ಹೆಲ್ಮೆಟ್ ಹಾಕದ ಪೊಲೀಸ್: ಊರ ಜನರ ಮುಂದೆ ಮಾನ ಉಡೀಸ್!
ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ಹಲವು ಘಟನೆಗಳು ನಡೆದಿವೆ. ದುಬಾರಿ ದಂಡ ಪಾವತಿ, ನಿಯಮದ ಹೆರಸಲ್ಲಿ ಪೊಲೀಸರ ದರ್ಪ, ದಂಡ ನೋಡಿ ಬೈಕ್ ಸುಟ್ಟ ಪ್ರಕರಣ ಸೇರಿದಂತೆ ಹಲವು ಸುದ್ದಿಯಾಗಿವೆ. ಇದೀಗ ದೇಶವನ್ನೇ ಗಮನಸೆಳೆದ ವಿಚಿತ್ರ ಪ್ರಕರಣ ನಡೆದಿದೆ. ಪೊಲೀಸ್ ಇನ್ಸ್‌ಪೆಕ್ಟರ್ ತನಗೆ ತಾನೆ ಹೆಲ್ಮೆಟ್ ಹಾಕಿಲ್ಲ ಎಂದು ಬರೋಬ್ಬರಿ 5000 ರೂಪಾಯಿ ದಂಡ ಹಾಕಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶ(ಅ.08): ಹೊಸ ಟ್ರಾಫಿಕ್ ನಿಯಮಕ್ಕೆ ಜನರು ಒಗ್ಗಿಕೊಳ್ಳುತ್ತಿದ್ದಾರೆ. ದೆಹಲಿ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಸಂಖ್ಯೆ ಕಡಿಮೆಯಾಗುತ್ತಿದೆ. ಇದೇ ವೇಳೆ ದುಬಾರಿ ದಂಡ ಪಾವತಿಸಿ ಕಂಗಲಾದ ಸವಾರ, ದಂಡ ವಸೂಲಿ ಹೆಸರಲ್ಲಿ ಪೊಲೀಸರ ದರ್ಪ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಇದೀಗ ವಿಚಿತ್ರ ಪ್ರಕರಣ ದೇಶದ ಗಮನಸೆಳೆದಿದೆ. ಹೆಲ್ಮೆಟ್ ಹಾಕದ ಪೊಲೀಸ್, ತನಗೆ ತಾನೆ ದಂಡ ಹಾಕಿದ ಘಟನೆ ನಡೆದಿದೆ.
ಇದನ್ನೂ ಓದಿ: ಪ್ರವಾಹ ಸಂತ್ರಸ್ತರನ್ನು ಕಾಪಾಡಿದ ಜೀಪ್‌ಗೆ ಹಾಕಿದ್ರು ದಂಡ!
ಪೊಲೀಸ್ ತನಗೆ ತಾನೆ ಚಲನ್ ಹಾಕಿದ ಘಟನೆ ನಡೆದಿದ್ದು ಉತ್ತರ ಪ್ರದೇಶದ ಕಿವಾಡ ಗ್ರಾಮದಲ್ಲಿ. ಕಾನ್ಸ್‌ಸ್ಟೇಬಲ್ ಹಾಗೂ ಇನ್ಸ್‌ಪೆಕ್ಟರ್ ಇಬ್ಬರು ಸೇರಿ ಕಿವಾಡ ಗ್ರಾಮದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಬೈಕ್ ಸವಾರನಿಗೆ ಹೆಲ್ಮೆಟ್ ಹಾಕಿಲ್ಲ, ಅತೀ ವೇಗ ಸೇರಿದಂತೆ ಬರೋಬ್ಬರಿ 5,000 ರೂಪಾಯಿ ದಂಡ ಹಾಕಲಾಗಿದೆ. ದಂಡ ನೋಡಿ ಬೆಚ್ಚಿ ಬಿದ್ದ ಬೈಕ್ ಸವಾರ ಇನ್ಸ್‌ಪೆಕ್ಟರ್ ವಿರುದ್ದ ವಾಗ್ವಾದಕ್ಕಿಳಿದ. ಅಷ್ಟರಲ್ಲೇ ಗ್ರಾಮದ ಜನ ಅಲ್ಲಿ ಸೇರಿದ್ದರು.
ಇದನ್ನೂ ಓದಿ: ಹೊಸ ಟ್ರಾಫಿಕ್ ನಿಯಮ; ಹೊರಬಿತ್ತು ಕುತೂಹಲಕಾರಿ ಮಾಹಿತಿ!
ಠಾಣೆಯಿಂದ ಸುಮಾರು 8 ಕಿ.ಮೀ ದೂರದಲ್ಲಿ ಪೊಲೀಸರು ತಪಾಸಣೆ ಮಾಡುತ್ತಿದ್ದರು. ಠಾಣೆಯಿಂದ ಕಿವಾಡ ಗ್ರಾಮಕ್ಕೆ ಪೊಲೀಸರು ಬೈಕ್ ಮೇಲೆ ಬಂದಿದ್ದರು. ಹೀಗಾಗಿ ಗ್ರಾಮಸ್ಥರು ನೀವು ಠಾಣೆಯಿಂದ ಇಲ್ಲಿಗೆ ಬರುವಾಗ ಹೆಲ್ಮೆಟ್ ಹಾಕಿದ್ದೀರಾ? ತೋರಿಸಿ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಪೊಲೀಸರು ಹೆಲ್ಮೆಟ್ ಧರಿಸದೇ ಬಂದಿದ್ದರು. ಹೀಗಾಗಿ ಗ್ರಾಮಸ್ಥರ ಮುಂದೆ ಉತ್ತರವಿಲ್ಲದೆ ನಿಲ್ಲಬೇಕಾಯಿತು. ಇಷ್ಟಕ್ಕೆ ಸುಮ್ಮನಾಗದ ಗ್ರಾಮಸ್ಥರು, ನೀವು ಹೆಲ್ಮೆಟ್ ಹಾಕಿಲ್ಲ, ನಿಮ್ಮ ವಾಹನ ಹಾಗೂ ನಿಮ್ಮ ಹೆಸರಿಗೆ ಚಲನ್ ಹಾಕಿ ಎಂದು ಪಟ್ಟು ಹಿಡಿದಿದ್ದಾರೆ.
ನಿಯಮ ಉಲ್ಲಂಘಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಬೇರೆ ದಾರಿ ಕಾಣದೇ, ತನಗೆ ತಾನೆ ಚಲನ್ ನೀಡಬೇಕಾಯಿತು. ಬರೋಬ್ಬರಿ 5,000 ರೂಪಾಯಿ ದಂಡವನ್ನು ತನೆಗೆ ತಾನೇ ಹಾಕಿಕೊಳ್ಳಬೇಕಾಯಿತು. ಚಲನ್‌ನಲ್ಲಿ ಹೆಲ್ಮೆಟ್ ರಹಿತ ಪ್ರಯಾಣ ಅನ್ನೋ ಕಾಲಂ ಟಿಕ್ ಮಾಡಿದ್ದಾರೆ. ಈ ವೇಳೆ ಹಲವರು ಘಟನೆಯ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದೀಗ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಅನ್ನೋ ಕಾರಣಕ್ಕೆ ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ಪೊಲೀಸ್‌ನೊಳಗೊಬ್ಬ ಗೂಂಡಾ; ರಸೀದಿ ಕೇಳಿದ್ದಕ್ಕೆ ಗೂಸ!
ಅತ್ತ ತನಗೆ ತಾನೆ ಚಲನ್ ಹಾಕಿದ ಪೊಲೀಸ್ ದಂಡ ಕಟ್ಟಿರುವು ಕುರಿತು ಯಾವುದೇ ದಾಖಲೆ ಬಹಿರಂಗವಾಗಿಲ್ಲ. ಆದರೆ ಪೊಲೀಸರಿಗೆ ಚಲನ್ ಹಾಕಿಸಿದ ಗ್ರಾಮಸ್ಥರು ಇದೀಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಅನ್ನೋ ಕೇಸ್ ಬೀಳೋ ಆತಂಕದಲ್ಲಿದ್ದಾರೆ.