಣೆ ಮುಂದುವರೆಸಿರುವ ಪೊಲೀಸರು, ಶನಿವಾರ ಬೆಳಗ್ಗೆ 10 ಗಂಟೆಯಿಂದ ಭಾನುವಾರ ಬೆಳಗ್ಗೆ 10 ಗಂಟೆವರೆಗೆ ನಗರದಲ್ಲಿ 9,956 ಪ್ರಕರಣ ದಾಖಲು ಮಾಡಿದ್ದು, . 34,72,500 ದಂಡ ಸಂಗ್ರಹ ಮಾಡಿದ್ದಾರೆ. ಈ ಮೂಲಕ 12 ದಿನಗಳಲ್ಲಿ ಎರಡೂವರೆ ಕೋಟಿಗೂ ಅಧಿಕ ಸಂಗ್ರಹವಾದಂತಾಗಿದೆ.
ಇನ್ನು ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ಮಾತ್ರ ಏರಿಕೆಯಾಗುತ್ತಲೇ ಇವೆ. ಕಳೆದ 24 ಗಂಟೆಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಪ್ರಕರಣ ಸಂಬಂಧ 427 ಪ್ರಕರಣಗಳನ್ನು ದಾಖಲಿಸಲಾಗಿದೆ. ವಾರಾಂತ್ಯವಾದ್ದರಿಂದ ಈ ಪ್ರಕರಣಗಳು ಅಧಿಕವಾಗಿದೆ.
ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಕಡಿಮೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಹೀಗಾಗಿ ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳ ಮೂಲಕ ಸಂಚಾಯ ನಿಯಮ ಉಲ್ಲಂಘನೆ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.
- ಸಾ.ರಾ. ಫಾತೀಮಾ, ಉತ್ತರ ವಿಭಾಗದ ಸಂಚಾರ ಡಿಸಿಪಿ