ಮೇಷ

ತಾಳ್ಮೆಯ ಪರೀಕ್ಷೆ

ಶುಭ ಕಾರ್ಯಾಸಕ್ತಿ, ಪ್ರೇಮ ಕಾಮಗಳ ಸಮ್ಮಿಳಿತ ಹೊಸ ವರ್ಷ ನಿಮ್ಮದಾಗಲಿದೆ! ಸ್ತ್ರೀಯರಿಗೆ ಹೆಚ್ಚು ಶುಭ ಫಲ. ವ್ಯವಹಾರದಲ್ಲಿ ನಿರೀಕ್ಷೆ, ಪರಿಶ್ರಮ ಹೆಚ್ಚುವುದು. ಅಷ್ಟೇ ನಿರಾಸೆಯನ್ನು ತರುವುದು. ಸಮತೆಯನ್ನು ಕಾಪಾಡಿಕೊಳ್ಳಿ. ಬಂಧುಮಿತ್ರರು ಸ್ನೇಹಿತರು ಹೆಚ್ಚಾಗುವರು. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ! ಅಧಿಕಾರಿ, ಮಂತ್ರಿ ಮಹೋದಯರಿಗೆ ದಯನೀಯ ವರ್ಷವಿದು. ತಾಳ್ಮೆ ಬಹಳವಾಗಿ ಪರೀಕ್ಷೆಯಾಗುವುದು. ಶ್ರೀ ಉಮಾಮಹೇಶ್ವರಿ, ಗುರು ಸ್ಕಂದ ಗಣಪತಿ ಯಾಗ, ಪೂಜೆಗಳಿಂದ ಇಷ್ಟಾರ್ಥ ಸಿದ್ಧಿ. ಸೋಮವಾರ, ಮಂಗಳವಾರ, ಶುಕ್ರವಾರ ಶುಭ 

ವೃಷಭ

ಹೊಸ ಶಕ್ತಿ, ಪ್ರೇಮೋತ್ಕರ್ಷ

ಹೊಸ ಶಕ್ತಿ ಬಂದಂತೆ, ಹೊಸ ವ್ಯಕ್ತಿಯಂತೆ ಅನುಭವ ಆಗುವುದು. ಪ್ರೇಮ ಜೀವನ ಉತ್ಕರ್ಷ ಪಡೆಯುವುದು. ಮದುವೆ, ಮನೆ, ಮಕ್ಕಳು, ಶೂನ್ಯವನ್ನು ತುಂಬಲಿದ್ದಾರೆ. ವ್ಯವಹಾರ ಕೆಲಸ ಕಾರ‌್ಯದಲ್ಲಿ ಸಜ್ಜನರ ಸಹವಾಸ ತರುವುದು. ಸ್ತ್ರೀಯರಿಗೆ ವಿಶೇಷ ಫಲ ಮತ್ತು ಬಯಕೆಗಳು ಕಾಡುವವು. ಸದ್ಗುರು ಬೋಧನೆಯ ಅಭ್ಯಾಸ, ಶ್ರೀಹರಿಯ ಸ್ಮರಣೆ ಮಾಡಿರಿ. ಅಷ್ಟಮ ರವಿ-ಶನಿಗಳು ಕುಟುಂಬ ವೈಮನಸ್ಯ ತಂದಾರು. ಅನಾರೋಗ್ಯ, ವಾತಬಾಧೆ ಉಂಟಾಗುವುದು. ವ್ಯಾಯಾಮ, ಆಹಾರ ಔಷಧಗಳ ಬಗ್ಗೆ ಕಾಳಜಿ ಇರಲಿ. ಸೋಮವಾರ, ಗುರುವಾರ ಶುಭ

ಮಿಥುನ

ಕೆಟ್ಟ ಹೆಸರಿನ ಭೀತಿ

ಜನ್ಮ ಸೇರಲಿರುವ ರಾಹು ಕಲಹಗಳಿಗೆ ಕಾರಣನಾಗುವ. ಮಾತು ಬಂಗಾರ, ಮುತ್ತು ಒಡೆದರೆ ಹೋಯಿತು ಎಂಬುದನ್ನು ನೆನೆದು ದಿನಗಳ ಪ್ರಾರಂಭಿಸಿರಿ. ಒಳ್ಳೆಯದೇ ಆಗುವುದು. ಭಾವನೆಗಳ, ಉಬ್ಬಸಗಳ ವರ್ಷವೂ ಇದಾಗಿದ್ದು, ಶ್ರೀ ದುರ್ಗೆಯ ಸೇವೆಯಿಂದ ಶುಭ. ಸರ್ಕಾರ, ಅಧಿಕಾರಿಗಳು ಬಹುಬಾಧೆ ಪಡುವರು. ಕೆಟ್ಟ ಹೆಸರು ಎರಗೀತು. ಶತ್ರುಗಳ ಉಪಟಳವೋ ನೀವೇ ಪರರಿಗೆ ಶತ್ರುವೋ ತಿಳಿಯಲಾಗದು! ಶ್ರೀಕಂಠೇಶ್ವರನ ಸೇವೆ ಮಾಡಿ- ತಿಮ್ಮಪ್ಪನ ದರ್ಶನವೂ ಸಹ. ಸೋಮವಾರ, ಶುಕ್ರವಾರ ಶುಭ

ಕರ್ಕಾಟಕ

ಮನಸ್ಸಿಗೆ ತಳಮಳ

ಹೇಳಲಾರೆನು ತಾಳಲಾರೆನು ಮನದ ತಳಮಳವ ಎಂದಂತೆ ಈ ವರ್ಷ ನಿಮ್ಮದು. ಬಹು ಆಶೆಗಳ ವೃದ್ಧಿ ಹ್ರಾಸಗಳ ಕಾಣುವಿರಿ. ಉದ್ಯೋಗದಲ್ಲಿ ಬದಲಾವಣೆ. ವಾಸವೂ ಪರ ಊರ ತಿರುಗೂ ಸಹ ಆದೀತು. ಕುಟುಂಬ, ತಾಯಿಯ ಕಡೆ ಆಸ್ತಿಪಾಸ್ತಿ ವಿಚಾರ ಚಾಲನೆ ಪಡೆವುದು. ವೆಚ್ಚಗಳಿಗೆ ಮಿತಿಯಿಲ್ಲ, ಆಸೆಯಂತೆಯೇ! ಹಾಗಾಗಿ ವಿಚಾರ ಮಾಡಿ, ತಾಳ್ಮೆಯಿಂದ ವ್ಯವಹರಿಸಿ. ರಾಜಕಾರಣಿಗಳಿಗೆ ಕೈಗೆ ಬಂದಿದ್ದು ಬಾಯಿಗೆ ಬಾರದ ಪರಿಸ್ಥಿತಿ ಉಂಟಾದೀತು. ಅನಾರೋಗ್ಯದಿಂದ ಅಧಿಕಾರಿ ವರ್ಗ ಬಳಲುವರು. ಸ್ತ್ರೀಯರಿಗೆ ಅಧಿಕ ಬಾಧೆ. ಶ್ರೀದುರ್ಗೆ, ನಾಗಶಾಂತಿ, ಗೋಸೇವೆಗಳಿಂದ ದಾರಿದ್ರ್ಯ ಪರಿಹಾರ. ಶುಕ್ರವಾರ ಶುಭ

ಸಿಂಹ

ಪುಣ್ಯ ಸಂಪಾದನೆ

ಧೈರ್ಯ ಸಾಹಸವಂತ ಸ್ವಭಾವವೇ ಶ್ರೀರಕ್ಷೆ. ವ್ಯಯದ ರಾಹು, ಪರಿಚಯ ಶನಿ ಬಹು ಬಂಧನ ತಂದಾರು. ನಿಂತ ನೀರಾದ ಉದ್ಯೋಗ, ಸಂಬಂಧಗಳು. ನಿಮ್ಮ ಅನುಭವವನ್ನು ಹೂಡಿ ಮುನ್ನಡೆಯಿರಿ. ಸ್ತ್ರೀಯರಿಂದ ಶುಭ ಫಲಗಳ, ಸಹಾಯಗಳ ಪಡೆಯುವಿರಿ. ಅವರಲ್ಲಿ ಉತ್ತಮ ಮನೋಭಾವವಿರಲಿ. ತಾತ್ಕಾಲಿಕ ಪರದೇಶ, ಪರಸ್ಥಳ ವಾಸವಾಗುವುದು. ಧರ್ಮ ಸಾಧನೆಗೆ ಖರ್ಚು ಮಾಡುವಿರಿ. ಪುಣ್ಯ ಬರುವುದು. ಅದೇ ಸಹಾಯಕ್ಕೆ ಬರುವುದು. ರಾಜಕಾರಣಿಗಳ ಅಧಿಕಾರ ಕೈಜಾರುವುದು. ಚಿಂತಾಕ್ರಾಂತರಾಗುವ ಸಂಭವ ಇದೆ. ಸೀತಾರಾಮ ಕಲ್ಯಾಣ ಸೇವೆ, ದುರ್ಗಾ ಶಾಂತಿಗಳಿಂದ ನೆಮ್ಮದಿ. ಭಾನುವಾರ, ಗುರುವಾರ ಶುಭ

ಕನ್ಯಾ

ಸಾಹಸ ಯಾತ್ರೆ

ಚಂಚಲ ಸ್ವಭಾವದ ನಿಮಗೆ ವರ್ಷದಾದಿ ಹರ್ಷಕರವೇ. ಹಸ್ತಾ, ಸ್ವಾತೀ ನಕ್ಷತ್ರದವರಿಗೆ ಹೆಚ್ಚು ಲಾಭ ಆಗುವುದು. ಪ್ರೇಮ ವಿಷಯದಲ್ಲಿ ನೀವು ಆಸಕ್ತಿಕರರಾದರೂ ನಿಮ್ಮ ಸಂಬಂಧಿ ಅದನ್ನು ಅರ್ಥ ಮಾಡುವಲ್ಲಿ ನಿಧಾನ ತೋರಿಯಾರು! ಸಹನೆ ಇರಲಿ. ಚಿತ್ರರಂಗದವರಿಗೆ ಅಧಿಕ ಉತ್ತಮ ಅವಕಾಶ ಒದಗುವುದು. ಮಿತ್ರರು ಜೊತೆಯಾಗಿ ವ್ಯಾಪಾರ ವ್ಯವಹಾರ ಮಾಡಲು ಮುಂದಾಗುವಿರಿ. ಧರ್ಮ ಕಾರ‌್ಯಗಳಲ್ಲಿ ಶ್ರದ್ಧೆಯಿಂದ ತೊಡಗಿರಿ, ಮುಂದೆ ನಿಮ್ಮನ್ನು ಕಾಪಾಡುವುದು. ಶ್ರೀರಾಯರ ದರ್ಶನ ಉತ್ತಮ. ಸಾಹಸ ಯಾತ್ರೆಗಳನ್ನು ಕೈಗೊಳ್ಳುವಿರಿ. ಶುಭಾಶುಭ ಮಿಶ್ರ ವರ್ಷ ಅನುಭವಕ್ಕೆ ಬರುವುದು. ಸೋಮವಾರ, ಶುಕ್ರವಾರ ಶುಭ

ತುಲಾ

ಕಾಲಕ್ಕೆ ತಕ್ಕಂತೆ ಬದುಕು

ಈ ವರ್ಷ ನಿಮ್ಮದೇ! ಧರ್ಮಾರ್ಥಕಾಮಗಳು ಅಪರೂಪವಾಗಿ ಮನುಷ್ಯನ ಸೇರುವುವು. ಕಾಲದ ಪ್ರಭಾವ, ಯಥಾವೈ ಕಾಲಃ ತಥಾಸುಖ ದುಃಖೇ ಚ ಎಂದಂತೆ ಒದಗಿದ ಸುಸಮಯವನ್ನು ಚೆನ್ನಾಗಿ ಉಪಯೋಗ ಮಾಡಿ. ಅವರವರ ದಶಾಭುಕ್ತಿಗಳು ಹೇಗೋ ಅದರಂತೆ ಶುಭದ ಪ್ರಮಾಣಗಳು ಬರುವುದು. ಚಿತ್ರರಂಗದ ತುಲಾಜನಿತರಿಗೆ ವಿಶೇಷ ಬಡ್ತಿ, ಜನಾನುರಾಗ ಲಭಿಸಲಿದೆ. ಕುಶಲ ಕರ್ಮಿಗಳು, ಉಪನ್ಯಾಸಕರು, ಗಾಯಕ, ನೃತ್ಯಪಟುಗಳಿಗೆ ಬೇಡಿಕೆ ಹೆಚ್ಚುವುದು. ರಾಜಕೀಯ, ಅಧಿಕಾರಸ್ಥರಿಗೆ ಸ್ಥಾನ ವೃದ್ಧಿ, ಶತ್ರುನಾಶಾದಿ ಶುಭವಿದೆ. ಸೋಮವಾರ, ಶುಕ್ರವಾರ, ಗುರುವಾರ ಶುಭ

ವೃಶ್ಚಿಕ

ಕಷ್ಟಗಳೆಲ್ಲ ಪರಿಹಾರ

ಅದ್ಭುತ ಸಾಮರ್ಥ್ಯವಿರುವ ನಿಮ್ಮನ್ನು ಕಳೆದೆರಡು ವರ್ಷ ನುಚ್ಚುನೂರು ಮಾಡಿದೆ. ಹೇಳತೀರದ ಕಷ್ಟಗಳು ಪರಿಹಾರದತ್ತ ಮುಖ ಮಾಡುವ ವರ್ಷವಿದು. ಸಮಾಧಾನ ತಾಳಿ! ತಾಯಿ ವರ್ಗಕ್ಕೆ ಅಧಿಕ ಬಾಧೆ ಇದೆ. ಖರ್ಚು ವೆಚ್ಚಕ್ಕೆ ಪಣತೊಟ್ಟು ನಿಂತಿದೆ! ಧೈರ್ಯವಿರಲಿ. ಮುನ್ನ ಮಾಡಿದ ಧರ್ಮ ಬೆನ್ನು ಕಾಯುತ್ತಿದೆ. ದೇವರು ರಕ್ಷಿಸುವನು. ಹಣ ಹೂಡಿಕೆಯಲ್ಲಿ ಜಾಗ್ರತೆ ಇರಲಿ. ಅಧಿಕಾರಿ ವರ್ಗದಿಂದ ಸುರಕ್ಷಿತ ಅಂತರವಿರಲಿ. ಶ್ರೀ ಸುಬ್ರಮಣ್ಯ, ದುರ್ಗೆಯರ ಮೊರೆ ಹೋಗಿ. ವರ್ಷಾಂತ್ಯಕ್ಕೆ ಶುಭಫಲಗಳು ಕಾದು ನಿಂತಿವೆ! ಮಂಗಳವಾರ, ಗುರುವಾರ ಶುಭ

ಧನುಸ್ಸು

ಅನಾರೋಗ್ಯದ ಕಾಟ

ಶೌರ್ಯವಂತರು ನೀವು. ನಿಮ್ಮಿಂದ ದುರ್ಬಲರು ಉದ್ಧಾರವಾಗುವರು. ಲಗ್ನದ ರವಿ, ಲಾಭದ ಚಂದ್ರ, ಶುಕ್ರ ನಿಮ್ಮ ತೇಜಸ್ಸನ್ನು ಹೆಚ್ಚಿಸುವರು. ಅನಾರೋಗ್ಯ ಉದರಬೇನೆ ಕಾಡೀತು. ಜನ್ಮ ಶನಿ ಅಷ್ಟಮ ರಾಹು ಸಾಕು ಸಾಕು ಮಾಡುವರು. ರಾಜಕೀಯ ವರ್ಗಕ್ಕೆ ಬಹು ಹಿನ್ನಡೆಯಾಗುವುದು. ಉದ್ಯೋಗ ಕಾರ‌್ಯಗಳ ಮಾಡುವಿರಿ. ವೃದ್ಧರಿಗೆ ನಿಮ್ಮಿಂದ ಅನುಕೂಲವಾಗುವುದು. ನವಗ್ರಹ ಶಾಂತಿ, ನಾಗಪೂಜೆಗಳಿಂದ ಬಾಧೆ ತೊಲಗುವುದು. ರವಿವಾರ, ಗುರುವಾರ ಶುಭ

ಮಕರ

ದೈವಯೋಗದ ವರ್ಷ

ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ ಎಂಬಂತೆ ದೈವ ಯೋಗದ ವರ್ಷವಿದು. ವ್ಯಯದ ಶನಿಯ ಬಾಧೆ ಉಳಿದು ಬೇರಾವುದೇ ಗ್ರಹಾರಿಷ್ಟ ದೋಷಗಳಿಲ್ಲ. ನಿಮ್ಮ ಜಾತಕ ವಿವರ ಪರಿಶೀಲನೆ ಮಾಡಿಕೊಳ್ಳಿ. ಭಾಗ್ಯದ ರಾಹು ಅನೇಕ ಅಶಾಪಾಶಗಳಿಗೆ ಕಾರಣನಾಗುವ. ನೌಕರಿ, ಅಧಿಕಾರ, ವಾಸ ಸ್ಥಾನಗಳು ಬದಲಾಗುವ, ಬಡ್ತಿಯಾಗುವ ವರ್ಷವೂ ಇದು. ಶ್ರೀ ದುರ್ಗಾ ಕ್ಷೇತ್ರದಲ್ಲಿ ಅನ್ನದಾನ ಸೇವೆಯಾಗಲಿ. ಅವರನ್ನು ಸಂಭಾಳಿಸುವುದು ಸವಾಲಾಗುವುದು. ವಾಹನ ಪ್ರಯಾಣದಲ್ಲಿ ಜಾಗ್ರತೆಯಿರಲಿ. ಶ್ರೀ ಮಂಜುನಾಥನ ದರ್ಶನ ಅವಶ್ಯಕ ಮಾಡಿ. ಚಂದ್ರವಾರ, ಶುಕ್ರವಾರ ಶುಭ

ಕುಂಭ

ಚಿಂತೆಗಳ ಕಂತೆ

ಕನ್ನಡಿಯ ಗಂಟಿನಂತೆ ರಾಜಯೋಗವು ಕಂಡುಬರುವುದು. ಆಶೆಗಳಿಗೆ ಮರುಳಾಗಿ ಧರ್ಮ ಹಾನಿಯಾದೀತು ಎಚ್ಚರಿಕೆ ಇರಲಿ. ವ್ಯಯದ ಕೇತು ಹೇಳಲಾಗದ ಚಿಂತೆಗಳ ತರುವ. ಅಧ್ಯಾತ್ಮ ಜೀವನ ಇಷ್ಟವಾಗುವ ಅನುಭವ ಪಡೆಯುವಿರಿ. ದ್ವಿತೀಯ ಕುಜ, ಬಾಧಾ ರವಿ-ಶನಿಯ ಸಂಚಾರ ಅತ್ತ ಅಧ್ಯಾತ್ಮವೂ ಅಲ್ಲದ, ಇತ್ತ ಸಂಸಾರವೂ ಅಲ್ಲದ ಅತಂತ್ರ ಮನೋದಶೆಗೆ ನೂಕುವುದು. ಶ್ರೀ ಗೀತೆಯನ್ನು ಶ್ರದ್ಧೆಯಿಂದ ಓದಿ, ಮನನ ಮಾಡಿ, ಸಮಾಧಾನ ಬರುವುದು. ಸ್ತ್ರೀಯರಿಗೆ ಇದೆಲ್ಲವೂ ಹೆಚ್ಚು ಲಾಭ ತರುವುದು. ರುದ್ರಶಾಂತಿ ಹೋಮ, ಶ್ರೀನರಸಿಂಹ ಸೇವೆಗಳಿಂದ ದೋಷ ನಿವೃತ್ತಿ. ಮಂಗಳವಾರ, ಗುರುವಾರ ಶುಭ

ಮೀನ

ಪರಿವರ್ತನೆಯ ಕಾಲ

ಚಂಚಲರಾದರೂ ಈಗ ಸ್ಥಿರ ಮನಸ್ಕರಾಗುವಿರಿ! ವಿವೇಚನೆ ಬೆಳೆವುದು. ಪ್ರೌಢತೆಯತ್ತ ಸಾಗುವ ವರ್ಷವಿದು. ದೇವರು ಗುರುಗಳು ಅಂತ ಗಮನ ಕೊಡದೇ ಕಾಲ ಕಳೆದುದಕ್ಕೆ ಪಶ್ಚಾತ್ತಾಪ ಪಡುವಿರಿ. ನವಮದ ಗುರುವು ಬಹುಪರಿವರ್ತ ನೆಗಳ ತರುವ. ತಾಳ್ಮೆಯಿರಲಿ. ವ್ಯಾಪಾರ ಉದ್ಯೋಗ ಉತ್ತಮ. ಶ್ರಮ ಹೆಚ್ಚು, ಫಲ ನಿಧಾನವಾಗುವುದು. ಕುಜ ಗುರು ರಾಹುಗಳು ವಿಪರೀತ ಫಲಗಳನ್ನು ತರುವರು. ಚಿತ್ರರಂಗ, ಕಲಾವಿದರಿಗೆ ಕಷ್ಟನಷ್ಟ. ವರ್ಷಾಂತ್ಯಕ್ಕೆ ಸುಧಾರಿಸುವುದು. ರಾಜಕಾರಣಿಗಳಿಗೆ, ಅಧಿಕಾರಿ ವರ್ಗಕ್ಕೆ ಮಾನಸಿಕ ಗೊಂದಲ ಕಾಲ. ಶ್ರೀ ವಿಷ್ಣು ಸೂಕ್ತ, ಸಹಸ್ರನಾಮ ಹೋಮ ನಡೆಯಲಿ ಗುರುವಾರ ಶುಭ