ಬೆಂಗಳೂರು(ನ.25): ಕನ್ನಡ ಚಿತ್ರರಂಗದ ದಿಗ್ಗಜ, ರಾಜಕಾರಣಿ ಅಂಬರೀಶ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಂಬರೀಶ್ ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡ ಕಲಾವಿದ. ಅದು ವ್ಯವಹಾರ, ಬ್ಯುಸಿನೆಸ್, ಕುದುರೆ ರೇಸ್..ಹೀಗೆ ಅಂಬಿಗೆ ಸರಿಸಾಟಿ ಯಾರು ಇಲ್ಲ. ಇದೇ ಅಂಬರೀಶ್‍‌ಗೆ ಕಾರು ಕ್ರೇಜ್ ಕೂಡ ತುಸು ಹೆಚ್ಚೇ ಇತ್ತು.

ಅಂಬರೀಶ್ ಕಾರು ಡ್ರೈವಿಂಗ್ ತುಂಬಾನೆ ಎಂಜಾಯ್ ಮಾಡುತ್ತಿದ್ದರು. ವೇಗವಾಗಿ ಕಾರು ಓಡಿಸುವುದು ಅಂಬರೀಷ್ ನೆಚ್ಚಿನ ಹವ್ಯಾಸವಾಗಿತ್ತು. ಅಂಬರೀಶ್ ಹಾಗೂ ಮೈಸೂರಿನ ಮಾಜಿ ಸಚಿವ ದಿವಂಗತ ಅಜೀಜ್ ಸೇಠ್ ಇಬ್ಬರೂ ತುಂಬಾ ಆತ್ಮೀಯ ಗೆಳೆಯರಾಗಿದ್ದರು. ಇವರಿಬ್ಬರಿಗೂ ಕಾರ್ ಕ್ರೇಜ್ ಹೆಚ್ಚೇ ಇತ್ತು.

ಸಚಿವ ಅಜೀಜ್ ಸೇಠ್ ತುರ್ತು ಸಂದರ್ಭದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಿತ್ತು. ಈ ವೇಳೆ ತಾವೇ ಖುದ್ದಾಗಿ ಕಾರು ಚಲಾಯಿಸಿಕೊಂಡು ಬಂದಿದ್ದರು. ಕೇವಲ 2 ಗಂಟೆ 10 ನಿಮಿಷದಲ್ಲಿ ಮೈಸೂರಿನಿಂದ ಬೆಂಗಳೂರು ತಲುಪಿದ್ದರು. 

ಈ ಸಾಧನೆಯನ್ನ ಅಜೀಜ್ ಸೇಠ್ ಫೋನ್ ಮೂಲಕ ಅಂಬರೀಶ್‌ಗೆ ತಿಳಿಸಿದರು.  ಇಷ್ಟೇ ಅಲ್ಲ, ಮೈಸೂರಿನಲ್ಲಿದ್ದ ಅಂಬರೀಶ್‌ಗೆ ನನ್ನ ದಾಖಲೆ ಮುರಿಯಲು ಸಾಧ್ಯವಿಲ್ಲ ಎಂದು ಸೇಠ್ ಸವಾಲು ಎಸೆದಿದ್ದರು. ಡ್ರೈವ್‌ನಲ್ಲಿ ನನಗೆ ಸವಾಲು ಎಸೆಯುತ್ತೀಯಾ? ಸದ್ಯ ಬೆಂಗಳೂರಿನಲ್ಲಿ ಎಲ್ಲಿದ್ದಿಯಾ? ಈಗ ಸಮಯ ಎಷ್ಟು? ಗಂಟೆ ಸರಿಯಾಗಿ ನೋಡಿಕೋ ಇನ್ನೆರಡು ಗಂಟೆಯಲ್ಲಿ ಅಲ್ಲಿರುತ್ತೇನೆ ಎಂದು ಸವಾಲು ಹಾಕಿದ ಅಂಬರೀಷ್ ಕಾರಿನಲ್ಲಿ ಹೊರಟೆ ಬಿಟ್ಟರು.

ಅಂದು ಮೈಸೂರು ಬೆಂಗಳೂರು ರಸ್ತೆ ಈಗಿನಂತೆ ಟು ವೇ ಆಗಿರಲಿಲ್ಲ. ಒನ್‌ವೇ ಆಗಿದ್ದ ರಸ್ತೆಯಲ್ಲಿ ಭಾರಿ ಅಫಘಾತಗಳು ಸಂಭವಿಸುತ್ತಿತ್ತು. ಹೀಗಾಗಿ ಇದು ಅಪಾಯಕಾರಿ ರಸ್ತೆ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಆದರೆ ಅಂಬರೀಶ್ ಇನ್ನು ಒಂದು ನಿಮಿಷ ಬಾಕಿ ಇರುವಂತೆ ಅಂಬರೀಶ್ ಬೆಂಗಳೂರು ತಲುಪೇ ಬಿಟ್ಟರು. ಅದು ಕೂಡ ಅಜೀಜ್ ಸೇಠ್ ಇರುವು ಸ್ಥಳಕ್ಕೆ ಆಗಮಿಸಿದ್ದರು. ಅಜೀಜ್ ಸೇಠ್ ಸ್ಥಳಕ್ಕೆ ಆಗಮಿಸಿದ ಅಂಬಿ, ಇನ್ನೇನಾದರೂ ಚಾಲೆಂಜ್ ಇದೆಯಾ ಎಂದು ಕೇಳಿದ್ದರು.