ಕೊಂಚ ಬದಲಾವಣೆಯೊಂದಿಗೆ ಬಿಎಸ್6 ಇಂಜಿನ್‌ನ ರಾಯಲ್ ಬೈಕು!
800 ಮಿಮೀ ಎತ್ತರ ಸೀಟು ಹತ್ತಿ ಕುಳಿತು ಸೈಡ್ ಸ್ಟ್ಯಾಂಡ್ ತೆಗೆದು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಹ್ಯಾಂಡಲ್ ಹಿಡಿದುಕೊಂಡರೆ ಒಂಥರಾ ರಾಯಲ್ ಫೀಲಿಂಗು ತನ್ನಿಂತಾನೇ ಆವರಿಸಿಕೊಳ್ಳುತ್ತದೆ. ಆಮೇಲಿದ್ದೆಲ್ಲಾ ಹಿಮಾಲಯನ್‌ಗೆ ಬಿಟ್ಟಿದ್ದು. ಕಲ್ಲಿರಲಿ ಮುಳ್ಳಿರಲಿ, ರಸ್ತೆ ಸಪಾಟಾಗಿರಲಿ ಉಬ್ಬು ತಗ್ಗುಗಳಿರಲಿ, ರಸ್ತೆ ಇರಲಿ ಇಲ್ಲದಿರಲಿ ಎಲ್ಲಿ ಬೇಕಾಗದರೆ ನುಗ್ಗಬಲ್ಲ, ಹಾರಬಲ್ಲ, ಹೇಳಿದ ತಕ್ಷಣ ಗಟ್ಟಿಯಾಗಿ ನಿಲ್ಲಬಲ್ಲ ಹಿಮಾಲಯ್ ಬೈಕ್ ಅಂದ್ರೆ ಆಫ್‌ರೋಡಲ್ಲಿ ಸುತ್ತುವವರಿಗೆಲ್ಲಾ ತುಸು ಜಾಸ್ತಿ ಪ್ರೀತಿ.
ನಾಲ್ಕು ವರ್ಷದ ಹಿಂದೆ ಮೊದಲ ಹಿಮಾಲಯನ್ ಬಂದಾಗಲೇ ಬೈಕ್ ಪ್ರೇಮಿಗಳು ಅದರತ್ತ ಕಣ್ಣಿಟ್ಟಿದ್ದರು. ಈಗ ಬಿಎಸ್ 6 ಬಂದಿದೆ. ಅದಕ್ಕೂ ಇದಕ್ಕೂ ಏನು ವ್ಯತ್ಯಾಸಗಳಿವೆ ಅನ್ನುವುದನ್ನು ಎನ್‌ಫೀಲ್ಡ್ ಮಂದಿ ಬಾಯಿ ಬಿಟ್ಟು ಏನೂ ಹೇಳಿಲ್ಲ. ಆದರೆ ಬೈಕ್ ಓಡಿಸಿದವರಿಗೆ ಎದ್ದು ಕಾಣುವ ವ್ಯತ್ಯಾಸ ಅಂತ ಅನ್ನಿಸುವುದು ಎಬಿಎಸ್. ಎಬಿಎಸ್ ಪವರ್ ಜಾಸ್ತಿ ಇದೆ. ಆಫ್‌ರೋಡಲ್ಲಿ ಓಡಿಸುವಾಗ ಅದು ಗಮನಕ್ಕೆ ಬರುತ್ತದೆ. ಉಳಿದಂತೆ ಇಂಜಿನ್ ಪವರ್ ಹೆಚ್ಚಾಗಿದೆ. ಸೈಡ್ ಸ್ಟಾಂಡು ಕೆಲ ಮಿಮೀ ಉದ್ದವಾಗಿದೆ. ಹಾಗಾಗಿ ಬೈಕು ನಿಲ್ಲಿಸುವಾಗ ಜಾಸ್ತಿ ಎಡಗಡೆಗೆ ವಾಲುವುದಿಲ್ಲ. ಬೈಕಿನ ಭಾರವೂ ಹಳೆಯದಕ್ಕಿಂತ ಕೊಂಚ ಜಾಸ್ತಿಯಾದರೂ ಓಡಿಸುವಾಗ ಎಲ್ಲವೂ ಒಂದೇ. ಹಾಗಾಗಿಯೇ ಹಿಮಾಲಯನ್ ಇರುವವರಿಗೆ ಗುರಿ ಇದ್ದರೆ ಸಾಕು, ದಾರಿ ಬೇಡ.
ಎದುರಿಗೆ ಡಿಜಿಟಲ್ ಕಂಪಾಸ್ ಇದೆ. ಕಂಪಾಸ್ ಬಳಸಲು ಗೊತ್ತಿರುವವರಿಗೆ ಯಾವ ದಿಕ್ಕಿನಲ್ಲಿ ನಾವು ಚಲಿಸುತ್ತಿದ್ದೇವೆ ಎಂಬ ಅಂದಾಜಿರುತ್ತದೆ. ಜೀವನದಲ್ಲೂ ಹೀಗೆ ಯಾವ ಕಡೆ ಹೋಗುತ್ತಿದ್ದೇವೆ ಎಂಬ ಅಂದಾಜು ಇದ್ದಿದ್ದರೆ ಒಳ್ಳೆಯದಿತ್ತು ಎಂದು ಕಂಪಾಸ್ ನೋಡುವಾಗೆಲ್ಲಾ ಅನ್ನಿಸುತ್ತಿರುತ್ತದೆ.
10 ಸಾವಿರಕ್ಕೆ ಬುಕ್ ಮಾಡಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ BS6 ಬೈಕ್!
ನಾವು 411 ಸಿಸಿಯ ಈ ಸುಂದರಿಯ ಜತೆ ಸಾಗಿದ್ದು ಕನಕಪುರದ ಕಡೆಗೆ. ಕೆಲವು ಕಡೆ ಉದ್ದಾನುಉದ್ದ ರಸ್ತೆ. ಸುಮಾರು ನೂರು ಕಿಮೀ ವೇಗದಲ್ಲಿ ಚಲಿಸಿದರು ಆರಾಮ ಯಾನ. ಅಲ್ಲಿಂದಾಚೆಗೆ ಗುಂಡಿ, ಹಂಪುಗಳ ರಸ್ತೆಯಲ್ಲಿ ಸಾಗಿದರೂ ಪಯಣ ಅಷ್ಟೊಂದು ಕಷ್ಟದಾಯಕವೇನಿಲ್ಲ. ಯಾಕೆಂದರೆ ಇದರ ಗ್ರೌಂಡ್ ಕ್ಲಿಯರೆನ್ಸ್ 220 ಮಿಮೀ ಇದೆ. ಹಂಪಲ್ಲಿ ಹಾರಿಸಿದರೂ ಎಫೆಕ್ಟುಗೊತ್ತಾಗುವುದಿಲ್ಲ. ಪಿಲಿಯನ್ ರೈಡರ್‌ಗೂ ಅಷ್ಟೊಂದು ತ್ರಾಸದಾಯಕ ಅನ್ನಿಸದಿರುವುದೂ ಹಿಮಾಲಯನ್‌ನ ಒಳ್ಳೆಯ ಗುಣಗಳಲ್ಲಿ ಒಂದು.
ಇಂಧನ ಟ್ಯಾಂಕು ಕೆಪಾಸಿಟಿ 15 ಲೀ, ಐದು ಸ್ಪೀಡ್ ಗೇರು, ಸಿಂಗಲ್ ಸಿಲಿಂಡರ್ ಫೋರ್ ಸ್ಟೊ್ರೕಕ್ ಇಂಜಿನ್ ಅನ್ನುವುದೆಲ್ಲಾ ಮಾಹಿತಿಗಳು. ಇದರ ಬೆಲೆ ಆರಂಭವಾಗುವುದೇ 1.89 ಲಕ್ಷದಿಂದ.(ಎಕ್ಸ್ ಶೋರೂಮ್) ನಿಮಗೆ ಯಾವುದು ಬೇಕು ಅನ್ನುವುದರ ಮೇಲೆ ಅಂತಿಮ ಬೆಲೆ ನಿರ್ಧಾರವಾಗುತ್ತದೆ.
ಹಿಮಾಲಯನ್ ಹತ್ತುವ ನಿರ್ಧಾರ ಮಾಡುವವರು ಭಾರೀ ಸ್ಪೀಡು ನಿರೀಕ್ಷೆ ಮಾಡಬಾರದು. ರಾಯಲ್ ಆಗಿ ಸಾಗಬೇಕು, ಕಾಡು ಮೇಡು ಹತ್ತಬೇಕು, ಟ್ರಾಫಿಕಲ್ಲೂ ಸಲೀಸಾಗಿ ಓಡಬೇಕು ಎನ್ನುವವರಷ್ಟೇ ಹಿಮಾಲಯನ್ ಜತೆ ಬದುಕುವ ನಿರ್ಧಾರ ತೆಗೆದುಕೊಳ್ಳಬಹುದು. ಇದರಲ್ಲಿ ಕುಳಿತರೆ ಸಾಕು ಹೆಮ್ಮೆಯ ಫೀಲ್ ಬರುತ್ತದೆ. ರಸ್ತೆಯಲ್ಲದ ರಸ್ತೆಗಳಲ್ಲೂ ಆರಾಮಾಗಿ ಸುತ್ತಬಹುದು. ಜನಜಂಗುಳಿಯ ರಸ್ತೆಯಲ್ಲೂ ಹಾವಿನಂತೆ ಚಲಿಸುವುದು ಇದಕ್ಕೆ ಗೊತ್ತು. ಹಾಗಾಗಿಯೇ ಇದಕ್ಕೆ ರಾಯಲ್ ಬೆಟ್ಟದ ಹೆಸರು. ಹಿಮಾಲಯನ್. ಹತ್ತಿ ಕುಳಿತವರು ಎತ್ತರದಲ್ಲಿ ಇರುತ್ತಾರೆ ಎನ್ನುವ ಭಾವ ಮೂಡಿಸುವುದೇ ಇದರ ತಾಕತ್ತು ಮತ್ತು ಹೆಚ್ಚುಗಾರಿಕೆ.