ನವದೆಹಲಿ(ಫೆ.09): ಡಿಜಿಟಲ್‌ ವ್ಯವಸ್ಥೆಯ ಮೂಲಕ ವಾಹನಗಳ ಟೋಲ್‌ ಸಂಗ್ರಹ ಮಾಡುವ ಫಾಸ್ಟ್ಯಾಗ್‌ ವ್ಯವಸ್ಥೆ ಫೆ.15ರಿಂದ ದೇಶಾದ್ಯಂತ ಜಾರಿಗೆ ಬರಲಿದೆ.

‘ಕೊರೋನಾ ಮತ್ತು ನಾನಾ ಕಾರಣಗಳಿಂದಾಗಿ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಈ ವ್ಯವಸ್ಥೆ ಜಾರಿಯ ದಿನಾಂಕವನ್ನು ಇನ್ನು ಯಾವುದೇ ಕಾರಣಕ್ಕೂ ಮುಂದೂಡದೇ ಇರಲು ಸರ್ಕಾರ ನಿರ್ಧರಿಸಿದೆ. ಇತ್ತೀಚೆಗೆ ನಡೆದ ಸಚಿವಾಲಯದ ಸಭೆಯಲ್ಲಿ ಸ್ವತಃ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರೇ ಸ್ಪಷ್ಟಪಡಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

2019ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಫಾಸ್ಟ್ಯಾಗ್‌ ಮೂಲಕ ಮಾಸಿಕ ಟೋಲ್‌ ಸಂಗ್ರಹ ಪ್ರಮಾಣ ಶೇ.44.31ರಷ್ಟಿದ್ದರೆ, 2020ರ ಡಿಸೆಂಬರ್‌ ವೇಳೆಗೆ ಅದು ಒಟ್ಟು ಪಾವತಿಯಲ್ಲಿ ಶೇ.73.36 ಪ್ರಮಾಣವನ್ನು ತಲುಪಿತ್ತು. ಕಳೆದ ಡಿಸೆಂಬರ್‌ ತಿಂಗಳೊಂದರಲ್ಲೇ ಫಾಸ್ಟ್ಯಾಗ್‌ ಮೂಲಕ 2088 ಕೋಟಿ ರು. ಟೋಲ್‌ ಸಂಗ್ರಹಿಸಲಾಗಿತ್ತು.

ಈ ವ್ಯವಸ್ಥೆ ಜಾರಿಯಿಂದ ಟೋಲ್‌ಬೂತ್‌ಗಳಲ್ಲಿ ವಾಹನ ಸವಾರರು, ಶುಲ್ಕ ಪಾವತಿಗೆ ಸರದಿ ನಿಲ್ಲುವ ಸಮಸ್ಯೆ, ಚಿಲ್ಲರೆ ಸಮಸ್ಯೆ ಇರುವುದಿಲ್ಲ. ಟೋಲ್‌ ಸಂಗ್ರಹ ಪಾರದರ್ಶಕವಾಗಿರುತ್ತದೆ. ಈ ಕಾರಣಕ್ಕಾಗಿಯೇ ಈಗಾಗಲೇ ಹಲವು ಟೋಲ್‌ಗೇಟ್‌ಗಳಲ್ಲಿ ನಗದು ರೂಪದಲ್ಲಿ ಶುಲ್ಕ ಸಂಗ್ರಹ ವ್ಯವಸ್ಥೆ ನಿಲ್ಲಿಸಲಾಗಿದೆ.