ಕೊರೋನಾ ವೈರಸ್‌ನಿಂದ ಉತ್ಪಾದನೆ ಸ್ಥಗಿತಗೊಳಿಸಿದ ಹೀರೋ ಮೋಟಾರ್ !
ಕೊರೋನಾ ವೈರಸ್ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಿವೆ. ಹಲವು ಜಿಲ್ಲೆಗಳು ಸಂಪೂರ್ಣ ಲಾಕ್‌ಡೌನ್ ಆಗಿದೆ. ಇದರ ಬೆನ್ನಲ್ಲೇ ಅತೀ ದೊಡ್ಡ ಮೋಟಾರ್ ಕಂಪನಿ ಹೀರೋ ಘಟಕ ಸ್ಥಗಿತಗೊಂಡಿದೆ.
ನವದೆಹಲಿ(ಮಾ.22): ವಿಶ್ವದ ಅತೀ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೋ ಮೋಟಾರ್ ಕಾರ್ಪ್ ಉತ್ಪಾದನೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದೆ. ಕೊರೋನಾ ವೈರಸ್‌ನಿಂದ ದೇಶವೇ ಸ್ಥಬ್ತವಾಗಿದೆ. ಹೀರೋ ಮೋಟಾರ್ ಕಂಪನಿಯ ಉದ್ಯೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಕಂಪನಿ ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೀರೋ ಮೋಟಾರ್ ಕಂಪನಿ ಚೇರ್ಮೆನ್ ಪವನ್ ಮುಂಜಾಲ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸಾಮ್ರಾಜ್ಯ ವಿಸ್ತರಿಸಿದ ಹೀರೋ ಮೋಟಾರ್!
ಭಾರತ, ಕೊಲಂಬಿಯಾ, ಬಾಂಗ್ಲಾದೇಶ ಸೇರಿದಂತೆ ವಿಶ್ವದಲ್ಲಿನ ಹೀರೋ ಮೋಟಾರ್ ಕಾರ್ಪ್ ಘಟಕಗಳು ಮಾರ್ಚ್ 31ರ ವರೆಗೆ ಸ್ಥಗಿತಗೊಳ್ಳುತ್ತಿದೆ. ಉತ್ಪಾದನಾ ಘಟಕದಲ್ಲಿನ ಉದ್ಯೋಗಿಗಳಿಗೆ ರಜೆ ನೀಡಲಾಗಿದ್ದು, ಹಲವರಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಎಪ್ರಿಲ್ 1, 2020 ರಂದು ಪರಾಮರ್ಶನೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಮುಂಜಾಲ್ ಹೇಳಿದ್ದಾರೆ.
ಮೂರು ಹೊಸ ಹೀರೋ ಬೈಕ್ ದೇಶಕ್ಕೆ ಅರ್ಪಣೆ!
ಬಹುತೇಕ ಎಲ್ಲಾ ರಾಜ್ಯಗಳು ತಮ್ಮ ತಮ್ಮ ಗಡಿಯನ್ನು ಬಂದ್ ಮಾಡಿದೆ. ಇನ್ನು ಅಂತಾರಾಷ್ಟ್ರೀಯ ವಿಮಾನ ಆಗಮನವನ್ನು ನಿಷೇಧಿಸಲಾಗಿದೆ. ಸದ್ಯ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಸರ್ಕಾರ ಅವಿರತ ಪರಿಶ್ರಮ ಪಡುತ್ತಿದೆ. ಹೀಗಾಗಿ ಸರ್ಕಾರದ ನಿರ್ಧಾರವನ್ನು ಬೆಂಬಲಿಸುತ್ತಿದ್ದೇವೆ. ಇಷ್ಟೇ ಅಲ್ಲ ಹೀರೋ ಮೋಟಾರ್ ಕಾರ್ಪ್ ಉದ್ಯೋಗಿಗಳ ಆರೋಗ್ಯದ ಜೊತೆಗೆ ಗ್ರಾಹಕರು ಹಾಗೂ ಭಾರತದ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸಲಿದೆ ಎಂದು ಮುಂಜಾಲ್ ಹೇಳಿದ್ದಾರೆ.