ಸಂಚಾರ ನಿಯಮ ಉಲ್ಲಂಘನೆ: ಪೊಲೀಸಪ್ಪಗೇ 34000 ರೂ. ದಂಡ!
ಸಂಚಾರ ನಿಯಮ ಉಲ್ಲಂಘನೆ| ರಾಂಚಿ ಪೇದೆಯಿಂದ ಡಬಲ್ ದಂಡ ವಸೂಲಿ| ಪೊಲೀಸಪ್ಪಗೇ .34000 ದಂಡ!| ಹೊಸ ಕಾಯ್ದೆಯಡಿ ಪೊಲೀಸರಿಗೇ ದಂಡ ವಿಧಿಸಿದ ದೇಶದ ಮೊದಲ ಕೇಸ್!
ರಾಂಚಿ[ಸೆ.07]: ರಸ್ತೆ ಅಪಘಾತಗಳನ್ನು ತಡೆಯುವ ಸಲುವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸುವ ನೂತನ ಕಾಯ್ದೆಯಡಿ ದಂಡದ ಬಿಸಿ ಕೇವಲ ಜನಸಾಮಾನ್ಯರಿಗಷ್ಟೇ ಅಲ್ಲದೆ, ಪೊಲೀಸರಿಗೂ ತಟ್ಟಿದೆ. ಈ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ, ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಕಾನ್‌ಸ್ಟೇಬಲ್‌ವೊಬ್ಬರಿಗೆ ಬರೋಬ್ಬರಿ 34 ಸಾವಿರ ರು. ದಂಡ ವಿಧಿಸಲಾಗಿದೆ. ಕಾಯ್ದೆ ಜಾರಿಗೆ ಬಂದ ಬಳಿಕ ಸಂಚಾರ ಪೊಲೀಸರೊಬ್ಬರಿಗೆ ದಂಡ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.
ದ್ವಿಚಕ್ರ ಸವಾರನಿಗೆ ದುಬಾರಿ ದಂಡ; ಮೊತ್ತ ಕೇಳಿ ಬೈಕನ್ನೇ ಸುಟ್ಟ!
ಕಾನ್‌ಸ್ಟೇಬಲ್ ರಾಕೇಶ್ ಕುಮಾರ್ ಎಂಬುವರು ಎಎಸ್‌ಐ ಪರಮೇಶ್ವರ್ ರೈ ಅವರನ್ನು ತಮ್ಮ ಹಿಂಬದಿಯಲ್ಲಿ ಕೂರಿಸಿಕೊಂಡು ಹೆಲ್ಮೆಟ್ ಧರಿಸದೆಯೇ ಬೈಕ್‌ನಲ್ಲಿ ಚಲಿಸುತ್ತಿದ್ದರು. ಈ ವೇಳೆ ಇವರು ರಾಂಚಿಯ ಸಂಚಾರಿ ಎಸ್‌ಪಿ ಅಜಿತ್ ಪೀಟರ್ ದಂಗದುಂಗ್ ಅವರಿಗೆ ಸಿಕ್ಕಿಬಿದ್ದಿದ್ದರು. ಈ ಪ್ರಕಾರ ಲೈಸನ್ಸ್ ರಹಿತ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ(ಎಮಿಷನ್ ಟೆಸ್ಟ್) ಹಾಗೂ ಇತರೆ ದಾಖಲೆಗಳನ್ನು ಹೊಂದಿಲ್ಲದ ಕಾರಣಕ್ಕಾಗಿ ರಾಕೇಶ್‌ಗೆ 17 ಸಾವಿರ ರು. ದಂಡ ವಿಧಿಸಬೇಕಿತ್ತು. ಆದರೆ, ಕಾನೂನು ಪಾಲಕರಾದ ಪೊಲೀಸರೇ ಕಾನೂನು ಉಲ್ಲಂಘಿಸಿದರೆ, ಜನಸಾಮಾನ್ಯರಿಗಿಂತ ಡಬಲ್ ದಂಡ ವಿಧಿಸಬೇಕೆಂಬ ನಿಯಮವನ್ನು ನೂತನ ಕಾಯ್ದೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಈ ಹಿನ್ನೆಲೆ ರಾಕೇಶ್‌ಗೆ ವಿಧಿಸಲಾದ ದಂಡ 34 ಸಾವಿರ ರು. ಆಗಿದೆ.
ಟ್ರಾಫಿಕ್ ರೂಲ್ಸ್ ಶಾಕ್; ಪೊಲೀಸರು ನಿಯಮ ಉಲ್ಲಂಘಿಸಿದ್ರೆ ಡಬಲ್ ಫೈನ್!
ಏತನ್ಮಧ್ಯೆ, ಪಂಜಾಬ್‌ನಲ್ಲಿ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಸಂಚಾರ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನ ಚಲಾಯಿಸಿದ ಘಟನೆ ಸಾಮಾಜಿಕ ಮಾಧ್ಯಮಗಳಿಂದ ಬೆಳಕಿಗೆ ಬಂದಿದೆ. ಅಲ್ಲದೆ, ಪರಿಶೀಲನೆ ಬಳಿಕ ಅವರು ತಮ್ಮ ವಾಹನದ ವಿಮೆ ಸಹ ಹೊಂದಿಲ್ಲ ಎಂಬುದು ಖಚಿತವಾಗಿದ್ದು, ಅವರಿಗೆ 10 ಸಾವಿರ ರು. ದಂಡ ವಿಧಿಸಲಾಗಿದೆ.