ಹಳೆ ಬಟ್ಟೆ ಹಾಗೂ ಟೀ ಶರ್ಟ್ ಸಾಮಾನ್ಯವಾಗಿ ನೆಲೆ ಒರೆಸಲು ಬಳಕೆ ಆಗೋದು ಸಾಮಾನ್ಯ. ಆದ್ರೆ ಮರುಬಳಕೆ ಹೆಸರಲ್ಲಿ ಈ ಬಟ್ಟೆಗಳ ಬಳಕೆ ಎಷ್ಟು ಸರಿ? ಇಲ್ಲಿದೆ ಉತ್ತರ
ಮನೆಯಲ್ಲಿರುವ ಹಳೆ ವಸ್ತುಗಳನ್ನು ನಾವು ಕಸಕ್ಕೆ ಹಾಕೋದು ಅಪರೂಪ. ಒಂದು ಕವರ್ ನಿಂದ ಹಿಡಿದು ಎಲ್ಲ ವಸ್ತುಗಳನ್ನು ಹಾಗೇ ಇಟ್ಟುಕೊಳ್ತೇವೆ. ಅದ್ರಲ್ಲಿ ಹಳೆ ಬಟ್ಟೆ ಕೂಡ ಒಂದು. ಹಳೆ ಟೀ ಶರ್ಟ್, ಟವಲ್ ಸೇರಿದಂತೆ ಹಳೆ ಬಟ್ಟೆಗಳನ್ನು ಮನೆ ಕ್ಲೀನ್ ಮಾಡಲು ಬಳಸ್ತೇವೆ. ಬಹುತೇಕರ ಮನೆಯಲ್ಲಿ ಹಳೆ ಬಟ್ಟೆಗಳೇ ಮನೆ ಒರೆಸುವ ಸಾಧನವಾಗಿರುತ್ವೆ. ಆದ್ರೆ ಈ ಹಳೆ ಬಟ್ಟೆ ಮರು ಬಳಕೆ ಅಭ್ಯಾಸ ವಾಸ್ತು ದೋಷಕ್ಕೆ ಕಾರಣವಾಗುತ್ವೆ.
ಹಳೆ ಬಟ್ಟೆಗಳಿಂದ ನೆಲ ಒರೆಸಬೇಡಿ
ವಾಸ್ತು ಪ್ರಕಾರ, ಪ್ರತಿದಿನ ಧರಿಸುವ ಹಳೆಯ ಬಟ್ಟೆಗಳನ್ನು ನೆಲ ಒರೆಸಲು ಬಳಸಬಾರದು. ಇಂತಹ ಬಟ್ಟೆಗಳಲ್ಲಿ ವ್ಯಕ್ತಿಯ ಹಳೆಯ ಶಕ್ತಿ ಹಾಗೂ ದಿನವಿಡೀ ಸಂಗ್ರಹವಾದ ಆಯಾಸ ಇರುತ್ತದೆ. ಇದು ಮನೆಯನ್ನು ಆವರಿಸುತ್ತೆ.
ಹರಿದ ಮತ್ತು ದುರ್ವಾಸನೆ ಬೀರುವ ಬಟ್ಟೆ ಬೇಡ
ಕೆಲವು ಮನೆಗಳಲ್ಲಿ ಹಳೆಯ ಬಟ್ಟೆಗಳನ್ನು ಬಹಳ ದಿನಗಳವರೆಗೆ ಹಾಗೆಯೇ ಇಟ್ಟುಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಹರಿದು ಹೋಗಿರುತ್ತವೆ ಅಥವಾ ದುರ್ವಾಸನೆ ಬೀರುವಷ್ಟು ಹಾಳಾಗಿರುತ್ತವೆ. ವಾಸ್ತು ನಂಬಿಕೆಗಳ ಪ್ರಕಾರ ಇಂತಹ ಬಟ್ಟೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಹೀಗಾಗಿ ಸಂಪೂರ್ಣವಾಗಿ ಹಾಳಾಗಿರುವ ಬಟ್ಟೆಗಳನ್ನು ಮನೆಯಿಂದ ಹೊರಹಾಕುವುದು ಉತ್ತಮ.
ಪ್ರತ್ಯೇಕ ಬಟ್ಟೆ ಬಳಸಿ
ಮನೆಯ ಸ್ವಚ್ಛತೆಗಾಗಿ ಪ್ರತ್ಯೇಕವಾದ ಹತ್ತಿ ಬಟ್ಟೆ ಅಥವಾ ಉತ್ತಮ ಗುಣಮಟ್ಟದ ಮಾಪ್ ಬಳಸುವುದು ಉತ್ತಮ. ಇದರಿಂದ ನೆಲವನ್ನು ಚೆನ್ನಾಗಿ ಸ್ವಚ್ಛಗೊಳಿಸಬಹುದು. ಜೊತೆಗೆ ನಾವು ಪ್ರತಿದಿನ ಧರಿಸುವ ಬಟ್ಟೆಗಳನ್ನು ನೆಲ ಒರೆಸಲು ಬಳಸುವ ಅಗತ್ಯವೂ ಇರುವುದಿಲ್ಲ. ವಾಸ್ತು ಪ್ರಕಾರ ಸ್ವಚ್ಛತೆಗೆ ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಮತ್ತು ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದು ಶುಭವೆಂದು ನಂಬಲಾಗಿದೆ.
ದಾನ ಮಾಡಿ
ಹಳೆ ಬಟ್ಟೆಗಳ ಸ್ಥಿತಿ ಉತ್ತಮವಾಗಿದ್ದರೆ ಅದನ್ನು ಕಸಕ್ಕೆ ಎಸೆಯುವ ಬದಲು ನೀವು ದಾನ ಮಾಡಬಹುದು. ಆದ್ರೆ ದಾನಕ್ಕೆ ಯೋಗ್ಯವಾದ ಬಟ್ಟೆಯನ್ನು ಮಾತ್ರ ನೀಡಬೇಕು. ದಾನ ಮಾಡುವ ಬದಲು, ಬಟ್ಟೆಯನ್ನು ಉಪ್ಪಿನಲ್ಲಿ ಚೆನ್ನಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ ನಂತ್ರ ದಾನ ಮಾಡಬೇಕು. ವಾಸ್ತು ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ದಾನ ಮಾಡುವುದು ಪುಣ್ಯದ ಕೆಲಸ.
ಒದ್ದೆ ಮಾಪ್ ಹಾಗೆಯೇ ಬಿಡಬೇಡಿ
ನೆಲ ಒರೆಸಿದ ನಂತರ ಮಾಪ್ ಅಥವಾ ಬಟ್ಟೆಯನ್ನು ಚೆನ್ನಾಗಿ ತೊಳೆದು ಒಣಗಿಸಬೇಕು. ಒದ್ದೆಯಾದ ಮತ್ತು ಕೊಳಕಾದ ಬಟ್ಟೆಯನ್ನು ಮನೆಯ ಯಾವುದೋ ಮೂಲೆಯಲ್ಲಿ ಬಹಳ ಹೊತ್ತು ಹಾಗೆಯೇ ಬಿಡಬಾರದು. ಇದರಿಂದ ದುರ್ವಾಸನೆ ಉಂಟಾಗುವುದಲ್ಲದೆ ಬ್ಯಾಕ್ಟೀರಿಯಾಗಳೂ ಬೆಳೆಯಬಹುದು. ಹೀಗಾಗಿ ಸ್ವಚ್ಛಗೊಳಿಸಿದ ನಂತರ ಒಣ ಜಾಗದಲ್ಲಿ ಇಡುವುದು ಉತ್ತಮ.
ಮೂಲೆ- ಬಾಗಿಲು ಸ್ವಚ್ಛಗೊಳಿಸಿ
ನೆಲಕ್ಕೆ ಮಾತ್ರ ಮಾಪ್ ಹಾಕಿದರೆ ಮನೆಯ ಸ್ವಚ್ಛತೆ ಪೂರ್ಣವಾಗುವುದಿಲ್ಲ. ಬಾಗಿಲಿನ ಹಿಂಭಾಗ, ಪೀಠೋಪಕರಣಗಳ ಕೆಳಭಾಗ ಮತ್ತು ಮನೆಯ ಮೂಲೆಗಳಲ್ಲೂ ಧೂಳು ಸಂಗ್ರಹವಾಗಬಹುದು. ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಭಾಗವನ್ನೂ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದಕ್ಕೆ ಮಹತ್ವ ನೀಡಲಾಗಿದೆ. ಸ್ವಚ್ಛ ಹಾಗೂ ವ್ಯವಸ್ಥಿತ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಇರುತ್ತದೆ ಎಂಬ ನಂಬಿಕೆಯಿದೆ.
















