Asianet Suvarna News Asianet Suvarna News

ನವರಾತ್ರಿಯಲ್ಲಿ ಆಯುಧಪೂಜೆ ಏಕೆ ಮಾಡಬೇಕು?

ನವರಾತ್ರಿ ಹಿಂದೂಗಳು ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಅತ್ಯಂತ ಮಹತ್ವವುಳ್ಳದ್ದು. ಅದರಲ್ಲೂ ಐತಿಹ್ಯಪೂರಕವಾಗಿರುವ, ರಕ್ಷಣಾಸ್ತ್ರಗಳನ್ನು ಪೂಜಿಸುವ ಆಯುಧಪೂಜೆಗೆ ಅತ್ಯಂತ ಪ್ರಾಧನ್ಯತೆ ಇದೆ. ಈ ಬೆನ್ನಲ್ಲೇ ಆಯುಧಪೂಜೆಯ ಹಿನ್ನೆಲೆ, ಮಹತ್ವದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 

Significance  of Ayudhapuja in Navarathri
Author
Bengaluru, First Published Oct 17, 2018, 6:03 PM IST

ಬೆಂಗಳೂರು (ಅ. 17): ಆದಿಮಾನವನಿಂದ ಆಧುನಿಕ ಮಾನವನವರೆಗೆ ಆಯುಧಗಳು ಮಹತ್ವದ ಪಾತ್ರ ವಹಿಸುತ್ತಿವೆ. ಅನಾದಿ ಕಾಲದಿಂದಲೂ ಮನುಷ್ಯನು ಆಯುಧಗಳನ್ನು ತನ್ನ ಆತ್ಮ ರಕ್ಷಣೆಗೆ, ಜೊತೆಜೊತೆಗೇ ಇನ್ನೊಬ್ಬರ ಮೇಲೆ ಹತೋಟಿ ಸಾಧಿಸಲು ಉಪಯೋಗಿಸತೊಡಗಿದ.

ಬರುಬರುತ್ತಾ ಆಯುಧಗಳೇ ಮಾನವನ ಶಕ್ತಿಗಳಾದವು. ಪುರಾಣದಲ್ಲಿ ಆಯುಧಗಳದ್ದೇ ದೊಡ್ಡ ಕಾರುಬಾರು. ಪ್ರತೀ ಪುರಾಣ ಪುರಷರ ಕೈಯಲ್ಲೂ ತ್ರಿಶೂಲ, ಖಡ್ಗ, ಗದೆ, ಚಕ್ರ, ಬಿಲ್ಲು-ಬಾಣ, ಕತ್ತಿ, ಕಠಾರಿ, ಈಟಿ ಹೀಗೆ ಒಂದಿಲ್ಲೊಂದು ಆಯುಧಗಳನ್ನು ಕಾಣುತ್ತೇವೆ.

ಈ ಆಯುಧಗಳು ದುಷ್ಟರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಬಳಕೆಯಾದವು ಎಂದು ಪುರಾಣಗಳು ಹೇಳುತ್ತವೆ. ಕಾಳಿಯೆಂಬ ದೇವತೆಯ ಕೈಯಲ್ಲಿದ್ದ ಖಡ್ಗವು ದೇವಲೋಕಕ್ಕೇ ಕಂಟಕನಾದ ರಾಕ್ಷಸನ ಶಿರ ಕಡಿದು, ಇಡೀ ದೇವಲೋಕದ ಸ್ವಾಸ್ಥ್ಯ ಕಾಪಾಡಲು ಬಳಸಿದರೆ, ರಾಮನ ಕೈಯಲ್ಲಿದ್ದ ಬಿಲ್ಲು-ಬಾಣಗಳು ರಾವಣನೆಂಬ ಪರಸ್ತ್ರೀ ಮೋಹಿ ರಾಕ್ಷಸನನ್ನು ಹೊಡೆದುರುಳಿಸಲು, ಜೊತೆಗೆ ಸಾದು-ಸಜ್ಜನರಿಗೆ ಜೀವಕಂಟಕರಾಗಿದ್ದ ಅಸಂಖ್ಯ ರಾಕ್ಷಸರ ನಾಶಕ್ಕೆ ಬಳಕೆಯಾದವು.

ಭೀಮನ ಕೈಯಲ್ಲಿನ ಗದೆಯು ದುರ್ಯೋಧನನೆಂಬ ಹಠಮಾರಿ ವ್ಯಕ್ತಿಯ ವಧೆಗೆ ಉಪಯೋಗವಾಯ್ತು. ಹೀಗೆ ಪುರಾಣ ಕಾಲದಿಂದಲೂ ಮಾನವ ಜೀವನದ ಅತೀ ಮುಖ್ಯ ಅಂಗಗಳಾಗಿ ಬಂದಿರುವ ಆಯುಧಗಳು ಇಂದು ವಿವಿಧ ಆಯಾಮಗಳನ್ನು ಪಡೆದು, ಹಿಂದೆಂದಿಗಿಂತಲೂ ಹೆಚ್ಚು ವಿಸ್ತಾರವಾಗಿ ಮನುಷ್ಯನ ದೈನಂದಿನ ಚಟುವಟಿಕೆಗಳಲ್ಲಿ ಹೊಂದಿಕೊಂಡಿವೆ. ಮನೆಯಲ್ಲಿ ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು, ಇಡೀ ವಿಶ್ವವನ್ನೇ ಸೆಕೆಂಡಿನಲ್ಲಿ ಉಡಾಯಿಸಿಬಿಡುವ ಅಣುಬಾಂಬುಗಳವರೆಗೆ ಇಂದಿನ ಆಯುಧಗಳು ಹರಡಿಕೊಂಡಿವೆ.

ಆಯುಧಪೂಜೆ

ಒಟ್ಟಿನಲ್ಲಿ ಮನುಷ್ಯ ಜೀವನದಲ್ಲಿ ಹಾಸುಹೊಕ್ಕಾಗಿರುವ ಆಯುಧಗಳು ಮತ್ತು ಅವುಗಳ ಬಳಕೆಯಲ್ಲಿ ಪಕ್ಕಾಗಿರುವ, ಅವುಗಳಿಂದ ಅನೇಕ ಉಪಯೋಗಗಳನ್ನು ಹೊಂದಿರುವ, ಅನೇಕ ಯುದ್ಧಗಳನ್ನು ಗೆದ್ದಿರುವ, ಘನತೆಯನ್ನು ಹೆಚ್ಚಿಸಿಕೊಂಡಿರುವ, ಆಯುಧಗಳಿಂದಲೇ ಶತ್ರುಗಳ ಎದೆಯಲ್ಲಿ ಬೆಂಕಿಯುಂಡೆಯನ್ನಿಟ್ಟಿರುವ ಮನುಷ್ಯ ಆಯುಧಗಳಿಗೂ ದೈವೀಸ್ಥಾನ ಕೊಟ್ಟು, ಪೂಜಿಸುತ್ತಾ ಬಂದಿದ್ದಾನೆ. ನಮ್ಮ ಭಾರತೀಯ ಸಂಸ್ಕೃತಿಯನ್ನೇ ತೆಗೆದುಕೊಳ್ಳುವುದಾದರೆ ಇಲ್ಲಿ ಆಯುಧಗಳಿಗೆ ವಿಶೇಷ ಸ್ಥಾನವೇ ಇದೆ.

ಆಯುಧಗಳನ್ನು ದೈವಸ್ಥಾನದಲ್ಲಿಟ್ಟು ಪೂಜಿಸಲು ನಿಶ್ಚಿತ ದಿನವನ್ನೂ ಗೊತ್ತು ಮಾಡಿಕೊಳ್ಳಲಾಗಿದೆ. ಅದುವೆ ಆಯುಧಪೂಜೆ ಅಥವಾ ವಿಜಯ ದಶಮಿ. ಆರಂಭ-ಮಹತ್ವ ಆಯುಧ ಪೂಜೆ ಎಂಬ ವಿಶೇಷ ಹಬ್ಬ ಆಚರಣೆಗೆ ಎರಡು ಪೌರಾಣಿಕ ಕಾರಣಗಳಿವೆ.

ಮೊದಲನೆಯದ್ದು ಮತ್ತು ಅತೀ ಮುಖ್ಯವಾದದ್ದೆಂದರೆ ಮಹಾಭಾರತದಲ್ಲಿ ಕೌರವರ ಕುತಂತ್ರದಿಂದ ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸದ ಶಿಕ್ಷೆಗೆ ಗುರಿಯಾದ ಧರ್ಮಿಗಳಾದ ಪಾಂಡವರು ಹನ್ನೆರಡು ವರ್ಷಗಳ ವನವಾಸವನ್ನು ಯಶಸ್ವಿಯಾಗಿ ಮುಗಿಸಿ, ಮುಂದಿನ ಒಂದು ವರ್ಷದ ಅಜ್ಞಾತವಾಸಕ್ಕೆ ಹೊರಟಾಗ ತಮ್ಮ ಗುರುತು ಯಾರಿಗೂ ಸಿಗಬಾರದು, ಮುಖ್ಯವಾಗಿ ಕೌರವರಿಗೆ ಸಿಗಬಾರದೆಂದು ತಮ್ಮ ಬಳಿಯಿದ್ದ ಬಿಲ್ಲು-ಬಾಣ, ಗದೆಗಳನ್ನೊಳಗೊಂಡ ಎಲ್ಲಾ ಆಯುಧಗಳನ್ನು ಬನ್ನಿ ಮರದಲ್ಲಿ ಯಾರಿಗೂ ಕಾಣದಂತೆ ಅವಿತಿಟ್ಟಿರುತ್ತಾರೆ.

ಅಜ್ಞಾತವಾಸವನ್ನೂ ತೊಡಕಿಲ್ಲದೇ ಮುಗಿಸಿ ವಾಪಾಸಾಗಿ, ಆ ಸಂದರ್ಭದಲ್ಲಿ ತಮಗೆ ಆಶ್ರಯ ನೀಡಿದ ವಿರಾಟರಾಜನು ತೊಂದರೆಗೊಳಗಾದಾಗ, ಅ ಆಶ್ರಯದಾತನ ನೆರವಿಗಾಗಿ ಬಚ್ಚಿಟ್ಟಿದ್ದ ತಮ್ಮ ಆಯುಧಗಳನ್ನು ಹೊರತೆಗೆದು, ವಿರಾಟರಾಜನ ಶತ್ರುಗಳ ವಿರುದ್ಧ ಹೋರಾಡಿ ಜಯಗಳಿಸುತ್ತಾರೆ. ಆ ಗೆದ್ದ ದಿನವನ್ನು ವಿಜಯ ದಶಮಿ ಎಂದು ಕರೆಯುತ್ತಾ, ತಮ್ಮ ಗೆಲುವಿಗೆ ಕಾರಣವಾಗುವ ಆಯುಧಗಳನ್ನು ಪಾಂಡವರು ಪೂಜಿಸುತ್ತಾರೆ. ಅಂದಿನಿಂದ ಆಯುಧ ಪೂಜೆ ಪ್ರಾರಂಭವಾಯಿತು.

ಇನ್ನೊಂದು ಕಾರಣ, ಇಂದಿನ ಮೈಸೂರಿನಲ್ಲಿ ಮಹಿಷಾಸುರನೆಂಬ ಕ್ರೂರ ರಾಕ್ಷಸನ ಉಪಟಳಕ್ಕೆ ಕಡಿವಾಣ ಹಾಕಲು ಚಾಮುಂಡಿಯು ಮಹಿಷಾಸುರನೆಂಬ ದುಷ್ಟ ರಾಕ್ಷಸನನ್ನು ಕೊಂದು, ಶಿಷ್ಟರ ರಕ್ಷಣೆ ಮಾಡಿದ ವಿಜಯದ ದಿನವೆಂದು ಈ ದಿನ ಆಚರಣೆ ಮಾಡಲಾಗುತ್ತದೆ ಎಂಬುದು. ಕರ್ನಾಟಕದಲ್ಲಿ ಈ ಆಯುಧ ಪೂಜೆಯನ್ನು ತುಂಬಾ ವಿಜೃಂಭಣೆಯಿಂದ ನಡೆಸಲಾಗುತ್ತದೆ. ನಾಡ ಹಬ್ಬವೆಂದೇ ಕರೆಯುವ ’ದಸರಾ’ ಅಥವಾ ’ನವರಾತ್ರಿ’ ಹಬ್ಬದ ಒಂಬತ್ತನೇ ದಿನದಂದು ವಿಜಯದ ದಿನವನ್ನಾಗಿ ’ವಿಜಯ ದಶಮಿಯನ್ನು’ ಆಚರಿಸುತ್ತಾ, ಮನೆಯಲ್ಲಿರುವ ಪ್ರತೀ ಆಯುಧಗಳನ್ನೂ ಪೂಜಿಸಲಾಗುತ್ತದೆ.

ರೈತರ ನೇಗಿಲು, ನೊಗ, ರಂಟೆ, ಕುಂಟೆಗಳಿಂದ ಹಿಡಿದು, ಟ್ರ್ಯಾಕ್ಟರ್, ಟಿಲ್ಲರ್, ಕಾರು, ಬೈಕು, ಬಸ್ಸುಗಳಂತಹ ವಾಹನಗಳಿಂದ ಯುದ್ಧ ವಿಮಾನಗಳವರೆಗೆ, ಸೈನಿಕರ ಶಸ್ತ್ರಾಸ್ತ್ರಗಳಿಂದ ಕತ್ತಿ, ಚಾಕು, ಚೂರಿ, ಖಡ್ಗ, ಈಟಿ, ಬಿಲ್ಲು-ಬಾಣ, ಕಠಾರಿ ಹೀಗೆ ಅನೇಕ ವಸ್ತುಗಳನ್ನು ಪೂಜಿಸಿ, ನಮಿಸುವ ವಿಶೇಷ ಹಬ್ಬ, ಆಯುಧ ಪೂಜೆ. ದಸರಾ ಎಂಬುದು ಕರ್ನಾಟಕದ ಮೈಸೂರಿನಲ್ಲಿ ನಡೆಯುವ ಜಗತ್ಪ್ರಸಿದ್ಧ ಹಬ್ಬ. ಈ ಹಬ್ಬದ ಒಂಬತ್ತನೇ ದಿನ ಮೈಸೂರಿನ ಅರಸರ ಆಯುಧಗಳನ್ನು ಪಂಚಲೋಹದ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಿ, ನಂತರ ಪೂಜಿಸಲಾಗುತ್ತದೆ. ಹೀಗೆ ಆಯುಧ ಪೂಜೆ ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದ ಹೆಮ್ಮೆಯ ಹಬ್ಬ.

ಆಯುಧಗಳಿಗೇಕೆ ಪೂಜೆ?

ಜೀವವಿರದ ಆಯುಧಗಳನ್ನು ಪೂಜಿಸಿದರೆ ಅದೇನು ಲಾಭ? ಎಂದು ಕೊಂಕನ್ನಾಡುವವರೂ ಸಿಗಬಹುದು. ಆದರೆ ಒಂದು ಸತ್ಯ ಹಿಂದಿನಿಂದಲೂ ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಅನೇಕ ಹಬ್ಬಗಳು ಅವುಗಳವೇ ಆದ ಅರ್ಥಗಳನ್ನು ಹೊಂದಿರುವಂತಹವು. ಆಯುಧ ಪೂಜೆ ಕೂಡಾ ಅದಕ್ಕೆ ಹೊರತಲ್ಲ. ಮನುಷ್ಯ ಅದೆಷ್ಟೇ ಬುದ್ಧಿವಂತನಾದರೂ, ಅವನ ಬಳಿ ಇರುವ ಯಾವುದೇ ತರಹದ ಆಯುಧಗಳು ಅವನನ್ನು
ಬಲಿಷ್ಠನನ್ನಾಗಿಸುತ್ತವೆ. ನಾವು ಬೇರೆಯವರ ಮೇಲೆ ಆಕ್ರಮಣ ಮಾಡಬೇಕೆಂದೇನಿಲ್ಲ, ನಮ್ಮ ರಕ್ಷಣೆಗಾದರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಯುಧಗಳು ಉಪಯುಕ್ತವೆ.

ಹಾಗಾಗಿಯೇ ಹಿಂದೆ ಕಾಡುಪ್ರಾಣಿಗಳ ಕಾಟ ಹೆಚ್ಚಿರುವ ಊರುಗಳಲ್ಲಿ ಜನರಿಗೆ ಸರ್ಕಾರವೇ ಬಂದೂಕುಗಳನ್ನು ಹೊಂದುವ ಪರವಾನಗಿ ಕೊಡುತ್ತಿತ್ತು. ಕಾರಣ ಪ್ರಾಣಿಗಳನ್ನು ಬೇಟೆಯಾಡಲೆಂದಲ್ಲ, ಅವರ ಆತ್ಮರಕ್ಷಣೆಗೆ. ಒಂದು ದೇಶವಾಗಿ ಯಾವುದೇ ದೇಶವೂ ಇಂದು ಆಯುಧಗಳಿಲ್ಲದೆ ಉಳಿಯುವುದು ಕಷ್ಟ. ನಾವು ಯಾರ ತಂಟೆಗೂ ಹೋಗುವುದಿಲ್ಲವೆಂದರೂ, ಕಾಲು ಕೆರೆದು ಬೇರೆಯವರೇ ನಮ್ಮ ಮೇಲೆ ಆಕ್ರಮಣ ಮಾಡಬಹುದು.

ಆಗ ನಮ್ಮ ಸ್ವರಕ್ಷಣೆಗಾದರೂ ಆಯುಧಗಳು ಬೇಕು. ಆಯುಧಗಳನ್ನು ನಾವು ಬಳಸಿದರೇನೆ ನಮಗೆ ರಕ್ಷಣೆ ಎಂಬರ್ಥವಲ್ಲ. ಅವು ನಮ್ಮೊಂದಿಗಿದ್ದರೆ, ಬಳಸದೆಯೂ ರಕ್ಷಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದು ವಿಪರ್ಯಾಸ  ಘಟನೆಯಿದೆ ನೋಡಿ. 1960 ರ ಸಮಯ, ಇಡೀ ವಿಶ್ವವೇ ರಷ್ಯಾ ಮತ್ತು ಅಮೇರಿಕಾ ದೇಶಗಳ ಮಧ್ಯದ ಶೀತಲ ಸಮರದ ಕಾವಿನಲ್ಲಿ ಬೇಯುತ್ತಿತ್ತು. ಯಾವುದೇ ಸಂದರ್ಭದಲ್ಲೂ ಮೂರನೇ ಮಹಾ ಯುದ್ಧ ಪ್ರಾರಂಭವಾಗುವ ಭಯವಿತ್ತು.

ಆದರೆ ಯುದ್ಧವಾಗಲೇಯಿಲ್ಲ. ಒಂದು ದೊಡ್ಡ ಗಂಡಾಂತರ ತಪ್ಪಿಹೋಗಲು ಕಾರಣವೇನು ಗೊತ್ತೇ? ಎರಡೂ ಶತ್ರು ಬಣಗಳಲ್ಲಿದ್ದ ಹೇರಳವಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು! ಆಶ್ಚರ್ಯವಾಗಬಹುದಲ್ಲವಾ? ಹೌದು, ಒಂದು ದೇಶ ತನ್ನಲ್ಲಿರುವ ಅಣುಬಾಂಬುಗಳಿಂದ ಶತ್ರು ರಾಷ್ಟ್ರದ ಮೇಲೆ ದಾಳಿ ಮಾಡಿದರೆ, ಆ ಅಣುಬಾಂಬು ಆ ಶತ್ರು ರಾಷ್ಟ್ರಕ್ಕೆ ಮುಟ್ಟುವುದರೊಳಗೆ, ಶತ್ರು ರಾಷ್ಟ್ರವೂ ಮೊದಲು ಬಾಂಬ್ ದಾಳಿ ಮಾಡಿದ ರಾಷ್ಟ್ರದ ಮೇಲೆ ಪುನರ್‌ದಾಳಿ ಮಾಡಿ ಸರ್ವನಾಶ ಮಾಡಬಹುದಿತ್ತು.

ಅಂದರೆ ಒಂದು ದೇಶ ತನ್ನ ಆಯುಧಗಳನ್ನು ಉಪಯೋಗಿಸಿದರೆ, ಆ ದೇಶವೂ ಸರ್ವನಾಶವಾಗುತ್ತಿತ್ತು, ಶತ್ರು ರಾಷ್ಟ್ರವೂ ಸರ್ವನಾಶವಾಗುತ್ತಿತ್ತು. ಒಟ್ಟಾರೆ ಇದು ಪರಸ್ಪರ ಒಪ್ಪಿಕೊಂಡು, ಪರಸ್ಪರ ನಾಶವಾದಂತೆ. ಅಂದರೆ ಅಂದು ವಿಶ್ವವನ್ನು, ಶತ್ರು ರಾಷ್ಟ್ರಗಳನ್ನು ಕಾಪಾಡಿದ್ದು ಆ ದೇಶಗಳು ಹೊಂದಿದ್ದ ಆಯುಧಗಳು. ಹಾಗಾಗಿ ಆಯುಧಗಳು ಮನುಷ್ಯನ ಅವನತಿಯ ಜೊತೆಜೊತೆಗೇ ರಕ್ಷಣೆಗೂ ಅತ್ಯವಶ್ಯಕವಾಗಿರುವುದರಿಂದ ಇಂತಹ ರಕ್ಷಕರನ್ನು ಪೂಜಿಸಿ, ಕೃತಜ್ಞತೆಯನ್ನು ಸಲ್ಲಿಸುವ ಉದ್ದೇಶದಿಂದಲೇ ಆಯುಧ ಪೂಜೆ ಹುಟ್ಟಿಕೊಂಡಿರಬಹುದು. ಹಾಗಾಗಿ ಆಯುಧಗಳನ್ನು ಸತ್ಕಾರ್ಯಗಳಿಗೆ ಬಳಸಿ, ಅಭ್ಯುದಯಕ್ಕೆ ನಾಂದಿ ಹಾಡಿದರೆ ಹಬ್ಬದ ಉದ್ದೇಶ ಸಾರ್ಥಕ.

ದೇಶದ ರಕ್ಷಣೆಯ ಹೊಣೆ ಹೊತ್ತ ಆಯುಧಗಳು

ಭಾರತ ದೇಶವು ಎಂದಿಗೂ ಕೊಲ್ಲುವ , ಆಕ್ರಮಣ ಮಾಡುವ ಸಂಸ್ಕೃತಿಯನ್ನು ಹೊಂದಿಲ್ಲ. ಭಾರತದ ಮೇಲೆ ಅನೇಕರು ಆಕ್ರಮಣ ಮಾಡಿದ ಉದಾಹರಣೆಗಳಿವೆ. ಆದರೆ ಭಾರತ ಯಾವುದೇ ದೇಶದ ಮೇಲೆ ಯುದ್ಧ ಸಾರಿದ ಉದಾಹರಣೆಗಳಿಲ್ಲ. ಬುದ್ಧ, ಮಹಾವೀರ, ಬಸವ, ಗಾಂಧೀಜಿಯವರಂತಹ ಮಹಾನ್ ಅಹಿಂಸಾವಾದಿಗಳನ್ನು ಹೊಂದಿದ ನಮ್ಮ ದೇಶ ಜಗತ್ತಿಗೇ ಅಹಿಂಸೆಯ ಪಾಠ ಹೇಳಿಕೊಟ್ಟಿದೆ. ಆದರೆ ಬೇರೆಯವರೇ ನಮ್ಮ ಮೇಲೆ ದಂಡೆತ್ತಿ ಬಂದಾಗ ನಮ್ಮ ಉಳಿಯುವಿಕೆಯ ಪ್ರಶ್ನೆ ಎದುರಾದಾಗ ಕೈಕಟ್ಟಿ ಕೂರುವುದು ಹೇಡಿತನವಾಗುತ್ತದೆ.

ಅಂತಹ ಸಂದರ್ಭಗಳಲ್ಲಿ ಭಾರತ ಸುಮ್ಮನೆ ಕೂರದೆ ಪ್ರತಿರೋಧ ತೋರಿ, ಶತ್ರುಗಳನ್ನು ಹೆಡೆಮುರಿ ಕಟ್ಟಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರಿಂದ ಈಗಿನ ನರೇಂದ್ರ ಮೋದಿಯ ಸರ್ಜಿಕಲ್ ಸ್ಟ್ರೈಕ್ ವರೆಗಿನ ಶತೃ ರಾಷ್ಟ್ರಗಳ ಮೇಲಿನ ದಾಳಿಯವರೆಗೆ ಎಂದಿಗೂ ಭಾರತವೇ ಕಾಲ್ಕೆರೆದು ಜಗಳಕ್ಕೆ ಹೋಗಿದ್ದಿಲ್ಲ. ಅನ್ಯರಾಷ್ಟ್ರಗಳೇ ನಮ್ಮ ಮೇಲೆ ಆಕ್ರಮಣ ಮಾಡಲು ಮುಂದಾದಾಗ ನಮ್ಮ ಶಕ್ತಿ ಏನು ಎಂದು ತೋರಿಸಲು ಆಯುಧಗಳ ರುಚಿಯನ್ನು ಆ ರಾಷ್ಟ್ರಗಳಿಗೆ ತೋರಿಸಲಾಗಿದೆ.

ಇಂತಹ ಸಂದರ್ಭಕ್ಕಾದರೂ ಭಾರತದಂತಹ ದೇಶಕ್ಕೆ ಆಯುಧಗಳು ಅತ್ಯವಶ್ಯಕ. ಇಂದು ವಿಶ್ವದ ಬೇರೆ ಶಕ್ತಿಶಾಲಿ ದೇಶಗಳಿಗೆ ಸಡ್ಡು ಹೊಡೆಯುವಂತೆ ಭಾರತವೂ ಆಯುಧಗಳಲ್ಲಿ ಶಕ್ತಿಶಾಲಿಯಾಗಿದೆ. ಆಯುಧಗಳು ನಮ್ಮ ದೇಶದ ರಕ್ಷಣೆಯ ಬಹುಮುಖ್ಯ ಅಂಗಗಾಳಾಗಿವೆ. ಇಂತಹ ರಕ್ಷಣೆಯ ಹೊಣೆ ಹೊತ್ತ ಆಯುಧಗಳನ್ನು ಒಂದು ನಿಶ್ಚಿತ ದಿನ ಪೂಜಿಸಿ, ಅವುಗಳಿಗೂ ಗೌರವ ಸಮರ್ಪಿಸುವ ಸುದಿನ ಆಯುಧ ಪೂಜೆ.

- ರಾಘವೇಂದ್ರ ಹೊರಬೈಲು 

Follow Us:
Download App:
  • android
  • ios