ಭುವನೇಶ್ವರ [ಸೆ.09]: ಸಂಚಾರ ನಿಯಮ ಉಲ್ಲಂಘನೆ ಆರೋಪದ ಮೇರೆಗೆ ಟ್ರಕ್‌ ಚಾಲಕರೊಬ್ಬರಿಗೆ ಒಡಿಶಾ ಸಂಬಾಲ್‌ಪುರ ಜಿಲ್ಲೆಯಲ್ಲಿ ಬರೋಬ್ಬರಿ 86,500 ರು. ದಂಡ ವಿಧಿಸಲಾಗಿದೆ. ನೂತನ ಮೋಟಾರ್‌ ಕಾಯ್ದೆ ಜಾರಿಯಾದ ಬಳಿಕ ವ್ಯಕ್ತಿಯೊಬ್ಬರಿಗೆ ವಿಧಿಸಲಾದ ಅತಿಹೆಚ್ಚು ಪ್ರಮಾಣದ ದಂಡದ ಮೊತ್ತ ಇದಾಗಿದೆ ಎಂದು ಹೇಳಲಾಗಿದೆ.

ಟ್ರಕ್‌ ಚಾಲಕ ಅಶೋಕ್‌ ಜಾಧವ್‌ ಎಂಬುವರಿಗೆ ಸೆ.3ರಂದು ಈ ಭಾರೀ ಪ್ರಮಾಣದ ದಂಡ ಹೇರಲಾಗಿದ್ದು, ಈ ಕುರಿತಾದ ಚಲನ್‌ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ. ಅನಧಿಕೃತ ವ್ಯಕ್ತಿಗಳಿಗೆ ವಾಹನ ಚಾಲನೆಗೆ ಅವಕಾಶ ನೀಡಿದ್ದಕ್ಕೆ 5000 ರು. ದಂಡ, ಲೈಸೆನ್ಸ್‌ ರಹಿತ ಚಾಲನೆಗೆ 5000 ರು., ಓವರ್‌ಲೋಡಿಂಗ್‌ಗೆ 56 ಸಾವಿರ ರು. ಸೇರಿದಂತೆ ಒಟ್ಟಾರೆ 86,500 ರು. ದಂಡ ವಿಧಿಸಲಾಗಿತ್ತು. ಆದರೆ, ಪೊಲೀಸರ ಜೊತೆ ಸತತ 5 ತಾಸುಗಳಿಗಿಂತ ಹೆಚ್ಚು ಕಾಲ ಚೌಕಾಸಿ ಮಾಡಿದ ಟ್ರಕ್‌ ಚಾಲಕ 86,500 ರು. ಪೈಕಿ 70 ಸಾವಿರ ದಂಡ ಕಟ್ಟಿದ್ದಾರೆ.

ಟ್ರಕ್‌ನಲ್ಲಿ ಏನಿತ್ತು?:

ನಾಗಾಲ್ಯಾಂಡ್‌ ಮೂಲದ ಬಿಎಲ್‌ಎ ಇನ್ಫ್ರಾಸ್ಟ್ರಕ್ಚರ್‌ ಪ್ರೈ.ಲಿ.ಗೆ ಸೇರಿದ ಈ ಟ್ರಕ್‌ನಲ್ಲಿ ಸಂಸ್ಥೆಗೆ ಸೇರಿದ ಜೆಸಿಬಿ ಯಂತ್ರ ಸಾಗಿಸಲಾಗುತ್ತಿತ್ತು. ಒಡಿಶಾದ ಅಂಗುಲ್‌ ಜಿಲ್ಲೆಯ ತಾಲ್ಚೇರ್‌ನಿಂದ ಛತ್ತೀಸ್‌ಗಢಕ್ಕೆ ತೆರಳುತ್ತಿದ್ದ ವೇಳೆ ಟ್ರಕ್‌ ಸಂಚಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿತ್ತು.