ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಗ್ರಾಹಕರು ಬಜೆಟ್ ಸ್ನೇಹಿ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ನಾಲ್ಕು ಜನಪ್ರಿಯ ಹಾಗೂ ಅಗ್ಗದ ಇವಿ ಕಾರುಗಳ ಬೆಲೆ, ವೈಶಿಷ್ಟ್ಯಗಳು ಮತ್ತು ಮೈಲೇಜ್ ವಿವರಗಳನ್ನು ಈ ಸ್ಟೋರಿಯಲ್ಲಿ ನೀಡಲಾಗಿದೆ.
ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (EV) ಬೇಡಿಕೆ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಮತ್ತು ಜೇಬಿಗೆ ಹೊರೆಯಾಗದ ಬಜೆಟ್ ಫ್ರೆಂಡ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲು ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಅಗ್ಗದ ಹಾಗೂ ಜನಪ್ರಿಯ 4 ಪ್ರಮುಖ ಎಲೆಕ್ಟ್ರಿಕ್ ಕಾರುಗಳ ವೈಶಿಷ್ಟ್ಯಗಳ ವಿವರ ಇಲ್ಲಿದೆ.
ಟಾಟಾ ಟಿಯಾಗೊ!
ಟಾಟಾ ಟಿಯಾಗೊ ಇವಿ ಭಾರತದ ಅತ್ಯಂತ ಕೈಗೆಟುಕುವ ಮತ್ತು ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ. ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಯೋಜನೆಯಡಿ ಈ ಕಾರಿನ ಆರಂಭಿಕ ಎಕ್ಸ್-ಶೋರೂಂ ಬೆಲೆ ಕೇವಲ ರೂ. 4.69 ಲಕ್ಷವಾಗಿದ್ದರೆ, ನಿಯಮಿತ ಖರೀದಿ ಆಯ್ಕೆಯಲ್ಲಿ ಬೆಲೆ ರೂ. 6.99 ಲಕ್ಷದಿಂದ ಪ್ರಾರಂಭವಾಗುತ್ತದೆ. ಆಕರ್ಷಕ ವಿನ್ಯಾಸ ಹೊಂದಿರುವ ಈ ಕಾರಿನ ಒಳಾಂಗಣದಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ವೈರ್‌ಲೆಸ್ ಚಾರ್ಜರ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸೌಲಭ್ಯಗಳಿವೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಇಎಸ್‌ಸಿ ವೈಶಿಷ್ಟ್ಯಗಳಿದ್ದು, ಇದು 19.2 kWh ಹಾಗೂ 24 kWh ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 293 ಕಿಮೀ ವರೆಗೆ ಚಾಲನಾ ವ್ಯಾಪ್ತಿಯನ್ನು (Range) ನೀಡುತ್ತದೆ.
ಎಂಜಿ ಕಮ್ಯೂಟ್ ಇವಿ!
ನಗರ ಪ್ರದೇಶದ ದೈನಂದಿನ ಪ್ರಯಾಣಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮತ್ತೊಂದು ಕಾರು MG ಕಮ್ಯೂಟ್ EV. BOSS ಯೋಜನೆಯಡಿ ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆ ರೂ. 4.99 ಲಕ್ಷವಾಗಿದ್ದರೆ, ಸಾಮಾನ್ಯ ಮಾದರಿಯ ಬೆಲೆ ಸುಮಾರು ರೂ. 7 ಲಕ್ಷದಿಂದ ಆರಂಭವಾಗುತ್ತದೆ. ಬಾಕ್ಸಿ ವಿನ್ಯಾಸ ಮತ್ತು ಎಲ್‌ಇಡಿ ಲೈಟಿಂಗ್ ಹೊಂದಿರುವ ಈ ಕಾರಿನ ಕ್ಯಾಬಿನ್‌ನಲ್ಲಿ ಡ್ಯುಯಲ್ 10.25-ಇಂಚಿನ ಪರದೆಗಳು ಹಾಗೂ ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ನೀಡಲಾಗಿದೆ. ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾಗಳಿದ್ದು, 17.3 kWh ಬ್ಯಾಟರಿ ಪ್ಯಾಕ್ ಹೊಂದಿರುವ ಈ ಕಾರು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 230 ಕಿ.ಮೀ.ವರೆಗೆ ಚಲಿಸುತ್ತದೆ.
ಟಾಟಾ ಪಂಚ್ ಇವಿ!
ಎಸ್‌ಯುವಿ ಮಾದರಿಯ ಲುಕ್ ಮತ್ತು ವಿಶಾಲವಾದ ಸ್ಥಳಾವಕಾಶ ಬಯಸುವವರಿಗೆ ಟಾಟಾ ಪಂಚ್ ಇವಿ ಅತ್ಯುತ್ತಮ ಆಯ್ಕೆಯಾಗಿದೆ. BaaS ಯೋಜನೆಯಡಿ ಇದರ ಆರಂಭಿಕ ಬೆಲೆ ಸುಮಾರು ರೂ. 6.49 ಲಕ್ಷ ಹಾಗೂ ನಿಯಮಿತ ರೂಪಾಂತರದ ಬೆಲೆ ರೂ. 9.69 ಲಕ್ಷದಿಂದ ಶರುವಾಗುತ್ತದೆ. ಫ್ಯೂಚರಿಸ್ಟಿಕ್ ಗ್ರಿಲ್, ಎಲ್‌ಇಡಿ ಲೈಟ್ ಬಾರ್ ಹೊಂದಿರುವ ಈ ಕಾರಿನ ಒಳಗಡೆ ವೆಂಟಿಲೇಟೆಡ್ ಸೀಟುಗಳು, ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಮತ್ತು ADAS ತಂತ್ರಜ್ಞಾನದಂತಹ ಹೈಟೆಕ್ ವೈಶಿಷ್ಟ್ಯಗಳಿವೆ. 25 kWh ಮತ್ತು 35 kWh ಬ್ಯಾಟರಿ ಆಯ್ಕೆಗಳಲ್ಲಿ ಬರುವ ಈ ಕಾರು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 421 ಕಿಮೀ ವರೆಗೆ ಗರಿಷ್ಠ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.
ಸಿಟ್ರೊಯೆನ್ ಇಸಿ3
ಕೊನೆಯದಾಗಿ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು SUV ಶೈಲಿಯ ಬಾಡಿ ಕ್ಲಾಡಿಂಗ್ ಬಯಸುವವರಿಗೆ ಸಿಟ್ರೊಯೆನ್ EC3 ಸೂಕ್ತವಾಗಿದೆ. BaaS ಯೋಜನೆಯಡಿಯಲ್ಲಿ ಇದರ ಆರಂಭಿಕ ಬೆಲೆ ಸುಮಾರು ರೂ. 8.49 ಲಕ್ಷವಾಗಿದ್ದು, ಸಾಮಾನ್ಯ ಮಾದರಿಯು ರೂ. 11.99 ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಕಾರಿನಲ್ಲಿ 10.2-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ ಮತ್ತು 6 ಏರ್‌ಬ್ಯಾಗ್‌ಗಳಂತಹ ಸುರಕ್ಷತಾ ಸೌಲಭ್ಯಗಳಿವೆ. 29.2 kWh ಬ್ಯಾಟರಿ ಪ್ಯಾಕ್ ಹೊಂದಿರುವ ಈ ಹ್ಯಾಚ್‌ಬ್ಯಾಕ್ ಕಾರು ಒಮ್ಮೆ ಚಾರ್ಜ್ ಮಾಡಿದರೆ 320 ಕಿ.ಮೀ. ARAI ಪ್ರಮಾಣೀಕೃತ ಚಾಲನಾ ವ್ಯಾಪ್ತಿಯನ್ನು ನೀಡುತ್ತದೆ.


