ಬೆಂಗಳೂರು[ಆ.05]: ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ ಕ್ರಮಕ್ಕೆ ಪೂರ್ಣ ಪ್ರಮಾಣದ ನೈತಿಕ ಬೆಂಬಲವಿದೆ. ಆದರೆ, ಹೆಲ್ಮೆಟ್‌ ಧರಿಸದ ಸವಾರರಿಗೆ ಬಂಕ್‌ಗಳಲ್ಲಿ ಪೆಟ್ರೋಲ್‌ ನಿರಾಕರಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ಪೆಟ್ರೋಲ್‌ ಡೀಲ​ರ್‍ಸ್ ಅಸೋಸಿಯೇಷನ್‌(ಬಿಪಿಡಿಎ) ತಿಳಿಸಿದೆ.

ಸಂಚಾರ ಪೊಲೀಸರು ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿರುವುದು ಉತ್ತಮ ಕ್ರಮವಾಗಿದೆ. ಈಗ ಹೆಲ್ಮೆಟ್‌ ಧರಿಸದ ಸವಾರರಿಗೆ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌ ನಿರಾಕರಿಸುವಂತೆ ಹೇಳಿದ್ದಾರೆ. ಇದಕ್ಕೆ ನೂರಕ್ಕೆ ನೂರರಷ್ಟುನೈತಿಕ ಬೆಂಬಲವಿದೆ. ಆದರೆ ವಾಸ್ತವದಲ್ಲಿ ಗ್ರಾಹಕರಿಗೆ ಪೆಟ್ರೋಲ್‌ ನಿರಾಕರಿಸಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದು ಬಂಕ್‌ ವ್ಯವಹಾರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದ ಸಂಘದ ಉಪಾಧ್ಯಕ್ಷ ಎ.ತಾರಾನಾಥ್‌ ಹೇಳಿದರು.

ಪೆಟ್ರೋಲ್‌ ನಿಕಾರಣೆಯಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೆ ಮನದಟ್ಟು ಮಾಡಿದ್ದೇವೆ. ಇಲಾಖೆಯ ಕ್ರಮಕ್ಕೆ ನೈತಿಕ ಬೆಂಬಲ ಸದಾ ಇರುತ್ತದೆ. ಸಾಧ್ಯವಾದರೆ ಪೊಲೀಸ್‌ ಇಲಾಖೆಯಿಂದಲೇ ಪೆಟ್ರೋಲ್‌ ಬಂಕ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮುಖಾಂತರ ಹೆಲ್ಮೆಟ್‌ ಧರಿಸದೆ ಪೆಟ್ರೋಲ್‌ ಬಂಕ್‌ಗೆ ಬರುವ ದ್ವಿಚಕ್ರವಾಹನ ಸವಾರರ ಮೇಲೆ ನಿಗಾವಹಿಸಿ, ನಿಯಮದ ಪ್ರಕಾರ ದಂಡ ವಿಧಿಸುವಂತೆ ಸಲಹೆ ನೀಡಿದ್ದೇವೆ.

ಅಲ್ಲದೆ, ಸಿಸಿಟಿವಿ ಅಳವಡಿಕೆಗೆ ಜಾಗ, ಉಚಿತ ಇಂಟರ್‌ನೆಟ್‌, ವಿದ್ಯುತ್‌ ಸೌಲಭ್ಯ ಕಲ್ಪಿಸುವುದಾಗಿಯೂ ಹೇಳಿದ್ದೇವೆ. ಈ ಸಲಹೆಗೆ ಪೊಲೀಸ್‌ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಪರಸ್ಪರ ಸಹಕಾರೊಂದಿಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.