ಸೂರ್ಯ ದೇವನ ಹುಟ್ಟು ಹಬ್ಬವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ಸೂರ್ಯ ಉತ್ತರ ದಿಕ್ಕಿಗೆ ಆರಂಭಿಸುವ ಪಯಣ (ಉತ್ತರಾಯಣ) ಹಾಗೂ ಚಳಿಗಾಲದ ಅಂತ್ಯದ ಸೂಚಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಜ್ಯೋತಿಷ್ಯದ ಪ್ರಕಾರ ರಥ ಸಪ್ತಮಿ ಹಿಂದೂಗಳಿಗೆ ಅತ್ಯಂತ ಶುಭ ದಿನ. ಸೂರ್ಯ ದೇವನ ಹಟ್ಟು ಹಬ್ಬವನ್ನು ರಥ ಸಪ್ತಮಿ ಎಂದು ಆಚರಿಸಲಾಗುತ್ತದೆ. ವಿಶಿಷ್ಟ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯದ ಮಹತ್ವದ ದಿನವಾಗಿರುವ ಜನವರಿ 25ರಂದು ಪ್ರಭಾವಿ ಸೂರ್ಯನ ಶಕ್ತಿಯನ್ನು ಕಾಣಬಹುದು. ಕಾಣುವ ದೇವನೆಂದೇ ಹೇಳುವ ಸೂರ್ಯನ ಶಕ್ತಿ, ಪ್ರಭಾವ, ಆಧ್ಯಾತ್ಮಿಕ ಜಾಗೃತಿ ಹಾಗೂ ಚೈತನ್ಯವನ್ನು ರಥ ಸಪ್ತಮಿಯಂದು ಅನುಭವಿಸಬಹುದು.

ಹಿಂದೂ ಪಂಚಾಂಗದಂತೆ ಮಾಘ ಮಾಸ, ಶುಕ್ಲ ಪಕ್ಷದ ಏಳನೇ ದಿನವಾದ ರಥ ಸಪ್ತಮಿ ಸೂರ್ಯನ ಚೈತನ್ಯ ಅಧಿಕವಾಗಿರುವ ದಿನ. ಉತ್ತರದೆಡೆಗೆ ಸೂರ್ಯ ಪಯಣ ಆರಂಭಿಸುವ ದಿನ ಅತ್ಯಂತ ಮಂಗಳವಾದದ್ದು. ಈ ದಿನ ಮಾಡುವ ಶುಭ ಕಾರ್ಯಗಳಿಗೆ ಮುಹೂರ್ತ ನೋಡುವುದೇ ಬೇಡ. ಎಂಥದ್ದೇ ಶುಭ ಕಾರ್ಯ ಆರಂಭಿಸುವುದಾದರೂ ಈ ದಿನ ಹೇಳಿ ಮಾಡಿಸಿದಂತಿದೆ. ಜೀವನದ ಹೊಸ ಹುಟ್ಟು ಇದೇ ದಿನದಿಂದ ಆರಂಭವಾಗುತ್ತೆ ಎನ್ನುವ ನಂಬಿಕೆಯೂ ಇದೆ. ವಿಶ್ವಕ್ಕೆ ಬೆಳಕು ತೋರುವ ಸೂರ್ಯನ ಹುಟ್ಟು ಹಬ್ಬವೆಂದರೆ ಎಲ್ಲರಿಗೂ ಹೊಸ ಹುಟ್ಟು ಎಂದೇ ಅರ್ಥವಲ್ಲವೇ?

2026 ಸೂರ್ಯ ವರ್ಷ

2026 ಸಂಖ್ಯಾ ಶಾಸ್ತ್ರದ ಪ್ರಕಾರ 2+0+2+6=1. ಜಾಗತಿಕ ಸಂಖ್ಯೆ 1 ಅನ್ನು ಆಳುವುದೇ ಸೂರ್ಯ. ನಾಯಕತ್ವದ ಹೊಸ ಆರಂಭ, ಅಧಿಕಾರ, ಆಡಳಿತ, ಜೀವನ ಉದ್ದೇಶ ಹಾಗೂ ಹೊಸ ಜೀವನದ ಹುಟ್ಟಿನ ಪ್ರತೀಕ. ಸೂರ್ಯನ ಶಕ್ತಿಯೇ ಅನಾವರಣಗೊಳ್ಳುವ, ಆ್ಯಕ್ಟಿವೇಟ್ ಆಗುವ ಸುದಿನ. ಸಂಖ್ಯಾ ಶಾಸ್ತ್ರದ ಪ್ರಕಾರ 1, 10, 19, 28ನೇ ತಾರಿಖಿನಂದು ಜನಿಸಿದವರನ್ನು ಸೂರ್ಯ ಗ್ರಹ ಆಳುತ್ತಾನೆ.

ಸೂರ್ಯನ ಶಕ್ತಿಯ ಪ್ರಭಾವ

ಅಡಳಿತ, ನಾಯಕತ್ವ, ಅಧಿಕಾರ, ಆರೋಗ್ಯ ಮತ್ತು ಚೈತನ್ಯವನ್ನು ಪ್ರತಿನಿಧಿಸುವ ಗ್ರಹ ಸೂರ್ಯ. ದೇಹದ ಆತ್ಮವನ್ನೇ ಸೂರ್ಯ ಗ್ರಹವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ತಂದೆಯ ಸ್ಥಾನ ಹೇಗಿರುತ್ತೋ ಹಾಗೆಯೇ ಜಗತ್ತನ್ನು ನಿರ್ವಹಿಸುವ ಸೂರ್ಯ ನಿಖರತೆಯ ಪ್ರತೀಕ. ಯಾರ ಜಾತಕದಲ್ಲಿ ಸೂರ್ಯನ ಸ್ಥಾನ ಸ್ವಲ್ಪ ದುರ್ಬಲವಾಗಿರುತ್ತೋ, ಅಂಥವರು ಈ ದಿನವನ್ನು ಬಳಸಿಕೊಂಡು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸೂರ್ಯನಿಗೆ ಸಂಬಂಧಿಸಿದ ಬೇರೆ ಬೇರೆ ಕ್ರಿಯೆಗಳು ಮೂಲಕ ತಮ್ಮ ಜಾತಕದ ಪ್ರಭಾವವನ್ನೇ ಹೆಚ್ಚಿಸಿಕೊಳ್ಳಬಹುದು.

ಅಷ್ಟಕ್ಕೂ ಈ ದಿನ ಯಾರ ಜಾತಕದಲ್ಲಿ ಸೂರ್ಯ ಗ್ರಹದ ಪ್ರಭಾವ ಕಡಿಮೆ ಇರುತ್ತೋ ಅವರು ಏನೇನು ಮಾಡಬಹುದು?

1. ಸೂರ್ಯೋದಯಕ್ಕೂ ಮುನ್ನವೇ ಎದ್ದು, ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ಬಿಡಬೇಕು. 

2. ಬೆಲ್ಲ, ಅರಿಷಿಣ, ಕೇಸರಿ ಹಾಗೂ ಕೆಂಪು ಹೂಗಳನ್ನು ಸೂರ್ಯನಿಗೆ ಸಮರ್ಪಿಸಿ. ನೀರಿಗೆ ಇವನ್ನು ಸೇರಿಸಿ, ಸೂರ್ಯನಿಗೆ ಅರ್ಘ್ಯ ಬಿಟ್ಟರೆ ಒಳ್ಳೇಯದು. 

3. ಸೂರ್ಯ ಮಂತ್ರವನ್ನು ಜಪಿಸಿ, ನಿಮ್ಮ ಜಾತಕದಲ್ಲಿ ಸೂರ್ಯ ಪ್ರಭಾವವನ್ನು ಹೆಚ್ಚಿಸಿಕೊಳ್ಳಿ. ಇದು ಮನುಷ್ಯನ ಆತ್ಮ ವಿಶ್ವಾಸ ಹೆಚ್ಚಿಸಿ, ಚೈತನ್ಯ ಪುಟಿದೇಳುವಂತೆ ಮಾಡುತ್ತದೆ. 

4. ಸೂರ್ಯನ ಕೆಳಗೆ ಕೂತು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು. 

5. ತಂದೆ ಕಾಲಿಗೆ ನಮಸ್ಕರಿಸಿ, ಆಶೀರ್ವಾರದ ಪಡೀಬೇಕು. 

6. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ, ಪವಿತ್ರ ನದಿಗಳಲ್ಲಿ ಪುಣ್ಯ ಸ್ನಾನ ಮಾಡಿ.