ಬೆಂಗಳೂರು(ಮೇ.15): ದಟ್ಸನ್ ಇಂಡಿಯಾ ಬಿಎಸ್ 6 ಶ್ರೇಣಿಯ ಕಾರುಗಳನ್ನು ಬಿಡುಗಡೆ ಮಾಡಿದೆ. ದಟ್ಸನ್ ಇಂಡಿಯಾದ ಎಲ್ಲಾ ಹೊಸ ಗೋ ಮತ್ತು ಗೋ+ ವಾಹನಗಳು ಇನ್ನು ಮುಂದೆ ಬಿಎಸ್ 6 ಮಾನದಂಡವನ್ನು ಒಳಗೊಂಡಿರುತ್ತವೆ. ಇದಲ್ಲದೇ, ಅತ್ಯಂತ ಕೈಗೆಟುಕುವ ಸಿವಿಟಿಯಿಂದ ಸುಸಜ್ಜಿತವಾಗಿವೆ. ಈ ಹೊಸ ದಟ್ಸನ್ ಗೋ ಮತ್ತು ಗೋ+ 1.2 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿವೆ ಮತ್ತು 5-ಸ್ಪೀಡ್ ಮ್ಯಾನ್ಯುವಲ್ ಮತ್ತು ಸಿವಿಟಿ ಟ್ರಾನ್ಸ್ ಮಿಷನ್ ನೊಂದಿಗೆ 77PS/104Nm ವರೆಗಿನ ಗರಿಷ್ಠ ಪವರ್ ಅನ್ನು ನೀಡಲಿವೆ.

ದಾಟ್ಸನ್ ರೆಡಿ ಗೋ BS6 ಬಿಡುಗಡೆಗೆ ರೆಡಿ, ಬೆಲೆ 3 ಲಕ್ಷ ರೂ!

ಹೊಸ ಗೋ ಮತ್ತು ಗೋ+ ನೊಂದಿಗೆ ದಟ್ಸನ್ ಇಂಡಿಯಾ ಸುಲಭ ಹಣಕಾಸು ಯೋಜನೆಗಳನ್ನು ಗ್ರಾಹಕರಿಗೆ ನೀಡಲಿದೆ. ಇದಕ್ಕಾಗಿ ಕಂಪನಿಯು ``ಈಗ ಖರೀದಿಸಿ ಮತ್ತು 2021 ರಲ್ಲಿ ಹಣ ಪಾವತಿಸಿ’’ ಎಂಬ ವಿನೂತನ ಹಣಕಾಸು ನೆರವಿನ ಯೋಜನೆಯೊಂದಿಗೆ ಸರಳವಾದ ಇಎಂಐ ಸೌಲಭ್ಯಗಳ ಯೋಜನೆಯನ್ನೂ ಜಾರಿಗೆ ತಂದಿದೆ. ಇನ್ನಿತರೆ ಹಣಕಾಸು ನೆರವುಗಳಾದ ಶೇ.100 ರಷ್ಟು ಹಣಕಾಸು ಆಯ್ಕೆ, ಕಡಿಮೆ ಇಎಂಐ ಪ್ರಯೋಜನ ಮತ್ತು ಇಎಂಐ ಖಾತರಿ ಪ್ರಯೋಜನವನ್ನು ನೀಡಲಿದೆ.

ಈ ಬಗ್ಗೆ ಮಾತನಾಡಿದ ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಅವರು, ``ಹೊಸ ದಟ್ಸನ್ ಗೋ ಮತ್ತು ಗೋ+ನೊಂದಿಗೆ ನಾವು ಅತ್ಯುತ್ಕೃಷ್ಠವಾದ ಉತ್ಪನ್ನಗಳನ್ನು ಪರಿಚಯಿಸಿದ್ದೇವೆ. ಇವು ಕೇವಲ ಮೌಲ್ಯಧಾರಿತವಾಗಿಲ್ಲ, ಇದರ ಬದಲಾಗಿ ಭವಿಷ್ಯಕ್ಕೆ ಸಿದ್ಧವಾಗಿರುವ ವಾಹನಗಳಾಗಿವೆ. ಜಪಾನ್ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಿರುವ ಈ ಎರಡು ಕಾರುಗಳು ಬಿಎಸ್6 ಸಂಯೋಜನೆಯನ್ನು ಒಳಗೊಂಡಿವೆ ಮತ್ತು ಭಾರತದಲ್ಲಿ ಸಿವಿಟಿ ಆಯ್ಕೆಯನ್ನು ಕೈಗೆಟುಕುವಂತೆ ಮಾಡಲಿದೆ. ಆವಿಷ್ಕಾರಕ ಹಣಕಾಸು ಯೋಜನೆಗಳ ಜತೆಯಲ್ಲಿ ಇಂತಹ ಪರೀಕ್ಷಾ ಸಮಯದಲ್ಲಿ ನಮ್ಮ ಗ್ರಾಹಕರಿಗೆ ಬೆಂಬಲವನ್ನು ಮುಂದುವರಿಸುತ್ತಿದ್ದೇವೆ. ಪ್ರಗತಿದಾಯಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ನಮ್ಮ ಗುರಿಯನ್ನು ತಲುಪುವತ್ತ ಗಮನ ಹರಿಸಿದ್ದೇವೆ’’ ಎಂದರು.

ಸ್ಲೀಕ್ ಮತ್ತು ಬೋಲ್ಡ್ ಲುಕ್ ನಲ್ಲಿ ಇರುವ ಈ ಕಾರುಗಳು ಎರಡೂ ಮಾಡೆಲ್ ಗಳು ಡೈಮಂಡ್ ಕಟ್ ಆರ್ 14 ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಸ್ಟೈಲಿಶ್ ಎಲ್ಇಡಿ ಡಿಆರ್ ಎಲ್ ಗಳು(ಡೇಟೈಮ್ ರನ್ನಿಂಗ್ ಲ್ಯಾಂಪ್ಸ್), ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಒಳಗೊಳ್ಳುವ ಮೂಲಕ ಅತ್ಯುತ್ತಮ ಎನಿಸಿವೆ. ಕಾರಿನ ಒಳಗೆ ಆರಾಮವಾದ ಸೀಟುಗಳು ಇದ್ದು, ದಟ್ಸನ್ ಗೋ ಮತ್ತು ಗೋ+ ಸಿವಿಟಿ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಎಎಂಟಿ ಟ್ರಾನ್ಸ್ ಮಿಷನ್ ಮಾಡೆಲ್ ಗಳನ್ನು ಹೊಂದಿದ್ದು, ಗೇರ್ ಗಳನ್ನು ಅತ್ಯಂತ ಮೃದುವಾಗಿ ಬದಲಿಸಬಹುದಾಗಿದೆ. ಸುಪೀರಿಯರ್ ಹಿಲ್-ಡ್ರೈವಿಂಗ್ ಅಂದರೆ ಗುಡ್ಡಗಾಡು ರಸ್ತೆಯಲ್ಲೂ ಸುಲಲಿತವಾಗಿ ಸಂಚರಿಸಬಹುದಾದ ವೈಶಿಷ್ಟ್ಯತೆಗಳಿ ಇದರಲ್ಲಿವೆ. ಇಂತಹ ಪ್ರದೇಶಗಳಲ್ಲಿ ಚಾಲಕರು ಕಾರನ್ನು ಅತ್ಯುತ್ತಮವಾಗಿ ನಿಯಂತ್ರಿಸಬಹುದು, ಇಂಜಿನ್ ನಲ್ಲಿನ ಶಬ್ದದ ಪ್ರಮಾಣ ತುಂಬಾ ಕಡಿಮೆ ಇದ್ದರೆ, ಅಕ್ಸಲರೇಟರ್ ನೀಡುವಾಗ ಯಾವುದೇ ಅಡ್ಡಿಗಳಿರುವುದಿಲ್ಲ.

ಈ ಎರಡೂ ಕಾರುಗಳಲ್ಲಿ ಸುರಕ್ಷತಾ ಕ್ರಮಗಳು ಅತ್ಯುತ್ಕೃಷ್ಠವಾಗಿವೆ. ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಡ್ಯುಯೆಲ್ ಫ್ರಂಟ್ ಏರ್ ಬ್ಯಾಗ್ ಗಳು, ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟ್ ಮತ್ತು ರಿವರ್ಸ್ ಪಾರ್ಕಿಂಗ್ ಸೌಲಭ್ಯಗಳಿವೆ. 7 ಇಂಚುಗಳ ಸ್ಮಾರ್ಟ್ ಟಚ್ ಸ್ಕ್ರೀನ್ ಹೊಂದಿದ್ದು, ಇದು ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸಂಪರ್ಕವನ್ನು ಹೊಂದಿದೆ. ಹೊಸ ದಟ್ಸನ್ ಗೋ ಮತ್ತು ಗೋ+ ``ಸ್ಪೋರ್ಟ್ಸ್ ಮೋಡ್’’ ನಲ್ಲಿ ಲಭ್ಯವಿವೆ.

5 ಸೀಟರ್ ಗಳ ಮ್ಯಾನ್ಯುವಲ್ ವೇರಿಯೆಂಟ್ ನ ಹೊಸ ದಟ್ಸನ್ ಗೋ ಬೆಲೆ 3,99,000 ರೂಪಾಯಿಗಳಿಂದ ಆರಂಭವಾಗಲಿದ್ದರೆ, ಸಿವಿಟಿಯ ವೇರಿಯೆಂಟ್ 6,25,000 ರೂಪಾಯಿಗಳಿಗೆ ಲಭ್ಯವಿದೆ. ಇನ್ನು ಮ್ಯಾನ್ಯುವಲ್ 7 ಸೀಟರ್ ಗಳ ದಟ್ಸನ್ ಗೋ+ ಬೆಲೆ 4,19,990 ರೂಪಾಯಿಗಳು ಮತ್ತು ಸಿವಿಟಿಗೆ 6,69,990 ರೂಪಾಯಿಗಳಾಗಿದೆ.

ಎರಡೂ ಕಾರುಗಳು ಆರು ಬಣ್ಣಗಳಾದ ರೂಬಿ ರೆಡ್, ಬ್ರೋನ್ಜ್ ಗ್ರೇ, ಆಂಬರ್ ಆರೇಂಜ್, ಕ್ರಿಸ್ಟಲ್ ಸಿಲ್ವರ್, ವಿವಿಡ್ ಬ್ಲೂ ಮತ್ತು ಒಪಲ್ ವೈಟ್ ನಲ್ಲಿ ಲಭ್ಯವಿವೆ. ಈ ಎರಡೂ ಕಾರುಗಳಿಗೆ ಎರಡು ವರ್ಷಗಳ ವಾರಂಟಿ ಇದ್ದು, ಈ ಅವಧಿಯನ್ನು ಐದು ವರ್ಷಗಳವರೆಗೆ ವಿಸ್ತರಣೆ ಮಾಡಬಹುದಾಗಿದೆ. ಎರಡು ವರ್ಷಗಳವರೆಗೆ ಉಚಿತ ರೋಡ್ ಸೈಡ್ ಅಸಿಸ್ಟೆನ್ಸ್ ಸಬ್ ಸ್ಕ್ರಿಪ್ಶನ್ ಹೊಂದಿವೆ. ದೇಶದ 1500 ಕ್ಕೂ ಹೆಚ್ಚು ನಗರಗಳಲ್ಲಿ ಕಾರುಗಳ ಸರ್ವೀಸ್ ಸೆಂಟರ್ ಗಳಿವೆ.