ಬೆಂಗಳೂರು(ಡಿ.02): ಕಡಿದಾದ ಬೆಟ್ಟದ ಏರು ಹಾದಿಯ ಬುಡದಲ್ಲಿ ಕಾರು ನಿಂತಿತ್ತು. ಆ ಪುಟ್ಟಬೆಟ್ಟದ ಮಧ್ಯೆ ಹಾದಿ ತುಂಬಾ ಕಲ್ಲುಗಳು. ಅದನ್ನು ದಾಟಬೇಕಿದ್ದರೆ ಜೋರಾಗಿ ಆ್ಯಕ್ಸಿಲೇಟರ್‌ ತುಳಿಯಬೇಕಿತ್ತು. ಆದರೆ ಬೆಟ್ಟದ ತುದಿಯಲ್ಲಿ ಎಡಬದಿಗೆ ರಸ್ತೆ ಇದೆ. ರಸ್ತೆಯ ಆಚೆ ಕೆರೆ ಇದೆ. ವೇಗವಾಗಿ ಹೋದರೆ ಕಾರು ಆ ಕೆರೆಗೆ ನುಗ್ಗುತ್ತದೆ. ಆ್ಯಕ್ಸಿಲೇಟರ್‌ ಜೋರಾಗಿ ತುಳಿಯುವಂತಿಲ್ಲ, ತುಳಿಯದೆ ಇರುವಂತಿಲ್ಲ. ಪಕ್ಕದಲ್ಲಿ ಕುಳಿತಿದ್ದ ಇನ್‌ಸ್ಟ್ರಕ್ಟರ್‌ ಮತ್ತೆ ಹೇಳಿದ- ಲ್ಯಾಂಡ್‌ರೋವರ್‌ ಕಾರನ್ನು ನಂಬು.

ಇದನ್ನೂ ಓದಿ: 1.3 ಕೋಟಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಸಿದ ನಟಿ ದಿಶಾ ಪಟಾನಿ!

ಸಣ್ಣಗೆ ಆ್ಯಕ್ಸಿಲೇಟರ್‌ ಕೊಡಲಾಯಿತು. ಕಾರು ಮುಂದೆ ಹೋಯಿತು. ಮತ್ತೊಂಚೂರು ಆ್ಯಕ್ಸಿಲೇಟರ್‌. ಕಾರು ಸಾಗುತ್ತಿದೆ. ಇನ್ನೇನು ಕಲ್ಲು ರಾಶಿ ಸಿಕ್ಕಿಯೇಬಿಟ್ಟಿತು. ವೇಗ ಹೆಚ್ಚಿಸುವಂತಿಲ್ಲ, ಅದೇ ವೇಗದಲ್ಲಿ ಮುಂದೆ ಹೋಗಬೇಕು. ಕಾರು ಹೋಯಿತು ಹೋಯಿತು, ಒಂಚೂರು ಸ್ಪೀಡ್‌ ಜಾಸ್ತಿ ಆಯಿತು. ಬೆಟ್ಟದ ತುದಿಗೆ ಬಂತು. ಸ್ವಲ್ಪ ಲಾಂಗ್‌ ಕಟ್‌. ಕಾರು ಎಡಬದಿಗೆ ತಿರುಗಿತು. ಅಬ್ಬಾ! ಸೇಫ್‌. ಒಂದು ಟಾಸ್ಕ್‌ ಮುಗಿಯಿತು. ಇನ್ನೊಂದು ಇದಕ್ಕಿಂತ ಚಾಲೆಂಜಿಂಗ್‌.

ಸ್ವಲ್ಪ ದೂರ ಹೋದ ಮೇಲೆ ಎಡಬದಿಗೆ ಕಣಿವೆಯಂತಹ ರಸ್ತೆ. ಅಲ್ಲಿ ಕಾರನ್ನು ಇಳಿಸುವುದು ಅಸಾಧ್ಯ ಸವಾಲು. ಮತ್ತದೇ ಮಾತು ಕೇಳಿಬಂತು. ಲ್ಯಾಂಡ್‌ರೋವರ್‌ ಅನ್ನು ನಂಬು.

ಹಿಲ್‌ ಡಿಸೆಂಟ್‌ ಕಂಟ್ರೋಲ್‌ ಮೋಡ್‌ ಆನ್‌ ಆಯಿತು. ಆ ಮೋಡ್‌ ಆನ್‌ ಇದ್ದರೆ ಕಾರು ಬ್ರೇಕ್‌ ಒತ್ತದೇ ಇದ್ದರೂ ಅಟೋಮ್ಯಾಟಿಕ್‌ ಆಗಿ ತನಗೆ ಎಷ್ಟುಬೇಕು ಅಷ್ಟೇ ಬ್ರೇಕ್‌ ಒತ್ತಿಕೊಂಡು ಮುಂದೆ ಸಾಗುತ್ತದೆ. ಆದರೆ ಇಳಿಜಾರಿನತ್ತ ಇಳಿಯುವಾಗ ಮಾತ್ರ ಬ್ರೇಕನ್ನು ಪೂರ್ತಿ ಒತ್ತಬೇಕು. ನಿಧಾನವಾಗಿ ಎಡಗಡೆಗೆ ಸ್ಟೇರಿಂಗ್‌ ತಿರುಗಿತು. ಮುಂಭಾಗದ ಎಡಬದಿಯ ಟೈರು ಕಣಿವೆ ರಸ್ತೆಗೆ ಇಳಿಯಿತು. ಮುಂಭಾಗ ಬಲಬದಿ ಟೈರು ಕೂಡ ಕಣಿವೆ ಕಡೆ ನುಗ್ಗಿತು. ಬ್ರೇಕ್‌ ಒತ್ತಿದ್ದರಿಂದ ಸ್ವಲ್ಪ ಜಾರಿತು. ಮುಂದೆ ಹೋಗುತ್ತಿದ್ದಂತೆ ಹಿಂಭಾಗದ ಎಡಬದಿ ಟೈರು ಕೂಡ ರಸ್ತೆಗೆ ಬಂತು. ಆದರೆ ಈಗ ಹಿಂಬದಿಯ ಬಲಭಾಗದ ಟೈರು ಮಾತ್ರ ನೆಲದಿಂದ ನಾಲ್ಕು ಅಡಿ ಮೇಲೆ ಇತ್ತು. ಪೂರ್ತಿ ಕಾರು ಕೆಳಕ್ಕೆ ವಾಲಿತ್ತು.

ಇದನ್ನೂ ಓದಿ: ಕತ್ರಿನಾ ಕೈಫ್ ಮನೆಗೆ ಹೊಸ ಅತಿಥಿ - 2.33 ಕೋಟಿ ಖರ್ಚು!.

ತುಂಬಾ ತುಂಬಾ ನಿಧಾನವಾಗಿ ಕಾರು ಮುಂದೆ ಹೋದಂತೆ ಟೈರು ನೆಲಕ್ಕೆ ಬಂದಿತ್ತು. ಕಾರು ಇಳಿಜಾರು ರಸ್ತೆಯನ್ನು ಪ್ರವೇಶಿಸಿತು. ಉಳಿದಿದ್ದು ಇಳಿಜಾರು. ಉಳಿಸಿದ್ದು ಅಚ್ಚರಿ.

ಲ್ಯಾಂಡ್‌ರೋವರ್‌ ಡ್ರೈವಿಂಗ್‌ ಟೂರ್‌
ಇದೆಲ್ಲಾ ನಡೆದಿದ್ದು ಲ್ಯಾಂಡ್‌ರೋವರ್‌ ಕಂಪನಿ ಆಯೋಜಿಸಿದ್ದ ದಿ ಅಬೋವ್‌ ಆ್ಯಂಡ್‌ ಬಿಯಾಂಡ್‌ ಎಂಬ ಟೂರ್‌ನಲ್ಲಿ. ಲ್ಯಾಂಡ್‌ರೋವರ್‌ನವರು ಬೇರೆ ಬೇರೆ ಪ್ರದೇಶದಲ್ಲಿ ಲ್ಯಾಂಡ್‌ರೋವರ್‌ ಕಾರಿನ ಆಫ್‌ರೋಡ್‌ ಡ್ರೈವಿಂಗ್‌ ಎಕ್ಸ್‌ಪೀರಿಯನ್ಸ್‌ ಮಾಡುವ ಕಾರ್ಯಕ್ರಮ ಆಯೋಜಿಸುತ್ತಾರೆ. ಆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲೂ ನಡೆಯಿತು. ಸಾಮಾನ್ಯ ಮಣ್ಣಿನ ರಸ್ತೆ, ಹುಲ್ಲುಗಳು ತುಂಬಿರುವ ಸ್ವಲ್ಪ ಜಾರು ರಸ್ತೆ, ನೀರು ತುಂಬಿರುವ ಪ್ರದೇಶ, ಕಲ್ಲುಗಳೇ ತುಂಬಿರುವ ದುರ್ಗಮ ಹಾದಿ, ಭಯಂಕರ ಕಡಿದಾದ ಬೆಟ್ಟ, ಭಯಗೊಳಿಸುವ ಇಳಿಜಾರು ಹಾದಿ ಇಲ್ಲೆಲ್ಲಾ ಕಾರು ಓಡಿಸುವ ಸವಾಲು ಇತ್ತು. ಒಬ್ಬ ಇನ್‌ಸ್ಟ್ರಕ್ಟರ್‌ ಪಕ್ಕದಲ್ಲಿ ಕುಳಿತು ಸಲಹೆ ಕೊಡುತ್ತಾನೆ. ಚಾಲಕ ಅವನ ಸಲಹೆ ಕೇಳುತ್ತಾ ತನ್ನ ವಿವೇಚನೆ ಬಳಸಿ ಡ್ರೈವ್‌ ಮಾಡಬೇಕು. ಆದರೆ ಲ್ಯಾಂಡ್‌ರೋವರ್‌ ಕಾರು ಎಂತಹ ಬಲಶಾಲಿ ಎಂದರೆ ಅದನ್ನು ಸರಿಯಾಗಿ ಪಳಗಿಸಿದರೆ, ಪ್ರೀತಿಯಿಂದ ಡ್ರೈವ್‌ ಮಾಡಿದರೆ ಎಂಥಾ ರಸ್ತೆಯಲ್ಲಿ ಹೇಗೆ ಬೇಕಾದರೂ ಹೋಗಬಹುದು. ಕೇಳಿದಂತೆ ಕೇಳುತ್ತದೆ. ಹೇಳದೇ ಇದ್ದರೂ ನಿಮ್ಮ ದಾರಿ ಸರಿ ಇರುವಂತೆ ನೋಡಿಕೊಳ್ಳುತ್ತದೆ. ಕಾಡು-ಮೇಡು-ನದಿ ಯಾವುದೂ ಅದಕ್ಕೆ ಲೆಕ್ಕಕ್ಕೆ ಇಲ್ಲ.

ಅಂದಹಾಗೆ ನಮ್ಮ ಪಯಣಕ್ಕೆ ಜತೆಯಾಗಿದ್ದು ಲ್ಯಾಂಡ್‌ರೋವರ್‌ ಇವೋಕ್‌. 2.0 ಲೀ ಸಾಮರ್ಥ್ಯದ 4 ಸಿಲಿಂಡರ್‌ ಪೆಟ್ರೋಲ್‌ ಇಂಜಿನ್‌ ಹೊಂದಿರುವ ಕಾರು ಅದು. 215 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್‌ ಇದೆ. ಹಾಗಾಗಿ ಎರಡು ಟೈರು ಎತ್ತರದಲ್ಲೂ ಎರಡು ಟೈರು ನೆಲದಲ್ಲೂ ಇರುವಂತೆ, ಮೂರು ಟೈರು ಗಾಳಿಯಲ್ಲೂ ಇರುವಂತೆ ಆರಾಮಾಗಿ ಓಡಿಸಬಹುದು. ಹೊರಗೆ ಚೆಂದ ಕಾಣುತ್ತದೆ. ಒಳಗೆ ಆರಾಮಾಗಿ ಕೂರುವಂತಹ ವ್ಯವಸ್ಥೆ ಇದೆ. ಎಷ್ಟುದೂರ ಬೇಕಾದರೂ ಸಂತೋಷವಾಗಿ ಸಾಗಬಹುದು. ಹೈವೇಯಲ್ಲಿ ವೇಗ, ಆಫ್‌ರೋಡಲ್ಲಿ ದೃಢತೆ ಇದರ ಪ್ಲಸ್ಸು.

ಬೆಸ್ಟ್‌ ಆಫ್‌ರೋಡ್‌ ಕಾರು ಬೇಕು ಅನ್ನುವವರು ಒಮ್ಮೆ ಲ್ಯಾಂಡ್‌ರೋವರ್‌ ಕಾರುಗಳನ್ನು ಡ್ರೈವ್‌ ಮಾಡಿ ನೋಡಬಹುದು. ಆ ಕಾರು ಖುಷಿ ಕೊಡುವುದು ನಿಶ್ಚಿತ.

ಕಾರು ಮಾಡೆಲ್‌ಗಳು
ಡಿಸ್ಕವರಿ ಸ್ಪೋರ್ಟ್‌- ಆರಂಭಿಕ ಬೆಲೆ ರು. 44.68 ಲಕ್ಷ
ರೇಂಜ್‌ರೋವರ್‌ ಇವೋಕ್‌- ಆರಂಭಿಕ ಬೆಲೆ ರು. 52.06 ಲಕ್ಷ
ಡಿಸ್ಕವರಿ- ಆರಂಭಿಕ ಬೆಲೆ ರು. 76.94 ಲಕ್ಷ
ರೇಂಜ್‌ರೋವರ್‌ ವೇಲರ್‌- ಆರಂಭಿಕ ಬೆಲೆ ರು. 72.47 ಲಕ್ಷ
ರೇಂಜ್‌ರೋವರ್‌ ಸ್ಪೋರ್ಟ್‌- ಆರಂಭಿಕ ಬೆಲೆ ರು. 86.71 ಲಕ್ಷ