ಶಿವಮೊಗ್ಗ (ಡಿ. 22): ಕರ್ನಾಟಕದ ಪ್ರಸಿದ್ಧ ಪುಣ್ಯಸ್ಥಳಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ವರದಹಳ್ಳಿ ಕೂಡಾ ಒಂದು. ಪವಾಡ ಪುರುಷರಾದ ಶ್ರೀಧರ ಸ್ವಾಮಿಗಳು ನೆಲೆಸಿರುವ ಪುಣ್ಯ ಸ್ಥಳವಿದು. 

ಸ್ವಾಮಿ ಶ್ರೀಧರರು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗಲೂರು ಗ್ರಾಮದವರು. ಇವರನ್ನು ದತ್ತಾತ್ರೇಯರ ಅವತಾರವೆಂದು ಹೇಳುತ್ತಾರೆ. ತಾಯಿ ದುರ್ಗಾಂಬೆಯ ಅಣತಿಯಂತೆ ವರದಹಳ್ಳಿಗೆ ಬಂದು ನೆಲೆನಿಂತರು. ಅಲ್ಲಿನ ದುರ್ಗಾ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಅಲ್ಲಿಯೇ ನೆಲೆ ನಿಂತರು. 

ವರದಹಳ್ಳಿ ತುಂಬಾ ಪ್ರಶಾಂತವಾದ ಸ್ಥಳ. ಇಲ್ಲಿಗೆ ಹೋದರೆ ಮನಸ್ಸಿಗೆ ಹಿತ ಎನಿಸುತ್ತದೆ. ಇಲ್ಲಿ  ಇತಿಹಾಸ ಪ್ರಸಿದ್ಧ ದುರ್ಗಾಂಬಾ ದೇವಾಲಯವಿದೆ.

ಅಪಾರ ಶಕ್ತಿ ಹೊಂದಿರುವ ಶ್ರೀಧರರು ವರದಹಳ್ಳಿಯ ಗುಡ್ಡದ ಮೇಲೆ ನಿಂತು ತಮ್ಮ ತಪಶ್ಯಕ್ತಿಯಿಂದ ನೀರನ್ನು ಉದ್ಭವಿಸಿದರು. ವರದಹಳ್ಳಿ ಪ್ರವೇಶದಲ್ಲಿ ಈಗಲೂ ಗೋವಿನ ಬಾಯಿಂದ ನೀರು ಬೀಳುತ್ತದೆ. ಇದು ಅತ್ಯಂತ ಪವಿತ್ರವಾಗಿದ್ದು ಆಶ್ರಮಕ್ಕೆ ಹೋಗುವವರು ಈ ನೀರಿನಲ್ಲಿ ಸ್ನಾನ ಮಾಡಿ ಹೋಗುತ್ತಾರೆ.ಇದು ಔಷಧೀಯ ಗುಣಗಳನ್ನು ಹೊಂದಿದ್ದು ಅನೇಕ ರೋಗಗಳನ್ನು ಗುಣ ಮಾಡುತ್ತದೆ. ಇಲ್ಲಿಂದ ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಹೋದರೆ ಶ್ರೀಧರ ಆಶ್ರಮ ಸಿಗುತ್ತದೆ. ಅಲ್ಲಿ ಶ್ರೀಧರರು ಕುಳಿತು ತಪಸ್ಸು ಮಾಡಿದ್ದರು ಎಂಬ ನಂಬಿಕೆಯಿದೆ. ಪ್ರತಿದಿನ ಪೂಜೆ, ಪುನಸ್ಕಾರಗಳು ನಡೆಯುತ್ತದೆ. ಇಲ್ಲಿದೆ ಏಕಾಂತ ಗುಹೆ ಕೂಡಾ ಇದೆ. ಇಲ್ಲಿಂದ ಬೆಟ್ಟವನ್ನು ದಾಟಿ ಮೇಲೆ ಸ್ವಲ್ಪ ದೂರ ಹೋದರೆ ಅಲ್ಲಿ ಶ್ರೀಧರ ಸ್ವಾಮಿಗಳು ಐಕ್ಯರಾದ ಗುಹೆ ಇದೆ. 

ಸ್ವಾಮಿ ಶ್ರೀಧರರ ಬಗ್ಗೆ ಅಲ್ಲಿನ ಸ್ಥಳೀಯ ಭಾಗಗಳಲ್ಲಿ ಅನೇಕ ಪವಾಡ ಕಥೆಗಳು ಕೇಳಿ ಬರುತ್ತದೆ. ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ ಎನ್ನುತ್ತಾರೆ. ಶ್ರೀಧರರ ಪಾದುಕೆಗಳು ಅಲ್ಲಿದ್ದು ಪಾದಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ದಿನಕ್ಕೊಂದು ಬಾರಿಯಾದರೂ ‘ನಮಃ ಶಾಂತಾಯ, ದಿವ್ಯಾಯ ಸತ್ಯಧರ್ಮ ಸ್ವರೂಪಿಣಿ, ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ’  ಎಂಬ ಶ್ಲೋಕವನ್ನು ದಿನಕ್ಕೊಂದು ಬಾರಿಯಾದರೂ ಜಪಿಸಿದರೆ ಕಷ್ಟಗಳೆಲ್ಲಾ ಪರಿಹಾರ ಆಗುತ್ತದೆ ಎನ್ನಲಾಗುತ್ತದೆ.