ವರ ಮಹಾಲಕ್ಷ್ಮಿ ವ್ರತದ ಆಚರಣೆ ಹೇಗೆ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Aug 2018, 11:43 AM IST
How to celebrate Varmahalakshmi festival
Highlights

ಪದ್ಮಾಸನೇ ಪದ್ಮಕರೇ ಸರ್ವಲೋಕೈಕ ಪೂಜಿತೇ|

ನಾರಾಯಣ ಪ್ರಿಯೋ ದೇವಿ ಸುಪ್ರೀತಾಭವಂ ಸರ್ವದಾ

ದೀರ್ಘಾಯುರ್ಧನ ಧಾನ್ಯಂಚ ಸೌಮಂಗಲ್ಯಂ ಸುಪುತ್ರ ತಾಂ|

ಎಂದು ಲಕ್ಷ್ಮೀದೇವಿಯನ್ನು ಪೂಜಿಸುತ್ತಾ ಮಾಡುವ ವ್ರತವೇ ವರಮಹಾಲಕ್ಷ್ಮಿವ್ರತ. ಶ್ರಾವಣ ಶುದ್ಧ ಎರಡನೆಯ ಶುಕ್ರವಾರ ಅಥವಾ ಹುಣ್ಣಿಮೆಯ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ.

ಲಕ್ಷ್ಮಿ ಸಂಪತ್ತಿನ ಅಧಿದೇವತೆ. ಅವಳ ಅನುಗ್ರಹವಾದರೆ ಮನೆಯಲ್ಲಿ ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸೌಭಾಗ್ಯ ಲಕ್ಷ್ಮಿ, ಸಂತಾನಲಕ್ಷ್ಮಿ, ವಿದ್ಯಾಲಕ್ಷ್ಮಿ, ವಿಜಯಲಕ್ಷ್ಮಿ, ಕೀರ್ತಿಲಕ್ಷ್ಮಿ, ಮೋಕ್ಷಲಕ್ಷ್ಮಿ ಎಲ್ಲರೂ ನೆಲೆನಿಂತು ಅಭಯಹಸ್ತದಿಂದ ಬೇಡಿದ ವರಗಳನ್ನು ದಯಪಾಲಿಸುತ್ತಾಳೆ. ಆದುದರಿಂದ ಧನ-ಕನಕ ಸೌಭಾಗ್ಯ ಸಂಪದಭಿವೃದ್ಧಿಗಾಗಿ ಮಹಿಳೆಯರು ಈ ವ್ರತಾಚರಣೆಯನ್ನು ಆಚರಿಸುತ್ತಾರೆ.

ಪೌರಾಣಿಕ ಹಿನ್ನಲೆ: ಹಿಂದೆ ವಿದರ್ಭ ದೇಶದಲ್ಲಿ ಕುಂಡಿನೀ ಎಂಬಲ್ಲಿ ಚಾರುಮತಿಯೆಂಬ ಸತಿ ಶಿರೋಮಣಿಯಿದ್ದಳು. ಅವರ ಮನೆಯಲ್ಲಿ ಕಡು ಬಡತನವಿತ್ತು. ನಿತ್ಯ ಏಕಾದಶಿ. ಆ ಸಾಧ್ವೀಮಣಿಗೆ ಒಂದು ರಾತ್ರಿ ಕನಸಿನಲ್ಲಿ ತಾಯಿ ವರಮಹಾಲಕ್ಷ್ಮಿಯ ದರ್ಶನವಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರ ಭಯಭಕ್ತಿಗಳಿಂದ ಲಕ್ಷ್ಮಿಪೂಜೆ ಮಾಡಿ ಇಷ್ಟಾರ್ಥ ಸಿದ್ಧಿಯನ್ನು ಪಡೆ ಎಂದು ಅಭಯವಿತ್ತಳು. ಅದರಂತೆ ಚಾರುಮತಿಯು ಶ್ರಾವಣ ಮಾಸದ ಎರಡನೇ ಶುಕ್ರವಾರ ಬಂಧು ಬಾಂಧವರೊಂದಿಗೆ ವ್ರತಾಚರಣೆಯನ್ನು ಮಾಡಿದಳು. ಪವಾಡ ಸದೃಶ್ಯವೆಂಬಂತೆ ಮನೆಯಲ್ಲಿ ಅಷ್ಟೈಶ್ವರ್ಯ ತುಂಬಿ ತುಳುಕುತ್ತದೆ. ಅಂದಿನಿಂದ ಈ ವ್ರತಕ್ಕೆ ಹೆಚ್ಚು ಪ್ರಾಶಸ್ತ್ಯ  ದೊರಕಿತು. ಚಾರುಮತಿಯಂತೆ ಉಳಿದ ಹೆಣ್ಣುಮಕ್ಕಳೂ ಶ್ರದ್ಧಾ-ಭಕ್ತಿಗಳಿಂದ ಈ ವ್ರತವನ್ನು ಆಚರಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ ಸಕಲೈಶ್ವರ್ಯವನ್ನು ಪಡೆಯುತ್ತಿದ್ದಾರೆ.

ವರಮಹಾಲಕ್ಷ್ಮಿ ವ್ರತಾಚರಣೆ: ವ್ರತಗಳ ರಾಣಿ ಎಂದೇ ಪ್ರಖ್ಯಾತವಾಗಿರುವ ಈ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುದು ಅತ್ಯಂತ ಶುಭದಾಯಕ. ಶ್ರಾವಣ ಮಾಸಕ್ಕೆ ಭವ್ಯತೆಯನ್ನು ಹೊತ್ತು ತರುವುದೇ ಈ ವ್ರತ. ಈ ಹಬ್ಬಕ್ಕಾಗಿ ಮನೆಯಲ್ಲಿನ ಹೆಂಗಳೆಯರು ಬಹಳಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಮೊದಲನೆಯ ಸಿದ್ಧತೆ ಯೆಂದರೆ ಮನೆಯನ್ನೆಲ್ಲಾ ಸಿಂಗರಿಸಿ ಒಪ್ಪ ಓರಣವಾಗಿಡುವುದು. ವ್ರತಾಚರಣೆಯನ್ನು ಮಾಡುವ ಹೆಂಗಳೆಯರು ಅಭ್ಯಂಜನ ಮಾಡಿ ಶುಚಿರ್ಭೂತರಾಗಿ ಉತ್ತಮ ವಸ್ತ್ರವನ್ನು ತೊಟ್ಟು ಮನೆಯ ಹೊಸ್ತಿಲುಗಳನ್ನು ಸಾರಿಸಿ ಬಣ್ಣ ಬಣ್ಣದ ರಂಗೋಲಿಗಳನ್ನು ಬರೆದು ಮನೆಯ ಒಂದು ಶುದ್ಧವಾದ ಸ್ಥಳದಲ್ಲಿ ಮಂಟಪವನ್ನು ಕಟ್ಟಿ, ಅದರ ನಡುವೆ ಐದು ಬಣ್ಣಗಳಿಂದ ಎಂಟು ದಳಗಳುಳ್ಳ ಪದ್ಮವನ್ನು ಬರೆದು ಕಲಶವನ್ನು ಸಿದ್ಧಗೊಳಿಸಿಕೊಳ್ಳಬೇಕು. ಕಲಶದಲ್ಲಿ ಕಂಠದವರೆಗೂ ನೀರನ್ನು ತುಂಬಿಸಿ, ಒಂದು ನಾಣ್ಯ ಹಾಗೂ ಪಂಚಾಮೃತ ಹಾಕಿ ಹೂವಿನಿಂದ ಅಲಂಕರಿಸಬೇಕು. ಇದನ್ನು ಗಂಗಾ ಕಲಶವೆಂದು ಕರೆಯುತ್ತಾರೆ. ಅನಂತರ ಕಲಶದ ಮೇಲೆ ಐದು ವೀಳ್ಯೆದೆಲೆಯೊಂದಿಗೆ ತೆಂಗಿನಕಾಯಿಯನ್ನಿಟ್ಟು ಅದಕ್ಕೆ ಅರಿಶಿನ ಕೊಂಬಿನ ಕಂಕಣ ಹಾಗೂ ಚಿನ್ನದ ಮಾಂಗಲ್ಯ ಕಟ್ಟಿ ಗೆಜ್ಜೆವಸ್ತ್ರದಿಂದ ಅಲಂಕರಿಸಿ ಕಲಶವನ್ನು ಪ್ರತಿಷ್ಠಾಪಿಸ ಬೇಕು. ಹನ್ನೆರಡು ಎಳೆಗಳ ಅರಿಶಿನ ದಾರ, ಹನ್ನೆರಡು ಎಳೆಗಳ ಗೆಜ್ಜೆವಸ್ತ್ರ ಹಾಗೂ ಬಗೆಬಗೆಯ ಹೂವು-ಪತ್ರೆ-ಅಕ್ಷತೆಗಳಿಂದ ಲಕ್ಷ್ಮಿಯನ್ನು ಪೂಜಿಸಬೇಕು. ಅಂಗಪೂಜೆ, ಗ್ರಂಥಿ ಪೂಜೆ, ಕುಸುಮ ಪೂಜೆ, ಪತ್ರ ಪೂಜೆ, ಅಷ್ಟೋತ್ತರ ಶತನಾಮ ಪೂಜೆಗಳು ಹಾಗೂ ಪಂಚಾಮೃತಭಿಷೇಕ ಮಾಡುವುದರಿಂದ ಲಕ್ಷ್ಮೀ ಸುಪ್ರೀತಳಾಗುತ್ತಾಳೆ. ಬೇಡಿದ ವರ ನೀಡುತ್ತಾಳೆ.

ಪಾಕ ವೈವಿಧ್ಯ: ವರ ಮಹಾಲಕ್ಷ್ಮಿ ಹಬ್ಬದ ದಿನದಂದು ದೇವಿಗೆ ಗೋಧಿ ಹಿಟ್ಟಿನ ಹೂರಣದ ಹೋಳಿಗೆಯನ್ನು ಸಮರ್ಪಿಸಬೇಕು. ಅಡುಗೆಯಲ್ಲಿ ಗೋಧಿ ಪಾಯಸ, ಕೋಸಂಬರಿ, ಚಿತ್ರಾನ್ನ, ಮೊಸರನ್ನ, ಮಜ್ಜಿಗೆಹುಳಿ, ಹಾಗೂ ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ನೈವೇದ್ಯ ಮಾಡಬೇಕು. ಸತ್‌ವ್ಯಕ್ತಿಗಳಿಗೆ ಹನ್ನೆರಡು ಭಕ್ಷ್ಯಗಳನ್ನು ದಕ್ಷಿಣೆ-ತಾಂಬೂಲಗಳೊಡನೆ ಬಾಗಿನವಾಗಿ ಕೊಟ್ಟು ಅವರಿಂದ ಆಶೀರ್ವಾದಗಳನ್ನು ಪಡೆಯಬೇಕು. 

ಲಕ್ಷ್ಮೀ ಪೂಜೆಯ ಅಲಂಕಾರ

ಮೊದಲು ಮೂರು ಸ್ಟೀಲ್ ಡಬ್ಬಿಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಗಮ್ ಟೇಪ್ ಸಹಾಯ ದಿಂದ ಅಂಟಿಸಿ. ಇದರ ಮೇಲೆ ಒಂದು ತಾಮ್ರದ ತಂಬಿಗೆಯನ್ನು ಜೋಡಿಸಿ ಇದರ ಅಂಚಿಗೆ ಉದ್ದವಾದ ಮರದ ಸ್ಕೇಲ್‌ನ್ನು ಕಟ್ಟಿಕೊಳ್ಳಿ. ನಂತರ ಬಾರ್ಡರ್ ಹಾಗೂ ಪಲ್ಲು ಇರುವಂತಹ ಸೀರೆಯನ್ನು ಆಯ್ಕೆ ಮಾಡಿಕೊಂಡು ಇದರ ನೆರಿಗೆಯನ್ನು ಹಿಡಿದುಕೊಳ್ಳಿ. ನೆರಿಗೆಯ ತುದಿಯ ಮೇಲ್ಭಾಗಕ್ಕೆ ದಾರದಿಂದ ಕಟ್ಟಿಕೊಳ್ಳಿ, ಸೀರೆಯ ಮಧ್ಯಭಾಗಕ್ಕೆ ಮತ್ತೊಂದು ದಾರದಿಂದ ಕಟ್ಟಬೇಕು. ನಂತರ ಸೀರೆಯ ತುದಿಯ ಭಾಗವನ್ನು ತಂಬಿಗೆಯ ಕಂಠದ ಭಾಗಕ್ಕೂ, ಮಧ್ಯ ಹಾಕಿದ ದಾರದ ಭಾಗವನ್ನು ಸೊಂಟದ ಭಾಗಕ್ಕೂ ಕಟ್ಟಬೇಕು. ನಂತರ ಪಲ್ಲು ಭಾಗವನ್ನು ತೆಗೆದುಕೊಂಡು ನೆರಿಗೆ ಹಿಡಿದು ಸ್ಕೇಲ್‌ನ ಮೇಲೆ ಬರುವಂತೆ ಹಾಕಿ, ಪಲ್ಲುವಿನ ಕುಚ್ಚು ಮುಂಭಾಗದಲ್ಲಿ ಬರುವ ರೀತಿ ಜೋಡಿಸಬೇಕು. ನಂತರ ಸೊಂಟದ ಪಟ್ಟಿಯನ್ನು ಮಧ್ಯಭಾಗದಲ್ಲಿ ಹಾಗೂ ಕಂಠದ ಭಾಗಕ್ಕೆ ಸರಗಳಿಂದ ಅಲಂಕರಿಸಿ ಲಕ್ಷ್ಮಿಯ ಮುಖವಾಡವನ್ನು ತಂಬಿಗೆಯ ಮೇಲ್ಭಾಗದಲ್ಲಿ ಸೇರಿಸಿದರೆ ಅಲಂಕೃತವಾದ ಮಹಾಲಕ್ಷ್ಮಿ ಪೂಜೆಗೆ ಸಿದ್ಧ. (ಸ್ಟೀಲ್ ಡಬ್ಬಿಗಳನ್ನು ಆಧಾರಕ್ಕಾಗಿ ಸ್ಟೂಲ್‌ನ ಮೇಲಿಟ್ಟುಕೊಳ್ಳಬಹುದು)

ಲಕ್ಷ್ಮೀ ಪೂಜೆಯ ಅಂತರಂಗ ಸಂದೇಶ

ಮಾತೃ ದೇವತಾ ಪೂಜೆ ಅತ್ಯಂತ ಪ್ರಾಚೀನವಾದುದು. ಮಾನವ ಜನಾಂಗವೆಲ್ಲವೂ ಮೊಟ್ಟಮೊದಲು ಮಾತೃದೇವತಾ ಪೂಜೆಯನ್ನೇ ಮಾಡುತ್ತಿದ್ದಿತೆಂದು ಭಾವಿಸಲು ಆಧಾರಗಳಿವೆ. ಸಂಸ್ಕೃತ ವೈದಿಕ ಸಾಹಿತ್ಯದಲ್ಲಿ ಲಕ್ಷ್ಮಿಯನ್ನು ಸೌಂದರ್ಯ, ಸಂಪತ್ತು, ವಿಜಯ, ಯಶಸ್ಸು ಮುಂತಾದ ಎಲ್ಲಾ ಸದ್ಗುಣ ಹಾಗೂ ಲೌಖಿಕ ಭಾಗ್ಯಗಳ ಅಧಿದೇವತೆಯೆಂದು ಸ್ತುತಿಸಲಾಗಿದೆ. ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಪ್ರಧಾನ ದೇವತೆಯಾಗಿ ಎಲ್ಲಾ ಆಸ್ತಿಕರ ಮನ-ಮನೆಗಳಲ್ಲಿ ನೆಲೆಸಿದ್ದಾಳೆ. ಅಂತಹ ಲಕ್ಷ್ಮಿಯನ್ನು ಆರಾಧಿಸಿ ಮನೆಯಲ್ಲಿ ಧನ-ಕನಕ ಐಶ್ವರ್ಯಾದಿಗಳು ಸದಾ ನೆಲೆಸುವಂತೆ ಬೇಡಿಕೊಳ್ಳುವುದೇ ವರಮಹಾಲಕ್ಷ್ಮಿ’ವ್ರತದ ಅಂತರಂಗವೆನ್ನ ಬಹುದು. ಇಷ್ಟಾರ್ಥಗಳ ಈಡೇರಿಕೆಗಾಗಿ ನಿಜವಾದ ಶ್ರದ್ಧೆ, ಭಕ್ತಿ ಹಾಗೂ ನಿಷ್ಠೆಯಿಂದ ದೇವಿಯ ಸೇವೆಗೈಯಬೇಕು. ಢಂಬಾಚಾರದ ಭಕ್ತಿಯಿರಬಾರದು. ಆದುದರಿಂದ ಈ ವರಮಹಾಲಕ್ಷ್ಮಿ ವ್ರತವನ್ನು ಪದ್ಧತಿಗನುಸಾರವಾಗಿ ಭಕ್ತಿ-ಶ್ರದ್ಧೆಗಳಿಂದ ಆಚರಿಸಿದರೆ ಲಕ್ಷ್ಮಿಯ ಕೃಪಾಕಟಾಕ್ಷ ದೊರಕುತ್ತದೆ ಎಂಬುದು ನಂಬಿಕೆಯಾಗಿದೆ.

 

loader