ಮಿಥುನ ರಾಶಿಯವರಿಂದು ಉದ್ಯೋಗದಲ್ಲಿ ಪ್ರಶಂಸೆ ಗಳಿಸುತ್ತಾರೆ, ಉಳಿದವರ ರಾಶಿ ಫಲ ಹೇಗಿದೆ?

First Published 20, Jun 2018, 7:21 PM IST
Special daily horoscope on the basis of planets
Highlights

ಗ್ರಹಗಳು ನಿಂತಲ್ಲೇ ನಿಲ್ಲುವುದಿಲ್ಲ. ಒಂದು ಮನೆಯಿಂದ ಮತ್ತೊಂದು ಮನೆಗೆ ಸದಾ ಚಲಿಸುತ್ತಿರುತ್ತವೆ. ಹಾಗೆ ಚಲಿಸಿದಾಗ ಒಂದೊಂದು ರಾಶಿ ಮೇಲೆ ಒಂದೊಂದು ರೀತಿಯ ಪರಿಣಾಮಗಳಾಗುತ್ತವೆ. ಒಬ್ಬರಿಗೆ ಒಳ್ಳೆಯದಾದರೆ, ಮತ್ತೊಬ್ಬರಿಗೆ ಕೆಟುಕಾಗುವ ಸಾಧ್ಯತೆಗಳಿರುತ್ತವೆ. ಯಾವ ಗ್ರಹ, ಯಾವ ಮನೆಯಲ್ಲಿದೆ. ಯಾರಿಗೆ ಶುಭ, ಮತ್ಯಾರಿಗೆ ಅಶುಭ? ನಿಮ್ಮ ದಿನ ಭವಿಷ್ಯವನ್ನು ನೀವೇ ನೋಡಿಕೊಳ್ಳಿ.

21-06-18 - ಗುರುವಾರ

ಶ್ರೀ ವಿಲಂಬಿ ನಾಮ ಸಂವತ್ಸರ

ಉತ್ತರಾಯಣ

ಗ್ರೀಷ್ಮ ಋತು

ನಿಜ ಜ್ಯೇಷ್ಠ ಮಾಸ

ಶುಕ್ಲ ಪಕ್ಷ

ನವಮಿ ತಿಥಿ

ಹಸ್ತಾ ನಕ್ಷತ್ರ

ಮೇಷ ರಾಶಿ: ಇಂದು ನಿಮ್ಮ ರಾಶಿಯಿಂದ ಷಷ್ಟದಲ್ಲಿ ಚಂದ್ರನಿದ್ದಾನೆ. ಹಾಗಿದ್ದಾಗ ನಿಮ್ಮ ರಾಶಿಗೆ ಎಂಥ ಫಲಗಳಿರಬಹುದು ಚಿಂತಿಸೋಣ. ವಾಹನ ಸಂಚಾರ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೇದು. ನಿಮ್ಮ ಮಡದಿಯಿಂದ ಸಹಾಯವಾಗುವ ದಿನ, ಹೊಸ ಕಾರ್ಯಕ್ಕೆ ಮುನ್ನುಗ್ಗುವ ಮನೋಸ್ಥೈರ್ಯ ಬರಲಿದೆ. 
ದೋಷ ಪರಿಹಾರ - ಬೆಳಗ್ಗೆ ಎದ್ದ ಕೂಡಲೆ ಸೂರ್ಯ ನಮಸ್ಕಾರ ಮಾಡಿ, ಸ್ನಾನದ ನಂತರ ಶನೈಶ್ಚರ ದೇವಾಲಯಕ್ಕೆ ಹೋಗಿ 7 ನಮಸ್ಕಾರ ಹಾಕಿ  

ವೃಷಭ : ರಾಶಿಯ ಅಧಿಪತಿಯಾದ ಶುಕ್ರ ರಾಹುಯುಕ್ತನಾಗಿ ಕುಜನಿಂದ ನೋಡಲ್ಪಡುತ್ತಿದ್ದಾನೆ ಸ್ತ್ರೀಯರಲ್ಲಿ ಆಸಕ್ತಿ ಹೆಚ್ಚಾಗಲಿದೆ, ಸಂಯಮ ಇದ್ದರೆ ಒಳಿತು, ಜಾಗ್ರತೆಯಿಂದ ಇರಿ. ಸಹೋದರಿಯರೊಂದಿಗೆ ಹೆಚ್ಚು ವಾದ ಬೇಡ. ಸ್ತ್ರೀಯರು ಸ್ವಲ್ಪ ಹೆಚ್ಚು ಜಾಗ್ರತೆ ವಹಿಸಿ. 
ದೋಷ ಪರಿಹಾರ : ಸುಬ್ರಹ್ಮಣ್ಯ ಸ್ವಾಮಿ ಹಾಗೂ ಅನ್ನಪೂರ್ಣೇಶ್ವರಿ ದರ್ಶನ ಮಾಡಿ. 

ಮಿಥುನ: ಉದ್ಯೋಗದಲ್ಲಿ ಪ್ರಶಂಸೆ, ಮಕ್ಕಳಿಂದ ಉದ್ಯೋಗಕ್ಕೆ ಸಹಾಯ, ಓರ್ವ ಸ್ತ್ರೀಯಿಂದ ಧನಾಗಮನ, ತಾಯಿಯಿಂದ ಅನುಕೂಲವಾಗಲಿದೆ. ಜೀವನ ಸುಗಮ.
ದೋಷ ಪರಿಹಾರ : ತಾಯಿಗೆ ನಮಸ್ಕಾರ ಮಾಡಿ. ಆಶೀರ್ವಾದ ಪಡೆಯಿರಿ

ಕಟಕ : ಸಹೋದರಿಯರಿಂದ ಸ್ವಲ್ಪ ಕಿರಿಕಿರಿ, ದ್ವೇಷ ಸಾಧನೆಗೆ ಅವಕಾಶವಿಲ್ಲ, ಹೆಚ್ಚು ಚಿಂತೆ ಬೇಡ. ಮಾನಸಿಕವಾಗಿ ಸ್ವಲ್ಪ ಹತಾಶರಾಗುವ ಸಾಧ್ಯತೆ ಇದೆ, ಉದ್ಯೋಗಿಗಳಿಗೆ ಸಮಾಧಾನದ ದಿನ.
ದೋಷ ಪರಿಹಾರ : ಶಿವ ದೇವಸ್ಥಾನಕ್ಕೆ ಹೋಗಿ ಮೃತ್ಯುಂಜಯ ಮಂತ್ರ ಪಠಿಸಿ

ಸಿಂಹ: ಸ್ವಲ್ಪ ಧನ ನಷ್ಟವಾಗುವ ಸಂಭವ ಇದೆ. ಧನಾಧಿಪತಿ ಲಾಭದಲ್ಲಿದ್ದಾನೆ ಆದರೂ  ವ್ಯಯಾಧಿಪತಿ ಧನ ಸ್ಥಾನಕ್ಕೆ ಬಂದಿರುವುದರಿಂದ ಬಂದ ಹಣ ಉಳಿಯುವುದಿಲ್ಲ. ಹೀಗೆ ಬಂದು ಹಾಗೆ ಖರ್ಚಾಗಿಬಡ್ತು ಅಂತೀವಲ್ಲಾ ಹಾಗಾಗತ್ತೆ. 
ದೋಷ ಪರಿಹಾರ : ಶ್ರೀ ಸೂಕ್ತ ಪಠಿಸುತ್ತಾ ಲಕ್ಷ್ಮಿಗೆ ಹಾಲಿನ ಅಭಿಷೇಕ ಮಾಡಿದರೆ ಹಣ ನಿಲ್ಲುತ್ತದೆ.

ಕನ್ಯಾ: ಕುಟುಂಬದಲ್ಲಿ ಹಿರಿಯರಿಂದ ಸಲಹೆ. ಸಲಹೆ ಪಾಲಿಸಿದರೆ ಒಳಿತು. ಉದ್ಯೋಗದಲ್ಲಿರುವವರಿಗೆ ಉತ್ತಮ ಪ್ರಗತಿ. ಮಾತಿನಿಂದ ಕಾರ್ಯ ಸಾಧನೆ ಮಾಡುವ ದಿನ, ಮಕ್ಕಳಿಂದ ಚಿಂತೆ. 
ದೋಷ ಪರಿಹಾರ : ಮಕ್ಕಳ ಸಮಸ್ಯೆ ನಿವಾರಣೆಗೆ ನಾಗ ದೇವರಿಗೆ 5 ಪ್ರದಕ್ಷಿಣೆ ಹಾಕಿ

ತುಲಾ : ಉದ್ಯೋಗದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಸ್ವಲ್ಪ ಜಾಗರೂಕರಾಗಿರಿ. ಸಹೋದರರು ಸಹಾಯ ಮಾಡುತ್ತಾರೆ. ಧೈರ್ಯದ ಮನಸ್ಸಿರುವುದಿಲ್ಲ. 
ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ. 

ವೃಶ್ಚಿಕ: ನಿಮ್ಮಲ್ಲಿ ಅಂತ:ಶಕ್ತಿ ಪ್ರಕಟವಾಗುತ್ತದೆ, ಹೊಸ ಕಾರ್ಯಕ್ಕೆ ಮುನ್ನುಗ್ಗುತ್ತೀರಿ, ಆದರೆ ಸ್ವಲ್ಪ ಕಟು ಮಾತುಗಳನ್ನಾಡಿ ಜಗಳ ಮಾಡಿಕೊಳ್ಳುವ ಸಂದರ್ಭವೂ ಇದೆ. ಸಮಾಧಾನದಿಂದ ಕಾರ್ಯ ಸಾಧಿಸಿ. 
ದೋಷ ಪರಿಹಾರ : ಶನೈಶ್ಚರನಿಗೆ 7 ಪ್ರದಕ್ಷಿಣೆಹಾಕಿ. ಸಾಧ್ಯವಾದರೆ ಒಂದು ಕಬ್ಬಿಣದ ವಸ್ತುವನ್ನು ದಾನ ಮಾಡಿ

ಧನಸ್ಸು: ರಾಶ್ಯಾಧಿಪತಿ ಲಾಭದಲ್ಲಿದ್ದಾನೆ ವಹಿವಾಟಿನಲ್ಲಿ ಲಾಭ ಸಿಗಲಿದೆ, ಮಡದಿಯೊಂದಿಗೆ ಸಣ್ಣ  ಜಗಳ, ಮನಸ್ತಾಪ. ವ್ಯಾಪಾರದಲ್ಲಿ ಕಿರಿಕಿರಿಯಾಗಲಿದೆ, ಸ್ವಲ್ಪ ಮಟ್ಟಿಗೆ ಧನ ವ್ಯಯವೂ ಆಗಲಿದೆ.
ದೋಷ ಪರಿಹಾರ: ಹೆಚ್ಚು ಚಿಂತಿಸದೆ ನೀವು ನಂಬಿದ ದೇವರಿಗೆ ಅನನ್ಯಭಾವದಲ್ಲಿ ಮೂರು ನಮಸ್ಕಾರ ಮಾಡಿ.

ಮಕರ: ರಾಶಿಯಲ್ಲಿರುವ ಕುಜ-ಕೇತು ದೇಹದಲ್ಲಿ ವ್ರಣ(ಗಾಯ) ಉಂಟುಮಾಡಲಿದ್ದಾರೆ. ತರಕಾರಿ ಹೆಚ್ಚುವಾಗ, ವಾಹನ ಚಲಾಯಿಸುವಾಗ ಎಚ್ಚರದಿಂದಿರಿ. ಸ್ವಲ್ಪ ಅಪಾಯವಾಗುವ ಸಾಧ್ಯತೆ ಇದೆ. ಗಂಡ-ಹೆಂಡಿರಲ್ಲಿ ವೈಮನಸ್ಸಾಗುವ ಸಾಧ್ಯತೆ. ನಂಬಿಕೆ ಇರಲಿ. ವಾಗ್ವಾದಕ್ಕೆ ದಾರಿ ಮಾಡಿಕೊಡಬೇಡಿ.
ದೋಷ ಪರಿಹಾರ : ಶಿವನಿಗೆ ಹಾಲು-ಜೇನಿನ ಅಭಿಷೇಕ ಮಾಡಿಸಿ. ಪಂಚಾಮೃತ ಅಭಿಷೇಕ ಮಾಡಿಸಿದರೆ ಇನ್ನೂ ಒಳಿತು.

ಕುಂಭ: ಇಂದು ನಿಮಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗಲಿದೆ. ನಿರ್ಲಕ್ಷಿಸದೆ  ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೇದು. ಉಳಿದಂತೆ ಹೆಚ್ಚು ತೊಂದರೆ ಇಲ್ಲ. 
ದೋಷ ಪರಿಹಾರ : ಸಂಜೀವಿನಿ ಮಂತ್ರ ಪಠಿಸಿ ಅಥವಾ ಮೃತ್ಯುಂಜಯ ಮಂತ್ರ ಪಠಿಸಿದರೂ ಸಾಕು.  

ಮೀನ: ಗಂಡ-ಹೆಂಡಿರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ, ಉದ್ಯೋಗ ಸ್ಥಾನದಲ್ಲಿ ಬದಲಾವಣೆ, ವಾಹನ ಸೌಖ್ಯವಿದೆ, ನಿಮ್ಮ ಮನೆಯ ಹೆಣ್ಣುಮಕ್ಕಳಿಂದ ಸ್ವಲ್ಪ ಮಾನಸಿಕ ಬೇಸರ.
ದೋಷ ಪರಿಹಾರ : ಸುಮಂಗಲೆಯರಿಗೆ ವಸ್ತ್ರ ಉಡುಗೊರೆ ನೀಡಿ.

ಗೀತಾಸುತ.

loader