ಸೋಶಿಯಲ್ ಮೀಡಿಯಾದಲ್ಲಿ ದಂಪತಿ, ತಮ್ಮ ಫೋಟೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಮನಶಾಸ್ತ್ರಜ್ಞರ ಪ್ರಕಾರ ಇದು ಅಭದ್ರತೆಯ ಸಂಕೇತವಾಗಿದ್ದು, ಜ್ಯೋತಿಷ್ಯದ ಪ್ರಕಾರ ಇಂತಹ ಸಾರ್ವಜನಿಕ ಪ್ರದರ್ಶನವು ಶುಕ್ರನ ಶಕ್ತಿಯನ್ನು ಕುಗ್ಗಿಸಿ, ಸಂಬಂಧದಲ್ಲಿ ಬಿರುಕು ಮೂಡಿಸಬಹುದು.
ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ಬದುಕಿನ ಪ್ರತಿಯೊಂದು ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದರೇನೇ ನೆಮ್ಮದಿ ಎಂದುಕೊಂಡಿರುವ ತುಂಬಾ ಮಂದಿ ಇದ್ದಾರೆ. ಕೆಲವರು ತಮ್ಮ ಖುಷಿಯಾಗಿ, ಹಲವರು ಬೇರೆಯವರು ನೋಡಲಿ ಎಂದು... ಹೀಗೆ ಕಾರಣ ಏನೇ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುವುದು ಸರ್ವೆ ಸಾಮಾನ್ಯ. ಕೆಲವೊಮ್ಮೆ ಸ್ವಲ್ಪ ಅತಿ ಎನ್ನಿಸುವ ಹಾಗೆಯೂ ದಂಪತಿ ಫೋಟೋಗಳನ್ನು ಪದೇ ಪದೇ ಶೇರ್ ಮಾಡುವವರು ಇದ್ದಾರೆ. ಹುಟ್ಟುಹಬ್ಬವೋ, ಮದುವೆ ವಾರ್ಷಿಕೋತ್ಸವೋ ಇದ್ದಾಗ, ಪತಿಯನ್ನೋ, ಪತ್ನಿಯನ್ನೋ ಅತಿಯಾಗಿ ಹೊಗಳಿ ಫೋಟೋ ಅಪ್ಲೋಡ್ ಮಾಡುವವರು ಇದ್ದಾರೆ. ರನ್ನ, ಚಿನ್ನ, ಬಂಗಾರ ಎಂದು ಮನೆಯಲ್ಲಿ ದಂಪತಿ ನಡುವೆ ಹೇಳುವ ಶಬ್ದಗಳನ್ನು ಅಥವಾ ಇಬ್ಬರ ನಡುವೆ ನಡೆಯುವ ಸಂಭಾಷಣೆಗಳನ್ನು ಎಲ್ಲರೂ ನೋಡಲಿ ತಮ್ಮ ದಾಂಪತ್ಯ ಜೀವನ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವವರೂ ಇದ್ದಾರೆ.
ಬೇರೆಯವರಿಗಾಗಿ ಜೀವನ
ಹೀಗೆ ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂಗಾತಿಯನ್ನು ಅತಿಯಾಗಿ ಹೊಗಳಿ ಬರೆದುಕೊಳ್ಳುವ ಬಗ್ಗೆ ಇದಾಗಲೇ ಮನಶಾಸ್ತ್ರಜ್ಞರು ತಮ್ಮ ಅಭಿಪ್ರಾಯವನ್ನೂ ಹೇಳಿಕೊಂಡಿದ್ದು ಇದೆ. ಗಂಡನಿಗೋ ಅಥವಾ ಪತ್ನಿಗೋ insecurity ಕಾಡಿದಾಗ, ಹೀಗೆ ಸಾರ್ವಜನಿಕವಾಗಿ ಅತಿಯಾಗಿ ಹೊಗಳಿ ಪದೇ ಪದೇ ಸ್ಟೇಟಸ್ ಹಾಕುವುದು ಇದೆ. ಹೀಗೆ ಮೇಲಿಂದ ಮೇಲೆ ಹಾಕುವವರ ಮನೆಯಲ್ಲಿ ನಿಜವಾಗಿಯೂ ನೋಡಿದರೆ, ಅಲ್ಲಿಯ ಪರಿಸ್ಥಿತಿಯೇ ಬೇರೆಯದ್ದು ಇರುತ್ತದೆ. ಆದರೆ ತಾವು ಚೆನ್ನಾಗಿದ್ದೇವೆ ಎಂದು ಜನರು ತಿಳಿದುಕೊಳ್ಳಲಿ (ಕೆಲವು ಸಲ ಕೆಲವು ಟಾರ್ಗೆಟೆಡ್ ಜನರು ಹೊಟ್ಟೆಕಿಚ್ಚು ಪಡಲಿ) ಎಂದು ಹಾಕುತ್ತಾರೆ. ನಿಜವಾಗಿಯೂ ಪರಸ್ಪರ ಪ್ರೀತಿಯಿಂದ ಇರುವವರು, ಸಾರ್ವಜನಿಕವಾಗಿ, ನನ್ನವನು ಅಂಥವನು, ನನ್ನಾಕೆ ಇಂಥವಳು ಎಂದು ಪದೇ ಪದೇ ಜಾಲತಾಣದಲ್ಲಿ ಹಾಕುವ ಅಗತ್ಯವೇ ಬರುವುದಿಲ್ಲ ಎನ್ನುತ್ತಾರೆ.
ಯಾವುದೇ ಕಾರಣಕ್ಕೆ ಹಾಕಿರಿ...
ಯಾವುದೇ ಕಾರಣಕ್ಕೆ ಫೋಟೋ ಹಾಕಿರಲಿ. ಆ ಮಾತು ಬೇರೆ. ಆದರೆ ದಂಪತಿಯ ಫೋಟೋ ಹಾಕಿದಾಗಲೆಲ್ಲಾ ಕೆಲವೊಮ್ಮೆ ನಿಮ್ಮ ಜೀವನದಲ್ಲಿ ಏನೋ ನಕಾರಾತ್ಮಕವಾಗಿ ಆಗುತ್ತಿದೆ ಎಂದು ಎನ್ನಿಸುವುದು ಉಂಟು. ಏನೋ ಆಗಬಾರದ್ದು ಆಗುತ್ತಿದೆ ಎಂದು ಭಾಸವಾಗುತ್ತಿದ್ದರೆ, ಖಂಡಿತವಾಗಿಯೂ ಈ ಖುಷಿಯ ಫೋಟೋ ನಿಮ್ಮ ಮೇಲೆ ಎಫೆಕ್ಟ್ ಮಾಡುತ್ತಿದೆ ಎಂದು ಅರ್ಥ ಎನ್ನುತ್ತಾರೆ ಖ್ಯಾತ ಸಂಖ್ಯಾಶಾಸ್ತ್ರಜ್ಞರಾಗಿರುವ ಅರವಿಂದ ರತನ್ ಅವರು.
ನಿಮಗೂ ಹೀಗೆ ಆಗತ್ತಾ?
ಅವರು ತಮ್ಮ arvindrathannumerologist ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದಿದ್ದು, ಜ್ಯೋತಿಷ ಶಾಸ್ತ್ರ ಈ ಬಗ್ಗೆ ಏನು ಹೇಳುತ್ತದೆ ಎನ್ನುವುದನ್ನು ತಿಳಿಸಿದ್ದಾರೆ. ನೀವು ಸಿಕ್ಕಾಪಟ್ಟೆ ಬಾಂಡಿಂಗ್ ಇರುವ ಫೋಟೋಗಳನ್ನು ಅಪ್ಲೋಡ್ ಮಾಡಿದಾಗ, ಶುಕ್ರನ ಎನರ್ಜಿ ವೀಕ್ ಆಗುತ್ತಿರುತ್ತದೆ. ಶುಕ್ರ ಎಂದರೆ ಮನಸ್ಸು. ಅದು ಪ್ರೈವಸಿಗೆ ಸಂಬಂಧಪಟ್ಟ ಗ್ರಹ. ನಿಮ್ಮ ಪ್ರೀತಿ ನಿಮ್ಮ ನಡುವೆ ಇರಬೇಕು. ಅದನ್ನು ಜಗಜ್ಜಾಹಿರ ಮಾಡಲು ಹೋದಾಗ ರಾಹುವಿನ ಎಫೆಕ್ಟ್ ಆರಂಭವಾಗುತ್ತದೆ. ನಾವಿಬ್ಬರು ತುಂಬಾ ಚೆನ್ನಾಗಿದ್ದೇವೆ, ಅನ್ಯೋನ್ಯವಾಗಿದ್ದೇವೆ ಎಂದು ತೋರಿಸಲು ಬೇರೆ ಬೇರೆ ರೀತಿಯಲ್ಲಿ ಫೋಟೋ ಕ್ಲಿಕ್ ಮಾಡಿಕೊಳ್ಳಲು ಹೋದ ಸಂದರ್ಭದಲ್ಲಿ ಇಲ್ಯೂಷನರಿ ಶುರುವಾಗಿ, ರಿಲೇಷನ್ಶಿಪ್ನಲ್ಲಿ ವೀಕ್ನೆಸ್ ಬರಲು ಶುರುವಾಗುತ್ತದೆ ಎನ್ನುತ್ತಾರೆ ಅವರು. ಇದು ಎಲ್ಲರಿಗೂ ಆಗಲೇ ಬೇಕೆಂದೇನೂ ಇಲ್ಲ. ಒಂದು ವೇಳೆ ನಿಮಗೆ ಹಾಗೆ ಎನ್ನಿಸಿದರೆ, ಈ ರೀತಿ ಫೋಟೋ ಪದೇಪದೇ ಅಪ್ಲೋಡ್ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ.


