ಕೊರೋನಾ ಹೋರಾಟಕ್ಕೆ ಬಾಷ್ ಮತ್ತಷ್ಟು ನೆರವು; ಮಾಸ್ಕ್ ಉತ್ಪಾದನಾ ಘಟಕಕ್ಕೆ ಚಾಲನೆ!
ಬಾಷ್ ನಿಂದ ಭಾರತದಲ್ಲಿ ಆಟೋಮೇಟೆಡ್ ರಕ್ಷಣಾತ್ಮಕ ಮುಖಗವಸು ಉತ್ಪಾದನಾ ಘಟಕಕ್ಕೆ ಚಾಲನೆ| ಬಾಷ್ ಇಂಡಿಯಾದ ವಿಶೇಷ ಉದ್ದೇಶಿತ ಘಟಕದಿಂದ ದಿನಕ್ಕೆ 1,00,000 ಕ್ಕೂ ಅಧಿಕ ಮಾಸ್ಕ್ ಉತ್ಪಾದನೆ| ಸಮುದಾಯಕ್ಕೆ ವಿತರಣೆಗಾಗಿ ಈ ಮಾಸ್ಕ್ ಗಳ ಉತ್ಪಾದನೆ
ಬೆಂಗಳೂರು(ಜೂ.25): ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಾಷ್ ತನ್ನದೇ ಆದ ವಿಶಿಷ್ಟ ರೀತಿಯ ಮಾಸ್ಕ್(ರಕ್ಷಣಾ ಮುಖಗವಸು) ವಿನ್ಯಾಸಗೊಳಿಸಿದೆ. ಸಂಪೂರ್ಣ ಸ್ವಯಂಚಾಲಿತ ರಕ್ಷಣಾ ಮಾಸ್ಕ್ ಉತ್ಪಾದನಾ ವ್ಯವಸ್ಥೆಯನ್ನು ಬಾಷ್ ತನ್ನ ಬೆಂಗಳೂರಿನ ನಾಗನಾಥಪುರದಲ್ಲಿರುವ ಘಟಕದಲ್ಲಿ ಆರಂಭಿಸಿದೆ. ಇದರೊಂದಿಗೆ ದಿನಕ್ಕೆ 1,00,000 ದಷ್ಟು ಮಾಸ್ಕ್ ಗಳನ್ನು ಉತ್ಪಾದಿಸುವ ಗುರಿಯನ್ನು ಬಾಷ್ ಹೊಂದಿದೆ. ಈ ಮೂಲಕ ಭಾರತದಲ್ಲಿ ದೊಡ್ಡ ಮಟ್ಟದ ಸಮುದಾಯಕ್ಕೆ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಈ ಮಾಸ್ಕ್ ತಯಾರಿಕೆಯಿಂದ ಮಾರುಕಟ್ಟೆಯಲ್ಲಿ ಮಾಸ್ಕ್ ನ ಬೇಡಿಕೆಯ ಹೊರೆಯನ್ನು ಕಡಿಮೆ ಮಾಡಲಿದೆ. ಈ ಮಾಸ್ಕ್ ತಯಾರಿಕಾ ಘಟಕವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತಾಧಿಕಾರಿಗಳು ವರ್ಚುವಲ್ ಸಮಾರಂಭದ ಮೂಲಕ ಉದ್ಘಾಟನೆ ಮಾಡಿದರು.
ನಿಮ್ಮ ಕಾರನ್ನ ಎಲೆಕ್ಟ್ರಿಕ್ ಕಾರಾಗಿ ಬದಲಾಯಿಸಬಹುದು - ಇಲ್ಲಿದೆ ಸುಲಭ ವಿಧಾನ
ಭಾರತದಲ್ಲಿ ನಾಗನಾಥಪುರ ಸೇರಿದಂತೆ ವಿಶ್ವದ ತನ್ನ ಐದು ಆಟೋಮೇಟೆಡ್ ಉತ್ಪಾದನಾ ಘಟಕಗಳಲ್ಲಿ ಬಾಷ್ ಜಾಗತಿಕವಾಗಿ ದಿನಕ್ಕೆ 5,00,000 ಕ್ಕೂ ಅಧಿಕ ಮಾಸ್ಕ್ ಗಳನ್ನು ತಯಾರಿಸುತ್ತಿದೆ. ಈ ಮಾಸ್ಕ್ ಗಳನ್ನು ಬಾಷ್ ನ ವಿಶೇಷ ಘಟಕವು ವಿನ್ಯಾಸಗೊಳಿಸಿದೆ. ಈ ಮಾಸ್ಕ್ ಗಳು ಭಾರತದ ಬಾಷ್ ನಲ್ಲಿ ಲಭ್ಯವಿವೆ. ಬಾಷ್ ನ ಮತ್ತೊಂದು ವಿಶಿಷ್ಟವಾದ ನಿರ್ಧಾರವೆಂದರೆ 30,00,000 ಕ್ಕೂ ಅಧಿಕ ಮಾಸ್ಕ್ ಗಳನ್ನು ಎರಡನೇ ಹಂತದ ಕೋವಿಡ್-19 ವಿರುದ್ಧ ಸೇವೆ ಸಲ್ಲಿಸುತ್ತಿರುವ ಆರೋಗ್ಯ ರಕ್ಷಣೆ ಕಾರ್ಯಕರ್ತರು, ಪೊಲೀಸ್, ಮುನ್ಸಿಪಲ್ ಕಾರ್ಪೊರೇಷನ್ ಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಎನ್ ಜಿಒಗಳಿಗೆ ಉಚಿತವಾಗಿ ನೀಡಲಿದೆ. ಈ ಮೂರು ಪದರದ ಮಾಸ್ಕ್ ಗಳು ಬಳಕೆದಾರನ ಮೂಗು ಮತ್ತು ಗಂಟಲಿನೊಳಗೆ ಬ್ಯಾಕ್ಟೀರಿಯಾಗಳು ಪ್ರವೇಶ ಮಾಡುವುದನ್ನು ನಿಯಂತ್ರಣ ಮಾಡುತ್ತವೆ. ಈ ಮಾಸ್ಕ್ ಗಳು ಸಂಪೂರ್ಣವಾಗಿ ಉಚಿತವಾಗಿ ವಿತರಣೆ ಆಗುವ ಹಿನ್ನೆಲೆಯಲ್ಲಿ ಮಾಸ್ಕ್ ನ ಕೆಳಭಾಗದಲ್ಲಿ ಬಾಷ್ ಕಂಪನಿಯ ಲೋಗೋವನ್ನು ಒಳಗೊಂಡಿರುತ್ತವೆ.
ಬಾಷ್ ನಲ್ಲಿ ನಮ್ಮ ಎಲ್ಲಾ ಕಾರ್ಯಾಚರಣೆಗಳಲ್ಲಿ ನಮ್ಮ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನೀಡುತ್ತಿದ್ದೇವೆ. ಕೋವಿಡ್-19 ವಿರುದ್ಧದ ಹೋರಾಟಕ್ಕೆ 50 ಕೋಟಿ ರೂಪಾಯಿಗಳ ದೇಣಿಗೆಯ ನಮ್ಮ ಬದ್ಧತೆಯ ಒಂದು ಭಾಗ ಇದಾಗಿದೆ. ನಮ್ಮ ಆವಿಷ್ಕಾರಕ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ನಾವು ಈ ಸರ್ಜಿಕಲ್ ಮಾಸ್ಕ್ ಗಳನ್ನು ಉತ್ಪಾದಿಸುತ್ತಿದ್ದೇವೆ ಎಂದು ಬಾಷ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ & ಬಾಷ್ ಗ್ರೂಪ್ ಇನ್ ಇಂಡಿಯಾದ ಅಧ್ಯಕ್ಷರಾದ ಸೌಮಿತ್ರ ಭಟ್ಟಾಚಾರ್ಯ ಹೇಳಿದರು.
ಸ್ಥಳೀಯ ಮಟ್ಟದ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಬಾಷ್ ತನ್ನ ಜರ್ಮನಿ, ಮೆಕ್ಸಿಕೋ ಮತ್ತು ಭಾರತದಲ್ಲಿನ ಘಟಕಗಳಲ್ಲಿ ಮಾಸ್ಕ್ ಉತ್ಪಾದನೆಯನ್ನು ಮಾಡುತ್ತಿದೆ. ಈ ಮೂಲಕ ವಿಶ್ವದಲ್ಲಿ ಕೋವಿಡ್-19 ನಿಂದ ಸಮುದಾಯವನ್ನು ರಕ್ಷಣೆ ಮಾಡುವ ಉಪಕ್ರಮದಲ್ಲಿ ಕೈಜೋಡಿಸಿದೆ. ನಮ್ಮ ಈ ಮಾಸ್ಕ್ ತಯಾರಿಕೆಯು ಭಾರತ ಸರ್ಕಾರದ `ಮೇಕ್ ಇನ್ ಇಂಡಿಯಾ‘ ಪರಿಕಲ್ಪನೆಯನ್ನು ಉತ್ತೇಜಿಸಲಿದೆ. ಒಟ್ಟಾರೆ, ಬಾಷ್ ನ ಐದು ಘಟಕಗಳಲ್ಲಿ ಜೂನ್ ಅಂತ್ಯದ ವೇಳೆಗೆ ತಿಂಗಳಿಗೆ 10 ದಶಲಕ್ಷಕ್ಕೂ ಅಧಿಕ ಮಾಸ್ಕ್ ತಯಾರಿಸಲಿದೆ.