ಬೈಕನ್ನೇ ದೇವರಂತೆ ಪೂಜಿಸುವ ಬುಲೆಟ್ ಬಾಬಾ ಮಂದಿರ!
ಭಾರತವನ್ನು ಮಂದಿರಗಳ ತವರು ಎನ್ನುತ್ತಾರೆ. ಇಲ್ಲಿ ದೇವರ ಬೇರೆ ಬೇರೆ ರೂಪವನ್ನು ಮಂದಿರ ಕಟ್ಟಿ ಪೂಜಿಸುತ್ತಾರೆ. ಅಂಥದ್ರಲ್ಲಿ ಬೈಕನ್ನು ದೇವರಂತೆ ಪೂಜಿಸುವ ಮಂದಿರ ಇದೆ ಗೊತ್ತಾ? ಅದು ಯಾವುದು, ಎಲ್ಲಿದೆ?
ಜೋದ್‌ಪುರ(ಮೇ.10): ಕಾಳಿ, ಗಣಪತಿ, ದುರ್ಗೆ, ಪಾರ್ವತೀ ಹೀಗೆ ಬೇರೆ ಬೇರೆ ರೂಪದಲ್ಲಿ ದೇವರನ್ನು ಪೂಜಿಸುವ ಈ ದೇಶದಲ್ಲಿ ಬೈಕನ್ನೂ ದೇವರೆಂದು ಗುಡಿ ಕಟ್ಟಿ ಪೂಜಿಸುತ್ತಾರೆ. ಅಚ್ಚರಿ ಪಡಬೇಡಿ. ಇದು ನಿಜ. ಈ ಬುಲೆಟ್ ಬಾಬಾ ಬಳಿ ಬಂದು ಯಾತ್ರೆ ಸುಗಮವಾಗಿ ನಡೆಯಲಿ ಎಂದು ಪ್ರಾರ್ಥಿಸಿದರೆ ಯಾತ್ರೆ ಸುಗಮವಾಗುತ್ತದೆ ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ: ಹಬ್ಬಿದಾ ಮಲೆ ಮಧ್ಯದೊಳಗೆ ಹರಡಿ ನಿಂತ ಅಮ್ಮನಘಟ್ಟ!
ಓಂ ಬನ್ನಾ ಅನ್ನೋದು ಈ ಪುಣ್ಯಕ್ಷೇತ್ರದ ಹೆಸರು. ಇದನ್ನು ಓಂ ಬಾಬಾ ಹಾಗೂ ಬುಲೆಟ್ ಬಾಬಾ ಎಂದೂ ಕರೆಯಲಾಗುತ್ತದೆ. ಜೋದ್‌ಪುರ ಬಳಿ ಇರುವ ಪಾಲಿ ಜಿಲ್ಲೆಯಲ್ಲಿ ಈ ದೇವಾಲಯವಿದೆ . ಇದು ಪಾಲಿಯಿಂದ 20 ಕಿ.ಮೀ ದೂರದಲ್ಲಿ, ಜೋಧ್‌ಪುರದಿಂದ 50ಕಿ.ಮೀ ಅಂತರದಲ್ಲಿದೆ.
1988ರ ಡಿಸೆಂಬರ್ 2 ರಂದು ಓಂ ಬನ್ನಾ ಸಿಂಗ್ ರಾಥೋರ್ ಎಂಬ ಬೈಕ್ ಪ್ರಿಯ ವ್ಯಕ್ತಿ ಪಾಲಿಯ ಹತ್ತಿರದ ಊರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಆಗ ಬೈಕ್‌ನ ನಿಯಂತ್ರಣ ತಪ್ಪಿ ಬೈಕ್ ಮರವೊಂದಕ್ಕೆ ಢಿಕ್ಕಿ ಹೊಡೆದು ಈ ಅಪಘಾತದಲ್ಲಿ ಓಂ ಬನ್ನಾ ಅಸುನೀಗಿದರು. ಈ ಘಟನೆ ನಡೆದ ಮರುದಿನ ಸಮೀಪದ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ಓಂ ಬನ್ನಾರ ಬುಲೆಟ್ ಬೈಕ್ನ್ನು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದರು.
ಇದನ್ನೂ ಓದಿ: ಹೊಸ ಅವತಾರದಲ್ಲಿ ಭಾರತದ ಕಡಿಮೆ ಬೆಲೆಯ TVS ರೆಡಿಯಾನ್ ಬೈಕ್!
ಆದರೆ ಮರುದಿನ ಬೆಳಗೆ ಬೈಕ್ ಮತ್ತೆ ಆ ಘಟನಾ ಸ್ಥಳದಲ್ಲೇ ಪ್ರತ್ಯಕ್ಷವಾಗಿತ್ತು. ಪೊಲೀಸರು ಮತ್ತೆ ಅಲ್ಲಿಂದ ಬೈಕ್‌ನ್ನು ಪೊಲೀಸ್ ಠಾಣೆ ಕೊಂಡೊಯ್ದು ಬೈಕ್‌ನ ಪೆಟ್ರೋಲ್ ಖಾಲಿ ಮಾಡಿ, ಚೈನ್‌ನಿಂದ ಕಟ್ಟಿಹಾಕಿ ಇಡುತ್ತಿದ್ದರು. ಆದರೂ ಮರುದಿನ ಬೆಳಗ್ಗೆ ಬೈಕ್ ಮತ್ತೆ ಘಟನಾ ಸ್ಥಳದಲ್ಲೇ ಇರುತ್ತಿತ್ತು. ಇದರಿಂದ ಈ ಘಟನೆ ಬಗ್ಗೆ ಎಲ್ಲೆಡೆ ಮಾಹಿತಿ ಹಬ್ಬಿತು. ಎಲ್ಲೆಡೆ ಜನ ಬಂದು ಈ ತಾಣದ ಮಹತ್ವ ಕಣ್ತುಂಬಿಕೊಂಡರು. ನಂತರ ಬೈಕ್ ಗೆ ಇಲ್ಲೇ ಒಂದು ಮಂದಿರ ಕಟ್ಟಿದರು. ಓಂ ಬನ್ನಾನ ಆತ್ಮ ಇಲ್ಲಿದೆ ಎಂದು ಇಲ್ಲಿನ ಜನರು ನಂಬುತ್ತಾರೆ.
ಇಂದಿಗೂ ಜನರು ಇಲ್ಲಿ ಬಂದು ಬುಲೆಟ್ ದೇವನಲ್ಲಿ ಬೇಡಿಕೊಂಡು ಪ್ರಯಾಣ ಮಾಡಿದರೆ ಸುಖಕರ ಪ್ರಯಾಣ ನಿಮ್ಮದಾಗುತ್ತದೆ ಎಂದು ಹೇಳಲಾಗುತ್ತದೆ.