ಬೆಂಗಳೂರು (ಏ. 28): ಭಾರತ್‌ ಸ್ಟೇಜ್‌ (ಬಿಎಸ್‌) 4 ಮಾಪನದ ವಾಹನವನ್ನು 2020ರ ಮಾರ್ಚ್ 31 ರ ಮೊದಲು ಖರೀದಿಸಿ ತಾತ್ಕಾಲಿಕ ನೋಂದಣಿ ಹೊಂದಿರುವ, ಆನ್‌ಲೈನ್‌, ಆಫ್‌ಲೈನ್‌ದಲ್ಲಿ ತೆರಿಗೆ ಪಾವತಿಸಿರುವ ವಾಹನ ಮಾಲೀಕರು ಏ.30 ರೊಳಗೆ ಸಂಬಂಧಪಟ್ಟಆರ್‌ಟಿಓ ಕಚೇರಿಗಳಲ್ಲಿ ಅಗತ್ಯ ದಾಖಲೆ ಸಲ್ಲಿಸಿ ನಿಯಮಾನುಸಾರ ವಾಹನಗಳನ್ನು ನೋಂದಣಿ ಮಾಡಿಕೊಳ್ಳಲು ಸಾರಿಗೆ ಇಲಾಖೆ ಸೂಚಿಸಿದೆ.

‘ಕೇಂದ್ರ ಸರ್ಕಾರ 2020ರ ಏ.1 ರಿಂದ ಬಿಎಸ್‌ 4 ಮಾಪನದ ವಾಹನಗಳ ನೋಂದಣಿ ಸ್ಥಗಿತಗೊಳಿಸಿದೆ. ಹೀಗಾಗಿ ವಾಹನ ಉತ್ಪಾದಕ ಕಂಪನಿಗಳು ಬಿಎಸ್‌ 4 ವಾಹನಗಳ ಉತ್ಪಾದನೆ ಸ್ಥಗಿತಗೊಳಿಸಿ, ಮಾ.31ರೊಳಗೆ ವಾಹನಗಳ ಮಾರಾಟ ಮಾಡಿವೆ. ಪ್ರಸ್ತುತ ಬಿಎಸ್‌ 6 ವಾಹನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ದಾಟ್ಸನ್ ರೆಡಿ ಗೋ BS6 ಬಿಡುಗಡೆಗೆ ರೆಡಿ, ಬೆಲೆ 3 ಲಕ್ಷ ರೂ!

ಮಾ.31 ರೊಳಗೆ ಬಿಎಸ್‌ 4 ವಾಹನ ಖರೀದಿಸಿರುವ ಮಾಲೀಕರು, ಇನ್ನೂ ನೋಂದಣಿ ಮಾಡಿಸದಿದ್ದರೆ, ಅಗತ್ಯ ದಾಖಲೆಗಳೊಂದಿಗೆ ಏ.30 ರೊಳಗೆ ನೋಂದಣಿ ಮಾಡಿಸಬೇಕು. ತೆರಿಗೆ ಹಾಗೂ ಇನ್ನಿತರ ಶುಲ್ಕ ಪಾವತಿಸಿರುವವರು ಅಥವಾ ಇನ್ನೂ ಪಾವತಿಸದವರು ನಿಗದಿತ ಅವಧಿಯಲ್ಲಿ ಪಾವತಿ ಮಾಡಿ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ಸಾರಿಗೆ ಇಲಾಖೆ ತಿಳಿಸಿದೆ.