ಮೇಡ್ ಇನ್ ಇಂಡಿಯಾ ಹೈಬ್ರಿಡ್ ಕಾರು ಬಿಡುಗಡೆಗೆ ಮಾಡಲಿದೆ ಹೊಂಡಾ!
ಹೊಂಡಾ ಇಂಡಿಯಾ ಇದೀಗ ನೂತನ ಹೈಬ್ರಿಡ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಇದರಲ್ಲೂ ಒಂದು ವಿಶೇಷತೆ ಇದೆ. ಮೇಡ್ ಇನ್ ಇಂಡಿಯಾ ಹೈಬ್ರಿಡ್ ಕಾರು. ಈ ಕಾರಿನ ಬಿಡುಗಡೆ ದಿನಾಂಕ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ಜು.26): ಪ್ರಧಾನಿ ನರೇಂದ್ರ ಮೋದಿಯ ಆತ್ಮನಿರ್ಭರ್ ಭಾರತ ಕರೆ, ಭಾರತ-ಚೀನಾ ಗಡಿ ಸಂಘರ್ಷದ ಬಳಿಕ ವಿದೇಶಿ ವಸ್ತುಗಳ ಬದಲು ಭಾರತದ ವಸ್ತುಗಳಿಗೆ ಆದ್ಯತೆಗಳು ಹೆಚ್ಚಾಗುತ್ತಿದೆ. ಹೀಗಾಗಿ ವಿದೇಶಿ ಕಂಪನಿಗಳು ಇದೀಗ ಭಾರತದಲ್ಲಿ ಉತ್ಪಾದನೆ ಮಾಡಿ ಮಾರಾಟ ಮಾಡಲು ಮುಂದಾಗಿದೆ. ಈಗಾಗಲೇ ಆ್ಯಪಲ್ ಫೋನ್ ಚೆನ್ನೈನಲ್ಲಿ ಉತ್ಪಾದನೆ ಆರಂಭಿಸಿದೆ. ಇದೀಗ ಜಪಾನ್ ಆಟೋಮೇಕರ್ ಹೊಂಡಾ ಮೇಡ್ ಇನ್ ಇಂಡಿಯಾ ಹೈಬ್ರಿಡ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ.
ಹೊಂಡಾ ಸಿಟಿ ಕಾರು ಬಿಡುಗಡೆ ದಿನಾಂಕ ಬಹಿರಂಗ!.
2021ರ ಆರಂಭದಲ್ಲಿ ನೂತನ ಮೇಡ್ ಇನ್ ಇಂಡಿಯಾ ಹೈಬ್ರಿಡ್ ಕಾರು ಬಿಡುಗಡೆಯಾಗಲಿದೆ. 2008ರಲ್ಲೇ ಹೊಂಡಾ ಭಾರತದಲ್ಲಿ ಹೈಬ್ರಿಡ್ ಕಾರು ಬಿಡುಗಡೆ ಮಾಡಿತ್ತು. ಹೊಂಡಾ ಸಿವಿಕ್ ಹೈಬ್ರಿಡ್ ಕಾರು ನಿರೀಕ್ಷಿತ ಯಶಸ್ಸು ಸಿಗಲಿಲ್ಲ. 21.50 ಲಕ್ಷ ರೂಪಾಯಿ ಬೆಲೆಯ ಈ ಕಾರು ಭಾರತದಲ್ಲಿ ಮೋಡಿ ಮಾಡಲೇ ಇಲ್ಲ. ಇನ್ನು 2016ರಲ್ಲಿ ಹೊಂಡಾ ಆಕಾರ್ಡ್ ಹೈಬ್ರಿಡ್ ಕಾರು ಬಿಡುಗಡೆ ಮಾಡಿತ್ತು. ಇದೂ ಕೂಡ ನಿರೀಕ್ಷೀತ ಯಶಸ್ಸು ಕಾಣದೆ ಸ್ಥಗಿತಗೊಳಿಸಲಾಯಿತು.
ಇದೀಗ ಮೇಡ್ ಇನ್ ಇಂಡಿಯಾ ಹೈಬ್ರಿಡ್ ಕಾರು ಬಿಡುಗಡೆ ಮಾಡುತ್ತಿದೆ. ಆಕರ್ಷಕ ಬೆಲೆಯಲ್ಲಿ ನೂತನ ಕಾರು ಬಿಡುಗಡೆ ಮಾಡಲು ಹೊಂಡಾ ಮುಂದಾಗಿದೆ. ಇದು ಸೆಡಾನ್ ಅಥವಾ SUV ಹೈಬ್ರಿಡ್ ಕಾರಾಗಿದೆಯೋ ಅನ್ನೋ ಕುರಿತು ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ. ನೂತನ ಕಾರಿನ ಬೆಲೆ ಹಾಗೂ ಎಂಜಿನ್ ಕುರಿತ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.