ಹೈದರಾಬಾದ್(ಜು.25): ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಫಾಲ್ಕನ್ ವ್ಯಾನಿಟಿ ವ್ಯಾನ್ ಬಾರಿ ಸದ್ದು ಮಾಡಿತ್ತು. ದಕ್ಷಿಣ ಭಾರತದಲ್ಲೇ ದುಬಾರಿ ವ್ಯಾನಿಟಿ ವ್ಯಾನ್ ಹೊಂದಿದ ನಟ ಅನ್ನೋ ಹೆಗ್ಗಳಿಕೆಗೆ ಅಲ್ಲು ಅರ್ಜುನ್ ಪಾತ್ರರಾಗಿದ್ದರು. ಅತ್ಯಾಧುನಿಕ ಸೌಲಭ್ಯ, ಮೇಕಪ್ ರೂಂ, ಬೆಡ್ ರೂಂ ಸೇರಿದಂತೆ ಎಲ್ಲಾ ಸೌಲಭ್ಯವಿರುವು ಈ ವ್ಯಾನ್ ಬೆಲೆ ಬರೊಬ್ಬರಿ 7 ಕೋಟಿ ರೂಪಾಯಿ. ದುಬಾರಿ ಮೊತ್ತ ಚೆಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಂಡ ಫಾಲ್ಕನ್ ವ್ಯಾನಿಟಿ ವ್ಯಾನ್ ರಸ್ತೆಗಿಳಿದ ಮೊದಲ ದಿನವೇ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಫಾಲ್ಕನ್ ವ್ಯಾನ್; ಹೇಗಿದೆ 7 ಕೋಟಿ ರೂಪಾಯಿ ವಾಹನ?

ನೂತನ ಫಾಲ್ಕನ್ ವ್ಯಾನಿಟಿ ವ್ಯಾನ್ ಏರಿ ಶೂಟಿಂಗ್ ಸೆಟ್‌ಗೆ ಹೊರಟ ಅಲ್ಲು ಅರ್ಜುನ್‌ಗೆ ಸಂಕಷ್ಟ ಎದುರಾಗಿದೆ. ಕಾರಣ ಅಲ್ಲು ಅರ್ಜುನ್ ಫಾಲ್ಕ್ ವ್ಯಾನ್ ರಸ್ತೆ ನಿಯಮ ಉಲ್ಲಂಘಿಸಿದೆ. ಮಾಡಿಫಿಕೇಶನ್ ಮಾಡಿಸಿದ ಈ ವ್ಯಾನ್‌ನಲ್ಲಿ ಟಿಂಟೆಡ್ ಗ್ಲಾಸ್ ಬಳಸಲಾಗಿದೆ. ವ್ಯಾನ್ ಗಾಜಿನ ಮೇಲೆ ಕಪ್ಪು ಬಣ್ಣದ ಕೂಲಿಂಗ್ ಸ್ಟಿಕ್ಕರ್ ಹಾಕಲಾಗಿದೆ. ಸುಪ್ರೀಂ ಕೋರ್ಟ್ ನಿಯಮದ ಪ್ರಕಾರ, ಭಾರತದಲ್ಲಿ ಟಿಂಟೆಡ್ ಗ್ಲಾಸ್ ಬಳಸುವುದು ನಿಯಮ ಬಾಹಿರವಾಗಿದೆ. ಹೀಗಾಗಿ ನಿಯಮ ಉಲ್ಲಂಘಿಸಿದ ಅಲ್ಲು ಅರ್ಜುನ್ ಫಾಲ್ಕನ್ ವ್ಯಾನ್‌ಗೆ ದಂಡ ಹಾಕಲಾಗಿದೆ.

ಇದನ್ನೂ ಓದಿ: ಮೋದಿ ಮನೆ ಸಮೀಪ ಕಾರ್ ಸ್ಟಂಟ್; ಹಣಕಾಸು ಸಚಿವನ ಸಂಬಂಧಿ ಅರೆಸ್ಟ್!

ಹಿಮಾಯತ್ ನಗರದ ಮೊಹಮ್ಮದ್ ಅದ್ಬುಲ್ ಅಝಮ್ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಫಾಲ್ಕನ್ ವ್ಯಾನ್ ತಡೆದು ನಿಲ್ಲಿಸಿದ ಹೈದರಾಬಾದ್ ಪೊಲೀಸರು ದಂಡ ಹಾಕಿದ್ದಾರೆ. ಟಿಂಟೆಡ್ ಗ್ಲಾಸ್ ಬಳಿಸಿದ ಕಾರಣಕ್ಕೆ ಅಲ್ಲು ಅರ್ಜುನ್‌ಗೆ 735 ರೂಪಾಯಿ ದಂಡ ಹಾಕಲಾಗಿದೆ. ಅಲ್ಲದೆ ಟಿಂಟೆಡ್ ಗ್ಲಾಸ್ ತೆಗೆಯುವಂತೆ ಖಡಕ್ ಸೂಚನೆ ನೀಡಲಾಗಿದೆ.  ತ್ರಿವಿಕ್ರಮ ಶ್ರಿನಿವಾಸ್ ನಿರ್ದೇಶನದ AA19 ಚಿತ್ರದ ಶೂಟಿಂಗ್‌ನಲ್ಲಿ ಅಲ್ಲು ಅರ್ಜುನ್ ಬ್ಯುಸಿಯಾಗಿದ್ದಾರೆ. ಈ ಶೂಟಿಂಗ್ ಸೆಟ್‌ಗೆ ತೆರಳುವಾಗಿ ಪೊಲೀಸರು ದಂಡ ಹಾಕಿದ್ದಾರೆ.