ರಾಜ್ಯದಲ್ಲಿ ದುಬಾರಿ ಟ್ರಾಫಿಕ್ ದಂಡ ಇಳಿಕೆಯಾಗುತ್ತಾ?
ದುಬಾರಿ ದಂಡದಿಂದ ಬೇಸತ್ತ ವಾಹನ ಸವಾರರಿಗೆ ಇಂದು ರಿಲೀಫ್ ಸಿಗುವ ಸಾಧ್ಯತೆ ಇದೆ. ಸಾರಿಗೆ ಇಲಾಖೆ ಹೆಚ್ಚಿನ ಮೊತ್ತದ ದಂಡ ಪ್ರಮಾಣ ಇಳಿಕೆ ಮಾಡುವ ಸಾಧ್ಯತೆ ಹೆಚ್ಚಿದೆ.
ಬೆಂಗಳೂರು [ಸೆ.16]: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ದುಬಾರಿ ದಂಡ ಇಳಿಕೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಸೋಮವಾರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.
ಈಗಾಗಲೇ ಸಾರಿಗೆ ಇಲಾಖೆಯು ದಂಡ ಮೊತ್ತದ ಇಳಿಕೆ ಪ್ರಮಾಣವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ದಿನವಾಗಿದ್ದರಿಂದ ಆದೇಶ ಹೊರಬಿದ್ದಿರಲಿಲ್ಲ. ಬಹುತೇಕ ಸೋಮವಾರ ಆದೇಶ ಹೊರಬೀಳುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗುಜರಾತ್, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ನೂತನ ದಂಡ ಮೊತ್ತ ಪರಿಷ್ಕರಿಸಿರುವುದರ ವಿವರ ಪಡೆದುಕೊಂಡು ರಾಜ್ಯದಲ್ಲೂ ದಂಡ ಪರಿಷ್ಕರಿಸಲಾಗಿದೆ. ಈಗಾಗಲೇ ಪರಿಷ್ಕೃತ ದಂಡದ ಪಟ್ಟಿಯನ್ನೂ ಸರ್ಕಾರಕ್ಕೆ ಸಲ್ಲಿಸಿರುವುದರಿಂದ ಅಧಿಸೂಚನೆ ಹೊರಡಿಸುವುದಷ್ಟೇ ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಜಾರಿಯಲ್ಲಿದ್ದ ದಂಡ ಮೊತ್ತಕ್ಕೇ ಸಮನಾಗಿ ಇಳಿಕೆ ಮಾಡುವ ಸಾಧ್ಯತೆ ಕಡಮೆ. ಅಂದರೆ, ಇದೇ ತಿಂಗಳು 4ರಂದು ಜಾರಿಗೆ ಬಂದಿದ್ದ ಪರಿಷ್ಕೃತ ದರದ ದಂಡವನ್ನು ಇಳಿಸಿದರೂ ಹಿಂದಿನ ದರಕ್ಕಿಂತ ತುಸು ಹೆಚ್ಚು ನಿಗದಿಪಡಿಸಬಹುದು.
ಕುಡಿದು ವಾಹನ ಚಾಲನೆ, ಡಿಎಲ್ ಇಲ್ಲದೆ ವಾಹನ ಚಾಲನೆ, ವಾಯು ಮಾಲಿನ್ಯ ಸೇರಿದಂತೆ ಕೆಲವೊಂದು ಗಂಭೀರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ಹಾಗೇ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದರೂ ಯಾವುದೂ ಸ್ಪಷ್ಟವಾಗಿಲ್ಲ. ಅಧಿಕೃತ ಆದೇಶ ಹೊರಬಿದ್ದ ಬಳಿಕವೇ ಸ್ಪಷ್ಟಚಿತ್ರಣ ಲಭಿಸಲಿದೆ.
ದೇಶಾದ್ಯಂತ ದುಬಾರಿ ದಂಡ ಜಾರಿಗೆ ಬಂದ ದಿನದಿಂದಲೇ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕರ್ನಾಟಕಕ್ಕೂ ಮೊದಲೇ ಬಿಜೆಪಿ ಆಡಳಿತವಿರುವ ಗುಜರಾತ್, ಮಹಾರಾಷ್ಟ್ರ ರಾಜ್ಯಗಳಲ್ಲಿ ದರ ಇಳಿಕೆ ಮಾಡಲಾಗಿದೆ. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ದರ ಇಳಿಕೆ ಮಾಡುವುದಾಗಿ ಘೋಷಿಸಿದ್ದರು.