ಚಂದ್ರ ಅತಿ ಮನೋಹರ ಗ್ರಹ. ಪೂರ್ಣ ಚಂದ್ರನನ್ನ ನೋಡಿದರೆ ಎಂಥವರ ಮನಸ್ಸೂ ಕೂಡ ಪ್ರಸನ್ನವಾಗತ್ತೆ. ಚಂದ್ರನ ಕಿರಣಗಳು ಮೈ ಸೋಕಿದರೆ ಮನಸ್ಸು ಹಗುರವಾಗತ್ತೆ ಅಂತಲೂ ಹೇಳ್ತಾರೆ, ಹಿಂದೆ ಹಳ್ಳಿಗಳಲ್ಲಿ ಬೆಳದಿಂಗಳ ಊಟ ಅಂತಲೇ ಏರ್ಪಡಿಸಿ ಚಂದ್ರನ ಬೆಳದಿಂಗಳ ಬೆಳಕಲ್ಲಿ ಊಟದ ಕೂಟವನ್ನ ಮಾಡ್ತಾ ಇದ್ರು. ಯಾಕೆ ಏನಿದರ ಹಿಂದಿರುವ ನಿಜವಾದ ಅರಿವು ಅಂತ ನೋಡಿದರೆ ಅದಕ್ಕುತ್ತರ ನಮ್ಮ ಜ್ಯೋತಿಷ ಶಾಸ್ತ್ರದಲ್ಲಿ ಸಿಗತ್ತೆ.

ಮನಸ್ಸು ಮರುಳಾಗಲಿಕ್ಕೆ ಚಂದ್ರನೇ ಕಾರಣ

 'ಮನೋಬುದ್ಧಿ:ಪ್ರಸಾದಂತು ಮಾತೃಚಿಂತಾಚ ಚಂದ್ರಮಾ' ಎಂಬ ವಾಕ್ಯವಿದೆ. ಇದರ ಅರ್ಥ ಮನಸ್ಸು, ಬುದ್ಧಿ, ತಾಯಿ, ಇವೆಲ್ಲವನ್ನೂ ಚಂದ್ರನಿಂದ ಚಿಂತಿಸು ಅಂತ. ವೇದದಲ್ಲಂತೂ  'ಚಂದ್ರಮಾ ಮನಸೋ ಜಾತ: ' ಮನಸ್ಸಿನ ಅಧಿಪತಿಯೇ ಚಂದ್ರ ಅಂತ ಘೋಷಿಸಿದೆ. ಹೀಗಾಗಿ ನಮ್ಮ ಮನಸ್ಸಿನ ನೆಮ್ಮದಿ ಹಾಗೂ ದುಗುಡ ಎರಡಕ್ಕೂ ಚಂದ್ರನೇ ಮುಖ್ಯ ಕಾರಣ. ಯಾರನ್ನೋ ನೋಡಿ ಮನಸ್ಸು ಅರಳ್ತಾ ಇದೆ ಅಂದ್ರೆ, ಯಾರನ್ನೋ ನೋಡಿ ನಮ್ಮ ಮನಸ್ಸು ಮರುಗ್ತಾ ಇದೆ, ಮತ್ಯಾರನ್ನೋ ನೋಡಿ ಅಸಹ್ಯ ಮಾಡ್ಕೊಳ್ತಾ ಇದೆ, ಹೀಗೆ ಮನಸ್ಸು ಏನೇನು ಮಾಡುತ್ತೆ ಅದಕ್ಕೆಲ್ಲಾ ಕಾರಣ ಬೇರೆ ಯಾರೂ ಅಲ್ಲ ಚಂದ್ರನೇ.  

ಯಾರ ಜಾತಕದಲ್ಲಿ ಚಂದ್ರ ಚನ್ನಾಗಿದ್ದಾನೋ ಆ ವಕ್ತಿ ಸದಾ ಚಿಂತಾರಹಿತನಾಗಿರ್ತಾನೆ. ಚಂದ್ರ ಚನ್ನಾಗಿದ್ರೆ ಜೀವನದಲ್ಲಿ ಯಾವುದೇ ಯಾವುದೇ ಸಮಸ್ಯೆ ಬಂದರೂ ಅತಿ ಸರಳವಾಗಿ ನಿಭಾಯಿಸಿಬಿಡ್ತಾರೆ. ಹಾಗಾಗಿಯೇ ವ್ಯಕ್ತಿಗೆ ಚಂದ್ರಬಲ ಚೆನ್ನಾಗಿರಬೇಕು. ಹಾಗಾದ್ರೆ ಚಂದ್ರಬಲ ಅಂದ್ರೆ ಏನು? 

ಚಂದ್ರಬಲ ಎಲ್ಲಿಂದ ಬರುತ್ತೆ ಗೊತ್ತಾ..? 

ಜಾತಕದಲ್ಲಿ ಚಂದ್ರ ಸೂರ್ಯನ ಸಮೀಪದಲ್ಲಿದ್ದರೆ ಅದು ಅಮಾವಾಸ್ಯೆ. ಅಮಾವಾಸ್ಯೆಯಲ್ಲಿ ಚಂದ್ರ ಬಲ ಸಂಪೂರ್ಣವಾಗಿ ಕ್ಷೀಣವಾಗಿರತ್ತೆ. ಸೂರ್ಯನಿಂದ 180 ಡಿಗ್ರಿಯಲ್ಲಿ ಚಂದ್ರನಿದ್ದಾನೆ ಅಂದ್ರೆ ಅದು ಪೌರ್ಣಮಿ. ಆಗ ಚಂದ್ರನಿಗೆ ಸಂಪೂರ್ಣ ಬಲ. 'ಪಕ್ಷೋದ್ಭವಂ ಹಿಮಕರಸ್ಯ ವಿಶೇಷಮಾಹು: ' ಎಂಬ ವಿಶೇಷ ಮಾತಿನ್ನ ಹೇಳ್ತಾರೆ ಫಲದೀಪಿಕಾ ಗ್ರಂಥದಲ್ಲಿ. ಹಾಗಂದ್ರೆ ಚಂದ್ರನಿಗೆ ಪಕ್ಷದ ಬಲವೇ ಬಲ ಅಂತ. ಹಾಗಾಗಿ ಶುಕ್ಲ ಪಕ್ಷದ ಪಂಚಮಿಯಿಂದ ಕೃಷ್ಣ ಪಕ್ಷದ ಪಂಚಮಿ ವರೆಗೆ ಚಂದ್ರನಿಗೆ ಬಲವಿರುತ್ತದೆ, ಪೌರ್ಣಮಿಯಲ್ಲಂತೂ ಇನ್ನೂ ಹೆಚ್ಚಿನ ಬಲವಿರುತ್ತದೆ. ಹೀಗೆ ಯಾರ ಜಾತಕದಲ್ಲಿ ಚಂದ್ರ ಚನ್ನಾಗಿದ್ದಾನೋ ಅವರು ಮನ:ಶಾಸ್ತ್ರಜ್ಞರಾಗುವುದರಲ್ಲಿ , ಮತ್ತೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದರಲ್ಲಿ, ಸಂಶಯವೇ ಇಲ್ಲ. 

ನಿರಾಳ ಮನಸ್ಸು:

ವೃಷಭ ರಾಶಿಯಲ್ಲಿ ಚಂದ್ರನಿದ್ದರೆ ಆ ಜಾತಕದವರು ತುಂಬಾ ನಿರಾಳ ಮನಸ್ಸಿಗರಾಗಿರ್ತಾರೆ.  ಕಾರಣ ಚಂದ್ರನಿಗೆ ವೃಷಭ ಉಚ್ಚಸ್ಥಾನ. ಅಷ್ಟೇ ಅಲ್ಲ ಕರ್ಕಟಕ ರಾಶಿಯವರೂ ಹೀಗೇ ಇರ್ತಾರೆ ಕಾರಣ ಕರ್ಕಟಕ ಚಂದ್ರನ ಸ್ವ ಕ್ಷೇತ್ರ.  ಆದರೆ ಆ ರಾಶಿಗಳಲ್ಲೇನಾದರೂ  ಸೂರ್ಯನಿದ್ದರೆ ಉಚ್ಚದಲ್ಲಿದ್ದರೂ, ಸ್ವಕ್ಷೇತ್ರದಲ್ಲಿದ್ರೂ ಚಂದ್ರ ಬಲರಹಿತನಾಗಿಬಿಡುತ್ತಾನೆ.  ಕಾರಣ ಮೇಲೆ ತಿಳಿಸಿದ ಹಾಗೆ ಚಂದ್ರನಿಗೆ ಪಕ್ಷದ ಬಲವೇ ಬಲ. ಅಂದಹಾಗೆ ಚಂದ್ರನಿಗೆ ನೀಚ ರಾಶಿ ವೃಶ್ಚಿಕ. ವೃಶ್ಚಿಕದ ಚಂದ್ರ ಮನೋವ್ಯಾಧಿ ತರುತ್ತಾರೆ, ಆ ರಾಶಿಯವರು ಸಾಮಾನ್ಯವಾಗಿ ಸಣ್ಣಪುಟ್ಟದ್ದಕ್ಕೂ ಕೊರಗುವ ಮನಸ್ಸಿನವರಾಗಿರುತ್ತಾರೆ. ಆದ್ರೆ ಪಕ್ಷದ ಬಲವಿದ್ದರೆ ಅವರೂ ಚನ್ನಾಗೇ ಇರುತ್ತಾರೆ. ಹಾಗಾಗೇ ಜಾತಕದಲ್ಲಿ ಚಂದ್ರ ಚನ್ನಾಗಿರ್ಬೇಕು ಅನ್ನೋದು. 

ಜಾತಕದಲ್ಲಿ ಚಂದ್ರ ವೀಕ್ ಆಗಿದ್ದರೆ?

ಅಕಸ್ಮಾತ್ ಜಾತಕದಲ್ಲಿ ಚಂದ್ರ ವೀಕ್ ಇದ್ದ ಅಂದ್ಕೊಳಿ ಆಗುವ ಪರಿಣಾಮಗಳೇ ಬೇರೆ. 

ಮನಸ್ಸಿನ ವಿಕಾರ 

ಜಾತಕದಲ್ಲಿ ಚಂದ್ರ ವೀಕಾಗಿದ್ರೆ ವ್ಯಕ್ತಿ ತುಂಬ ಮಂಕಾಗಿಬಿಡ್ತಾನೆ. ಬುದ್ಧಿ ವಿಕಾರವಾಗುತ್ತದೆ, ಕಫದ ಸಮಸ್ಯೆ ಉಲ್ಬಣವಾಗತ್ತೆ, ಮೂತ್ರ ರೋಗ, ರಕ್ತ ವಿಕಾರತೆ, ನಿದ್ರಾ ಹೀನತೆ ಇವೆಲ್ಲಕ್ಕೂ ಚಂದ್ರನೇ ಕಾರಣ, ಇನ್ನು ಈಗ ಎಲ್ಲರನ್ನೂ ಅತಿಯಾಗಿ ಬಾಧಿಸುತ್ತಿರುವ ಸಕ್ಕೆರೆ ಕಾಯಿಲೆಗೆ ಚಂದ್ರನೇ ಮುಖ್ಯಕಾರಣ. ಚಂದ್ರ ಪಾಪಗ್ರಹಗಳ ಜೊತೆ ಇದ್ದರೆ ಅಥವಾ ನೀಚತ್ವ, ಪಕ್ಷಬಲಹೀನತೆ ಇದ್ದರೆ ಇಂಥ ಕಾಯಿಲೆಗಳು ಖಂಡಿತಾ ಕಾಡುತ್ತವೆ. ಮನಸ್ಸು ಸ್ಥಿರವಾಗಿಲ್ಲ ಅಂದ್ರೆ ಏನುತಾನೆ ಮಾಡಲಿಕ್ಕೆ ಸಾಧ್ಯ ಹೇಳಿ..? ಇಷ್ಟೇ ಅಲ್ಲ  ಮುಖ್ಯವಾಗಿ ಚಂದ್ರ ಪ್ರಭಾವ ಬೀರುವುದು ಹೆಣ್ಣುಮಕ್ಕಳ ಮೇಲೆ. 

ಹೆಣ್ತನದ ಕಾರಕ ಚಂದ್ರ

ನಿಜ. ಮುಖ್ಯವಾಗಿ ಚಂದ್ರ ಸ್ತ್ರೀ ಗ್ರಹ. ಹೆಣ್ಣು ಮಕ್ಕಳಮೇಲೆ ಹೆಚ್ಚು ಪ್ರಭಾವ ಬೀರುವ ಗ್ರಹ. 'ಕುಜೇಂದು ಹೇತು: ಪ್ರತಿ ಮಾಸಮಾರ್ತವಂ' ಎಂಬ ವರಾಹಮಿಹಿರರ ಉಲ್ಲೇಖದಂತೆ ಹೆಣ್ಣುಮಕ್ಕಳ ತಿಂಗಳ ಋತು ಪ್ರಕ್ರಿಯಲ್ಲಿ ಕುಜ ಹಾಗೂ ಚಂದ್ರ ಇಬ್ಬರೂ ಕಾರಣಕರ್ತರಿದ್ದಾರೆ. 

ಚಂದ್ರನ ಅನುಗ್ರಹವಿದ್ದರೆ ಹೆಣ್ಣು ಹೆಣ್ಣಾಗಿರ್ತಾಳೆ. ಯಾವ ಸ್ತ್ರೀಗೆ ಚಂದ್ರನ ಅನುಗ್ರಹವಿದೆಯೋ ಆ ಸ್ತ್ರೀ ಒಳ್ಳೆ ಹೆಣ್ಣು, ಒಳ್ಳೆ ಹೆಂಡತಿ, ಒಳ್ಳೆ ತಾಯಿ, ಒಳ್ಳೆ ಗೃಹಿಣಿ ಅಂತನ್ನಿಕೊಳ್ತಾಳೆ. ಎಲ್ಲಿ ಹೆಣ್ಣು ಶಾಂತವಾಗಿರುತ್ತಾಳೋ ಆ ಗೃಹ, ಆ ಸಮಾಜ, ಆ ದೇಶ ಶಾಂತವಾಗಿರುತ್ತೆ. ಹೀಗಾಗಿ ಚಂದ್ರನ ಅನುಗ್ರಹ ನಮ್ಮ ಜೀವನಕ್ಕೆ ಅತ್ಯವಶ್ಯಕ ನಮ್ಮೆಲ್ಲರ ಬದುಕಿನ ಗುರಿ ಹಣವಲ್ಲ. ಸಮಾಧಾನ. ಆ ಸಮಾಧಾನ ಕರುಣಿಸುವ ಮಹಾನ್ ದೈವ ಚಂದ್ರ. ಯಾರಿಗೆ ಈ ಚಂದ್ರನ ಅನುಗ್ರಹ ಬೇಕೋ ಅವರು ಲಲಿತಾ ದೇವಿಯ ಉಪಾಸನೆ ಮಾಡಿ. ಶ್ರೀಚಕ್ರ ಉಪಾಸನೆ ಮಾಡಿ. ನಿಮ್ಮ ಬದುಕಲ್ಲಿ ಖಂಡಿತಾ ಶಾಂತಿ ನೆಲೆಸುತ್ತದೆ.

-ಗೀತಾಸುತ

ಸಂಪರ್ಕ ಸಂಖ್ಯೆ : 9741743565 / 9164408090