2020 ರಿಂದ ಮಾರುತಿ ಓಮ್ನಿ ಕಾರು ಸ್ಥಗಿತ
ಮಾರುತಿ ಓಮ್ನಿ ಕಾರು 2020 ರ ನಂತರ ರಸ್ತೆಗಿಳಿಯಲ್ಲ | ‘ಮಾರುತಿ ಓಮ್ನಿ’ ಉತ್ಪಾದನೆಯನ್ನು 2020 ರ ಅಕ್ಟೋಬರ್‌ನಿಂದ ನಿಲ್ಲಿಸಲು ಮಾರುತಿ ಸುಝುಕಿ ಕಂಪನಿ ನಿರ್ಧರಿಸಿದೆ.
ನವದೆಹಲಿ (ಅ. 27): ತನ್ನ ಜನಪ್ರಿಯ ಬ್ರ್ಯಾಂಡ್ ‘ಮಾರುತಿ ಓಮ್ನಿ’ ಉತ್ಪಾದನೆಯನ್ನು 2020 ರ ಅಕ್ಟೋಬರ್‌ನಿಂದ ನಿಲ್ಲಿಸಲು ಮಾರುತಿ ಸುಝುಕಿ ಕಂಪನಿ ನಿರ್ಧ ರಿಸಿದೆ.
2020 ರ ಅಕ್ಟೋಬರ್‌ನಿಂದ ವಾಹನ ಸುರಕ್ಷತೆಗೆ ಸಂಬಂಧಿಸಿದ ‘ಭಾರತ್ ಹೊಸ ವಾಹನ ಸುರಕ್ಷತಾ ಮೌಲ್ಯಮಾಪನ ಯೋಜನೆ’ ಆರಂಭವಾಗಲಿದ್ದು, ಅಂದಿನಿಂದ ಹಲವು ವಾಹನಗಳ ಉತ್ಪಾದನೆ ಸ್ಥಗಿತವಾಗಲಿದೆ. ಅದರಲ್ಲಿ ಮಾರುತಿ ಓಮ್ನಿ ಕೂಡ ಒಂದು’ ಎಂದು ಮಾರುತಿ ಸುಝುಕಿ ಇಂಡಿಯಾ ಚೇರ್ಮನ್ ಆರ್.ಸಿ. ಭಾರ್ಗವ ಹೇಳಿದ್ದಾರೆ.
1983 ರಲ್ಲಿ ಮಾರುತಿ 800 ಕಾರುಗಳನ್ನು ಬಿಡುಗಡೆ ಮಾಡಿತ್ತು. 1984 ರಲ್ಲಿ ಮಾರುತಿ ಸುಝುಕಿ ಕಂಪನಿಯ ಎರಡನೇ ಉತ್ಪನ್ನವಾಗಿ ಮಾರುತಿ ವ್ಯಾನ್ ಬಿಡುಗಡೆಯಾಗಿತ್ತು. 1998 ರಲ್ಲಿ ಕಾರಿನ ಹೆಸರನ್ನು ಮಾರುತಿ ಓಮ್ನಿ ಎಂದು ಬದಲಾಯಿಸಲಾಗಿತ್ತು. ಕಳೆದ 34 ವರ್ಷಗಳಲ್ಲಿ ಮೂಲ ಕಾರಿನ ಮಾದರಿಯಲ್ಲಿ ಕೇವಲ 2 ಬಾರಿ ಮಾತ್ರ ಬದಲಾವಣೆ ಮಾಡಲಾಗಿತ್ತು.
1998 ರಲ್ಲಿ ಹೆಡ್‌ಲ್ಯಾಂಪ್ ಮತ್ತು ೨೦೦೫ರಲ್ಲಿ ಕಾರಿನ ಮುಂಭಾಗ ಮತ್ತು ಡ್ಯಾಶ್ ಬೋರ್ಡ್‌ನಲ್ಲಿ ಸಣ್ಣ ಬದಲಾವಣೆ ಮಾಡಲಾಗಿತ್ತು.
ವಿನ್ಯಾಸ ಬದಲು:
ಇದೇ ವೇಳೆ, ಮಾರುತಿ ಇಕೋ ಆಲ್ಟೋ-೮೦೦ದಲ್ಲೂ ಸುರಕ್ಷತೆಗೆ ಸಂಬಂಧಿಸಿದ ದೋಷಗಳಿದ್ದು, ಅವುಗಳ ವಿನ್ಯಾಸದಲ್ಲಿ ಬದಲಾವಣೆ ಮಾಡಿ, ಸುರಕ್ಷತಾ ಮಾನದಂಡ ಪಾಲನೆಯಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
2010 ರ ವೇಳೆಗೆ ಎಲ್ಲಾ ವಾಹನಗಳೂ ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಅಂದರೆ ಅಪಘಾತದ ವೇಳೆ ವಾಹನ ಒಳಗಿನ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸುವುದು ಈ ಮಾನದಂಡ ಉದ್ದೇಶ.
ಆದರೆ ಮಾರುತಿ ಓಮ್ನಿ ಕಾರಿನ ಮುಂಭಾಗ ಅತ್ಯಂತ ನೇರವಾಗಿದ್ದು, ಅಪಘಾತದ ಸಂದರ್ಭದಲ್ಲಿ ಕಾರಿನ ಒಳಗಿದ್ದವರಿಗೆ ಯಾವುದೇ ಸುರಕ್ಷತೆ ಇರದು. ಹೊಸ ಮಾನದಂಡ ಅಳವಡಿಸಲು ಓಮ್ನಿ ಮಾಡೆಲ್‌ನಲ್ಲಿ ಸಾಧ್ಯವಿಲ್ಲ. ಹೀಗಾಗಿ ಈ ಮಾಡೆಲ್ ಅನ್ನೇ ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ.