Asianet Suvarna News Asianet Suvarna News

BMTC Electric Bus: ರಾಜಧಾನಿಯಲ್ಲಿ ಎಲೆಕ್ಟ್ರಿಕ್ ಬಸ್ ಶುರು: ಒಮ್ಮೆ ಚಾರ್ಜ್ ಮಾಡಿದರೆ 120km ಸಂಚಾರ!

*ರಾಜಧಾನಿಯಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಶುರು
*ಒಮ್ಮೆ ಚಾರ್ಜ್ ಮಾಡಿದರೆ 120 ಕಿ.ಮೀ. ಸಂಚಾರ  
*ರಾಜ್ಯದ ಮೊದಲ ಪರಿಸರ ಸ್ನೇಹಿ  ಬಸ್‌ಗೆ ಚಾಲನೆ

Karnataka CM Basavaraj Bommai launches BMTC electric bus services in Bengaluru mnj
Author
Bengaluru, First Published Dec 28, 2021, 9:48 AM IST
  • Facebook
  • Twitter
  • Whatsapp

ಬೆಂಗಳೂರು: ಸರ್ಕಾರದ ಸಹಾಯಧನ ಅವಲಂಬಿಸಿ ಸಾರಿಗೆ ನಿಗಮಗಳನ್ನು ಮುನ್ನಡೆಸುವುದು ಸವಾಲಿನ ಕೆಲಸವಾಗಿದ್ದು, ಸೋರಿಕೆ ತಡೆದು ಸಂಪನ್ಮೂಲಗಳ ಕ್ರೋಢೀಕರಣ ಮಾಡದಿದ್ದಲ್ಲಿ ಉತ್ತಮ ಭವಿಷ್ಯ
ಇರಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಎಚ್ಚರಿಸಿದ್ದಾರೆ. ಬೆಂಗಳೂರು ಸ್ಮಾರ್ಟ್ ಸಿಟಿ (Smart City) ಯೋಜನೆಯಲ್ಲಿ ಬಿಎಂಟಿಸಿಯಿಂದ ನೂತನವಾಗಿ ಖರೀದಿಸಿರುವ ಭಾರತ್ ಸ್ಟೇಜ್-6 (ಬಿಎಸ್-6) ಮತ್ತು ವಿದ್ಯುತ್ ಬಸ್‌ಗಳಿಗೆ ಸೋಮವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಸಾರಿಗೆ ನಿಗಮಗಳನ್ನು ಮುನ್ನಡೆಸಲು ಸರ್ಕಾರದಿಂದ ಸಹಾಯಧನ ಕೇಳುವುದು ಸುಲಭ. ಆದರೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಲಾಭದಾಯಕವಾಗಲು ಮಾರುಕಟ್ಟೆಯನ್ನು ವೃದ್ಧಿಸಬೇಕು ಎಂದು ಹೇಳಿದರು.

ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಬೇಕು. ಖಾಸಗಿ ಸಾರಿಗೆ ಸಂಸ್ಥೆಗಳು ಲಾಭ ಮಾಡುತ್ತಿದ್ದರೆ, ಸರ್ಕಾರದ ಸಾರಿಗೆ ಸೇವೆ ನಷ್ಟದಲ್ಲಿ ನಡೆಯುತ್ತಿದೆ. ಹಾಗಾಗಿ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಬೇಕು ಎಂದು ಸಲಹೆ ನೀಡಿದರು. ಐಟಿ ಕಂಪನಿಗಳು ಮತ್ತು ಎಚ್‌ಎಎಲ್‌ನಂತಹ (HAL) ಸಾರ್ವಜನಿಕ ಉದ್ದಿಮೆಗಳಿಗೆ ಬಿಎಂಟಿಸಿ ಸೇವೆ ಒದಗಿಸಬೇಕು. ಇಲ್ಲವಾದಲ್ಲಿ ಹೆಚ್ಚು ದಿನ ಮುನ್ನಡೆಸುವುದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.

 

 

ಕಾರ್ಮಿಕರು ಮತ್ತು ಗಾರ್ಮೆಂಟ್ಸ್ ಕಾರ್ಮಿಕರಿಗೆ ಉಚಿತ ಪ್ರಯಾಣ!

ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಸಾರಿಗೆ ಇಲಾಖೆಯಿಂದ ಕಟ್ಟಡ ಕಾರ್ಮಿಕರು ಮತ್ತು ಗಾರ್ಮೆಂಟ್ಸ್ ಕಾರ್ಮಿಕರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಜನ ಕಾರ್ಮಿಕರು ಈ ಸೇವೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಬಿಎಂಟಿಸಿ ಅಧ್ಯಕ್ಷ ಎನ್.ಎಸ್.ನಂದೀಶ್ ರೆಡ್ಡಿ, ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮತ್ತಿತರರಿದ್ದರು.

ಬಿಎಸ್-6 ಬಸ್‌ಗಳ ವೈಶಿಷ್ಟ್ಯ

ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬಿಎಸ್-6 ಮಾದರಿಯ ಡೀಸೆಲ್ ವಾಹನಗಳನ್ನು‌ (Diesel Vehicle) ಪರಿಚಯಿಸಲಾಗಿದ್ದು, ಪರಿಸರ ಸ್ನೇಹಿ ವಾಹನಗಳಾಗಿವೆ. ಸರ್ಕಾರದ ಅನುದಾನದಲ್ಲಿ ₹191 ಕೋಟಿ ವೆಚ್ಚದಲ್ಲಿ 565 ಬಸ್ಸುಗಳನ್ನು ಖರೀದಿಸುತ್ತಿದೆ. ಇವು 41+1 ಆಸನಗಳು, ತುರ್ತು ಪ್ಯಾನಿಕ್ ಬಟನ್, ಹಿಂಬದಿ ಏರ್ ಸಸ್ಪೆನ್ಷನ್ ಮತ್ತು ಎಲ್‌ಇಡಿ ಮಾರ್ಗ ಫಲಕಗಳನ್ನು ಹೊಂದಿವೆ.

ಸಾರಿಗೆ ವ್ಯವಸ್ಥೆ ಪುನಶ್ಚೇತನಕ್ಕೆ ಸಮಿತಿ

ಸಾರಿಗೆ ಸಂಸ್ಥೆ ಮತ್ತು ವಿದ್ಯುತ್ ಸರಬರಾಜು ಸಂಸ್ಥೆಗಳನ್ನು (ಎಸ್ಕಾಂ) ಪುನಶ್ಚೇತನಗೊಳಿಸಲು ನಿವೃತ್ತ ಐಎಎಸ್ ಅಧಿಕಾರಿಗಳಾದ ಶ್ರೀನಿವಾಸ ಮೂರ್ತಿ ಮತ್ತು ಜೈರಾಜ್ ಅವರ ನೇತೃತ್ವದಲ್ಲಿ ರಚಿಸಿರುವ ಸಮಿತಿ ನೀಡಲಿರುವ ವರದಿ ಆಧರಿಸಿ ಹೊಸ ರೂಪ ನೀಡಲಾಗುವುದು. ಮಾಲಿನ್ಯ ರಹಿತ ಮತ್ತು ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ಮತ್ತು ಬಿಎಸ್-6 ಬಸ್‌ಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲಾಗುವುದು. ಪ್ರಸ್ತುತ 90 ಬಿಎಸ್-6 ಮತ್ತು 26 ಎಲೆಕ್ಟ್ರಿಕ್ ವಾಹನಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು

ಕ್ಲಚ್ ಗೇರಿಲ್ಲದ ಎಲೆಕ್ಟ್ರಿಕ್ ಬಸ್!

ಎಲೆಕ್ಟ್ರಿಕ್ ಬಸ್ 9 ಮೀಟರ್ ಉದ್ದವಿದ್ದು, ಒಟ್ಟು 34 ಆಸನಗಳಿವೆ. ಬಸ್ಸಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳಿವೆ. ಮುಂಭಾಗ ಮತ್ತು ಮಧ್ಯಭಾಗ ಎರಡು ಸ್ವಯಂಚಾಲಿತ ದ್ವಾರಗಳಿವೆ. ಕ್ಲಚ್ಹಾಗೂ ಗೇರ್ ಇಲ್ಲ, ಕೇವಲ ಆ್ಯಕ್ಸಲೇಟರ್ ಮೂಲಕ ಬಸ್ ಸಂಚಾರ ಮಾಡುತ್ತದೆ. ಒಂದೂವರೆ ತಾಸು ಬಸ್ಸಿನ ಬ್ಯಾಟರಿ ಚಾರ್ಜ್ ಮಾಡಿದರೆ 120 ಕಿ.ಮೀ. ಸಂಚರಿಸಲಿದೆ. ಪ್ರತಿ ಗಂಟೆಗೆ 70 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಮೆಟ್ರೋ ನಿಲ್ದಾಣಗಳಿಗೆ ಫೀಡರ್‌ಗಳಾಗಿ ಸೇವೆ ಒದಗಿಸಲಿ.

ಇದನ್ನೂ ಓದಿ:

1) Bengaluru Development: ಸರ್ಕಾರ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಬದ್ಧ: ಬೊಮ್ಮಾಯಿ!

2) Anand Mahindra Offer ಕೈ-ಕಾಲಿಲ್ಲದ ಪರಿಶ್ರಮಿಗೆ ಆನಂದ್ ಮಹೀಂದ್ರ ಉದ್ಯೋಗ ಆಫರ್, ಮುಗ್ದ ಸಾಧಕನ ಹಿಂದಿಂದೆ ನೋವಿನ ಕತೆ!

3) Flex Fuel Engines: ದೇಶವನ್ನು ಪೆಟ್ರೋಲ್‌, ಡೀಸೆಲ್ ಬಳಕೆಯಿಂದ ಮುಕ್ತ ಮಾಡಲು ಗಡ್ಕರಿ‌ ಹೊಸ ಪ್ಲ್ಯಾನ್!

Follow Us:
Download App:
  • android
  • ios