ಅಡುಗೆ ಕೋಣೆ  ಮನೆಯ ಪವರ್ ಹೌಸ್ ಇದ್ದಂತೆ. ಇಲ್ಲಿಂದಲೇ ಮನೆಯ ಸದಸ್ಯರೆಲ್ಲರಿಗೂ ಎನರ್ಜಿ ಹರಿಯುವುದು. ಕುಟುಂಬಸ್ಥರ ಆರೋಗ್ಯ ನಿರ್ಧರಿಸುವ, ಕಾಪಾಡುವ ಸ್ಥಳವಿದು. ಇಲ್ಲಿ ಚೂರೇ ಚೂರು ಏರುಪೇರಾದರೂ ಮನೆಯ ಎಲ್ಲರ ಆರೋಗ್ಯ ಎಡವಟ್ಟಾಗಬಹುದು, ಮನಸ್ಸು ಕೆಡಬಹುದು. ಹೀಗಾಗಿ, ಅಡುಗೆ ಕೋಣೆಯ ವಾಸ್ತು ಸರಿಯಿರುವುದು ಬಹಳ ಮುಖ್ಯ. ವಾಸ್ತುಶಾಸ್ತ್ರವು ಗೋಡೆಯ ಬಣ್ಣದಿಂದ ಹಿಡಿದು ಕಿಚನ್‌ನ ಪ್ರತಿ ಸಾಮಗ್ರಿಯನ್ನೂ ಯಾವ ದಿಕ್ಕಿಗಿಟ್ಟರೆ ಹೆಚ್ಚಿನ ಲಾಭ ಪಡೆಯಬಹುದು, ಮನೆಗೆ ಪಾಸಿಟಿವಿಟಿ ತರಬಹುದೆಂಬುದನ್ನು ಹೇಳುತ್ತದೆ. 

ದಿಕ್ಕು
ಅಗ್ನಿಯು ಆಗ್ನೇಯ ದಿಕ್ಕಿನ ಒಡೆಯನಾಗಿರುವುದರಿಂದ ಅಡುಗೆ ಕೋಣೆ ಮನೆಯ ಆಗ್ನೇಯ ದಿಕ್ಕಿನಲ್ಲಿರುವುದು ಹೆಚ್ಚು ಸಮಂಜಸ. ಇದಕ್ಕೆ ನಿಮ್ಮ ಮನೆಯಿರುವ ಸ್ಥಳ ಅವಕಾಶ ಮಾಡಿಕೊಡುತ್ತಿಲ್ಲವೆಂದಾದಲ್ಲಿ ವಾಯುವ್ಯ ಭಾಗ ಆರಿಸಿಕೊಳ್ಳಬಹುದು. 

ಬಾಗಿಲು
ಅಡುಗೆಮನೆಯ ಬಾಗಿಲು ಪೂರ್ವ, ಪಶ್ಚಿಮ, ಉತ್ತರದಲ್ಲಿರಬಹುದು. ಆದರೆ, ಯಾವುದೇ ಮೂಲೆಯಲ್ಲಿ ಬಾಗಿಲಿಡುವುದು ಒಳ್ಳೆಯದಲ್ಲ. 

ಮನೆಗೆ ವಾಸ್ತು ಹೇಗಿರಬೇಕು?

ಬಣ್ಣ
ಅಡುಗೆ ಕೋಣೆಯ ಗೋಡೆ ಹಾಗೂ ನೆಲದ ಬಣ್ಣವು ವಾಸ್ತು ಪ್ರಕಾರ ಹಳದಿ,ಆರೆಂಜ್, ಕೆಂಪು, ಚಾಕೋಲೇಟ್ ಅಥವಾ ಗುಲಾಬಿ ಬಣ್ಣವಿರಬೇಕು. ಕಪ್ಪು ಬಣ್ಣ ಕಿಚನ್‌ಗೆ ಅಲ್ಲವೇ ಅಲ್ಲ.

 

ಸಾಧನಗಳು
ವಿದ್ಯುತ್ ಸಾಧನಗಳಾದ ರೆಫ್ರಿಜರೇಟರ್, ಮೈಕ್ರೋಓವನ್,  ಎಲೆಕ್ಟ್ರಿಕ್ ಸ್ಟೌವ್ ಎಲ್ಲವೂ ಅಡುಗೆಮನೆಯ ಆಗ್ನೇಯ ದಿಕ್ಕಿನಲ್ಲಿರಬೇಕು. ಆದರೆ ಸ್ಟೌವ್ ಯಾವತ್ತೂ ಬಾಗಿಲಿಗೆ ಮುಖ ಮಾಡಿರಬಾರದು. ಸಿಲಿಂಡರನ್ನು ಕೂಡಾ ಆಗ್ನೇಯ ಮೂಲೆಯಲ್ಲಿಡುವುದು ಉತ್ತಮ. ಅಡಿಗೆ ಮಾಡುವವರು ಪೂರ್ವಕ್ಕೆ ಮುಖ ಮಾಡಿ ನಿಲ್ಲಬೇಕು. ವರು ಪಶ್ಚಿಮಕ್ಕೆ ಮುಖ ಮಾಡಿ ನಿಂತು ಅಡಿಗೆ  ಮಾಡುವುದರಿಂದ ಆರೋಗ್ಯ ಸಮಸ್ಯೆಗಳಾಗಬಹುದು.

ನೀರು
ಸಿಂಕ್ ಕಿಚನ್‌ನಈಶಾನ್ಯ ಭಾಗದಲ್ಲಿರಲಿ. ಸಾಧ್ಯವಾದಷ್ಟು ಗ್ಯಾಸ್ ಸ್ಟೌವ್‌ನಿಂದ ದೂರವಿರಲಿ. ಕುಡಿಯುವ ನೀರು, ವಾಟರ್ ಬಾಟಲ್ ಎಲ್ಲವೂ ಈ ಮೂಲೆಯಲ್ಲೇ ಇರಬೇಕು. ಕಿಚನ್ ಸ್ಲ್ಯಾಬ್ ಹಳದಿ, ಹಸಿರು ಅಥವಾ ಆರೆಂಜ್ ಬಣ್ಣದಲ್ಲಿರಬೇಕು. 

ವೆಂಟಿಲೇಟರ್ಸ್
ಅಡುಗೆಮನೆಯ ದೊಡ್ಡ ಕಿಟಕಿಗಳು ಪೂರ್ವ ಭಾಗದಲ್ಲಿದ್ದರೆ ಸಣ್ಣ ಕಿಟಕಿಯು ದಕ್ಷಿಣ ಭಾಗದಲ್ಲಿರಬೇಕು. ಇದರಿಂದ ಬೆಳಗಿನ ಸೂರ್ಯ ಕಿರಣಗಳು ಅಡುಗೆಮನೆಗೆ ಉತ್ತಮ ಬೆಳಕಿರುವಂತೆ ನೋಡಿಕೊಳ್ಳುತ್ತವೆ. ಪ್ರತಿ ಅಡುಗೆ ಕೋಣೆಯಲ್ಲೂ ಒಂದಾದರೂ ಕಿಟಕಿ ಪೂರ್ವದಲ್ಲಿರಲೇಬೇಕು. ಎಕ್ಸ್ಹಾಸ್ಟ್ ಫ್ಯಾನ್‌ಗಳು ಯಾವಾಗಲೂ ಅಡುಗೆಮನೆಯ ದಕ್ಷಿಣದಲ್ಲಿರಬೇಕು. 

ಡೈನಿಂಗ್
ಡೈನಿಂಗ್ ಟೇಬಲ್ ಅಡುಗೆ ಮನೆಯ ಈಶಾನ್ಯ ಭಾಗದಲ್ಲಿದ್ದಾಗ ಮನೆ ಮಂದಿಯ ಆರೋಗ್ಯ ಹೆಚ್ಚು ಚೆನ್ನಾಗಿರುತ್ತದೆ. ಆದರೆ, ಯಾವುದೇ ಕಾರಣಕ್ಕೂ ಕಿಚನ್ ಮಧ್ಯೆ ಡೈನಿಂಗ್ 
ಟೇಬಲ್ ಇಡಬೇಡಿ. ಆಹಾರ ತೆಗೆದುಕೊಳ್ಳುವವರು ಪೂರ್ವ ಅಥವಾ ಉತ್ತರಕ್ಕೆಮುಖ ಮಾಡಿದ್ದರೆ ಜೀರ್ಣಸಮಸ್ಯೆಗಳು ಇರುವುದಿಲ್ಲ. 

ಸ್ಟೋರೇಜ್
ದಿನಸಿ ಸಾಮಗ್ರಿಗಳನ್ನಿಡುವ ಸ್ಥಳ, ಪಾತ್ರೆಗಳನ್ನಿಡುವ ಅಲ್ಮೆರಾವು ಯಾವಾಗಲೂ ಕಡ್ಡಾಯವಾಗಿ ದಕ್ಷಿಣ ಹಾಗೂ ಪಶ್ಚಿಮ ಭಾಗದ ಗೋಡೆಗಳಲ್ಲೇ ಇರಬೇಕು. ಉತ್ತರ ಹಾಗೂ ಪೂರ್ವಕ್ಕೆ ಅಲ್ಮೆರಾ ಇಡುವುದು ಸರಿಯಲ್ಲ.

ಫ್ಲೋರಿಂಗ್
ಸೆರಾಮಿಕ್ ಟೈಲ್ಸ್, ಮೊಸಾಯಿಕ್,ಮಾರ್ಬಲ್ ಫ್ಲೋರ್‌ಗಳು ಅಡುಗೆ ಮನೆ ಉತ್ತಮ. ಅದರಲ್ಲೂ ಸೆರಾಮಿಕ್ ಟೈಲ್ಸ್ ಧೂಳು, ಸ್ಕ್ರ್ಯಾಚ್ ಹಾಗೂ ಕಲೆ ಮುಕ್ತವಾಗಿರುವುದರಿಂದ ಕಿಚನ್‌ಗೆ ಅದೇ ಬೆಸ್ಟ್.