Asianet Suvarna News Asianet Suvarna News

ಮುಂದಿನ ವರ್ಷದಿಂದ ಮಾರುತಿ ಡೀಸೆಲ್‌ ಕಾರಿಲ್ಲ

ಮುಂದಿನ ವರ್ಷದಿಂದ ಮಾರುತಿ ಡೀಸೆಲ್‌ ಕಾರಿಲ್ಲ| ಕಠಿಣ ನಿಯಮ ಒಳಗೊಂಡ ಬಿಎಸ್‌ 6 ನಿಯಮ ಜಾರಿ ಹಿನ್ನೆಲೆ| ಎಲ್ಲಾ ಮಾದರಿಯ ಡೀಸೆಲ್‌ ಕಾರು ಉತ್ಪಾದನೆ ಸ್ಥಗಿತಕ್ಕೆ ನಿರ್ಧಾರ

No more diesel cars from Maruti from next April
Author
Bangalore, First Published Apr 26, 2019, 11:28 AM IST

ನವದೆಹಲಿ[ಏ.26]: ದೇಶದ ಮುಂಚೂಣಿ ಆಟೋಮೊಬೈಲ್‌ ಕಂಪನಿಯಾದ ಮಾರುತಿ ಸುಝಕಿ, 2020ರ ಏ.1ರಿಂದ ತನ್ನೆಲ್ಲಾ ಮಾದರಿಯ ಡೀಸೆಲ್‌ ಕಾರುಗಳ ಉತ್ಪಾದನೆ ಸ್ಥಗಿತಕ್ಕೆ ನಿರ್ಧರಿಸಿದೆ. ಮುಂದಿನ ವರ್ಷದಿಂದ ವಾಹನಗಳಿಗೆ ಕಠಿಣ ನಿಯಮಗಳನ್ನು ಒಳಗೊಂಡ ಬಿಎಸ್‌-6 ಮಾನದಂಡ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಂಪನಿ ಈ ನಿರ್ಧಾರ ಪ್ರಕಟಿಸಿದೆ.

ಮಾರುತಿ ಕಂಪನಿ ಒಟ್ಟಾರೆ ವಾಹನ ಮಾರಾಟದಲ್ಲಿ ಡೀಸೆಲ್‌ ಕಾರುಗಳ ಪಾಲು ಶೇ.23ರಷ್ಟಿದೆ. ಕಳೆದ ವರ್ಷ ಕಂಪನಿ 4.63 ಲಕ್ಷ ಡೀಸೆಲ್‌ ವಾಹನಗಳನ್ನು ಮಾರಾಟ ಮಾಡಿತ್ತು. ಹೊಸ ನಿರ್ಧಾರದ ಅನ್ವಯ 2020ರ ಏ.1ರಿಂದ ಕಂಪನಿಯು ಕೇವಲ ಪೆಟ್ರೋಲ್‌ ಮತ್ತು ಸಿಎನ್‌ಜಿ ಆವೃತ್ತಿಯ ವಾಹನ ಮಾತ್ರ ಉತ್ಪಾದಿಸಲಿದೆ. ಒಂದು ವೇಳೆ ಬಿಎಸ್‌ 6 ಮಾನದಂಡಕ್ಕೆ ಹೊಂದಿಕೊಳ್ಳುವ ವಾಹನಗಳಿಗೆ ಬೇಡಿಕೆ ಬಂದರೆ, ಆಗ ಅಂಥ ಮಾದರಿಯ ಕಾರು ಉತ್ಪಾದನೆ ಕೈಗೊಳ್ಳಲಾಗುವುದು ಎಂದು ಕಂಪನಿಯ ಅಧ್ಯಕ್ಷ ಆರ್‌.ಸಿ.ಭಾರ್ಗವ ಪ್ರಕಟಿಸಿದ್ದಾರೆ.

ಹಾಲಿ ಕಂಪನಿಯ ಪ್ರಯಾಣಿಕ ವಾಹನಗಳ ಪೈಕಿ ಶೇ.50ಕ್ಕಿಂತ ಹೆಚ್ಚು ಮಾದರಿಗಳು ಡೀಸೆಲ್‌ ಆವೃತ್ತಿಯಲ್ಲೂ ಲಭ್ಯವಿದೆ. ಸುಝಕಿ ಸ್ವಿಫ್ಟ್‌, ಡಿಝೈರ, ಬಲೆನೋ, ಎರ್ಟಿಗಾ, ಸಿಯಾಜ್‌, ಎಸ್‌-ಕ್ರಾಸ್‌ ಮತ್ತು ವಿತರಾ ಬ್ರೆಜಾ ಕಾರುಗಳು ಡೀಸೆಲ್‌ ಆವೃತ್ತಿಯಲ್ಲೂ ಲಭ್ಯವಿಂಟು.

ಪ್ರಸಕ್ತ ಕಂಪನಿಯು 1.3 ಲೀಟರ್‌ ಮತ್ತು 1.5 ಲೀಟರ್‌ನ ಡೀಸೆಲ್‌ ಎಂಜಿನ್‌ ಹೊಂದಿದೆ. ಈ ಎರಡೂ ಎಂಜಿನ್‌ಗಳು ಬಿಎಸ್‌ 6 ಮಾನದಂಡ ಪೂರೈಸುವುದಿಲ್ಲ. ಇನ್ನು 1.5 ಲೀಟರ್‌ ಎಂಜಿನ್‌ ಅನ್ನು ಬಿಎಸ್‌ 6ಗೆ ಹೊಂದಿಕೊಳ್ಳುವಲ್ಲಿ ಮಾಡಲು ಹೆಚ್ಚಿನ ಸಂಶೋಧನೆ ಮತ್ತು ವೆಚ್ಚ ಅಗತ್ಯ. ಅದು ಫಲಪ್ರದವಾಗುವುದು ತಕ್ಷಣಕ್ಕೆ ಕಷ್ಟಸಾಧ್ಯ. ಒಂದು ವೇಳೆ ಅಂಥ ಎಂಜಿನ್‌ ಅಭಿವೃದ್ಧಿಪಡಿಸಿದರೂ, ಅದು ದುಬಾರಿಯಾಗಲಿದೆ. ಅದು ಪೆಟ್ರೋಲ್‌ ಮತ್ತು ಡೀಸೆಲ್‌ ಮಾದರಿ ನಡುವಿನ ದರ ವ್ಯತ್ಯಾಸ ಮತ್ತಷ್ಟುಹೆಚ್ಚಳಕ್ಕೆ ಕಾರಣವಾಗಲಿದೆ. ಹೀಗಾಗಿ ತಕ್ಷಣಕ್ಕೆ ತನ್ನೆಲ್ಲಾ ಮಾದರಿಯ ಡೀಸೆಲ್‌ ಕಾರು ಉತ್ಪಾದನೆಗೆ ಮಾರುತಿ ನಿರ್ಧರಿಸಿದೆ.

ಡೀಸೆಲ್‌ ಮಾದರಿ ಸ್ಥಗಿತಕ್ಕೆ ಹಲವು ಕಾರಣಗಳು

- ಬಿಎಸ್‌ 6 ಮಾನದಂಡ ಜಾರಿಯಾಗುತ್ತಿರುವುದು

- ಪೆಟ್ರೋಲ್‌ ಮತ್ತು ಡೀಸೆಲ್‌ ದರ ವ್ಯತ್ಯಾಸ ಇಳಿದ ಬಳಿಕ ಪೆಟ್ರೋಲ್‌ ಮಾದರಿಗೆ ಜನರ ಹೆಚ್ಚು ಒಲವಿನ ಹಿನ್ನೆಲೆ

- 10 ವರ್ಷಕ್ಕಿಂತ ಹಳೆಯ ಡೀಸೆಲ್‌ ವಾಹನ ಸಂಚಾರಕ್ಕೆ ದೆಹಲಿ ಸುತ್ತಮುತ್ತ ನಿಷೇಧ ಜಾರಿಯಾಗಿರುವ ಹಿನ್ನೆಲೆ

- ಹಳೆ ವಾಹನ ನಿಷೇಧದ ಹಿನ್ನೆಲೆಯಲ್ಲಿ ಕಾರುಗಳ ಮರು ಮಾರಾಟ ದರ ಕಡಿತಗೊಳ್ಳುತ್ತಿರುವುದು

Follow Us:
Download App:
  • android
  • ios