1836ರಲ್ಲಿ ಬೀದರ್ ಜಿಲ್ಲೆ ಚಳಕಾಪುರದಲ್ಲಿ ಜನಿಸಿದ ಶ್ರೀಗಳುಕಾಲವಾಗಿದ್ದು ೧೯೨೯ ರಂದುಹುಬ್ಬಳ್ಳಿಯಲ್ಲಿ. ಗಜದಂಡ ಶ್ರೀಗಳಿಂದ ಆರೂಢ ದೀಕ್ಷೆ ಪಡೆದು ಸಂಚಾರ ಮಾಡುತ್ತ ಹುಬ್ಬಳ್ಳಿಗೆ ಬಂದರು. ಆಗ ಅವರಿಗೆ ಏರು ಯೌವನ. ಈ ನೆಲವನ್ನು ತಮ್ಮ ಕರ್ಮಭೂಮಿ ಮಾಡಿಕೊಂಡು ಮೌನಾನುಷ್ಠಾನ, ಹಠಯೋಗ, ತಪಸ್ಸಿನ ಅಮೋಘ ಸಾಧನೆ ಮಾಡಿದರು. ತೂರ್ಯ, ತೀತಾವಸ್ಥೆಗಳನ್ನು ಹೊಕ್ಕು ಹೊಳೆವ ಸೂರ್ಯನಂತಾದರು.

ಎತ್ತರ ನಿಲುವಿನ, ಬಡಕಲು ದೇಹದ ಇವರು ಪುಟ್ಟದೊಂದು ಕೈಪಾ ತೊಟ್ಟು, ಕೈಯಲ್ಲಿ ಮಣ್ಣಿನ ಪಾತ್ರೆ ಹಿಡಿದು ಇಂದಿನ ಹಳೇ ಹುಬ್ಬಳ್ಳಿ ಬೀದಿಗಳಲ್ಲಿ ಸಾಗಿ ಭಿಕ್ಷೆ ಬೇಡುತ್ತಿದ್ದಾಗ ಇಲ್ಲಿನ ಯಾರೂ ಅಷ್ಟಾಗಿ ಗಮನಿಸಿರಲಿಲ್ಲ. ದಿನಕಳೆದಂತೆ ಶ್ರೀಗಳ ತಪಶಕ್ತಿ, ಉತ್ಕೃಷ್ಟ ವಾಗ್ಝರಿ, ಹೃದಯ ತಣಿಸುವ ಪ್ರವಚನ ಸುಧೆಗೆ ಆಕರ್ಷಿತರಾದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಯಿತು. ‘ಓ ಇವರು ಬಡ ಭಿಕ್ಷುಕನಲ್ಲ, ನಮ್ಮನ್ನು ಉದ್ಧರಿಸಲು ಬಂದ ಶಿವಸ್ವರೂಪಿ’ ಎಂದು ಶರಣಾದರು. ಅದರಲ್ಲೂ ಮಠ, ಮಂದಿರ, ಗುರುಗಳಿಂದ ತಿರಸ್ಕೃತ ಎನ್ನುವಂತಿದ್ದ ಸಮುದಾಯಗಳು ಇವರನ್ನೇ ಸಾಕ್ಷಾತ್ ದೇವರು ಎಂದು ಭಾವಿಸಿ ಆರಾಧಿಸಿದ್ದರಿಂದ ದೇಶದ ದಶ ದಿಕ್ಕುಗಳಿಗೂ ಸಿದ್ಧಾರೂಢರ ಕೀರ್ತಿ ಹಬ್ಬಿತು.

ಸಂಸಾರ ಸಂಕಷ್ಟದಲ್ಲಿ ಸಿಲುಕಿ ನೊಂದು-ಬೆಂದವರಿಗೆ ಸಾಂತ್ವನ ಹೇಳುವ ಆಪದ್ಭಾಂಭಂದವರಾಗಿದ್ದ ಸಿದ್ಧಾರೂಢರು, ಪಾರಮಾರ್ಥಿಕ ಚಿಂತನೆಯ ಹಾದಿಯಲ್ಲಿ ಹೊಸದೇನನ್ನೂ ಹೇಳದಿದ್ದರೂ ಸಾಧಕರಿಗೆ ಇವರಬದುಕೇ ಒಂದು ಮಹಾ ಮಾರ್ಗ ಮತ್ತು ಇವರೇ ಸಾಕ್ಷಾತ್ ಆರೂಢ ಸ್ವರೂಪ. ಇದೇ ಕಾರಣಕ್ಕೆ ಗರಗದ ಮಡಿವಾಳಪ್ಪ, ನವಲಗುಂದ ನಾಗಲಿಂಗ, ಶಿಶುನಾಳ ಶರೀಫ, ಉಣಕಲ್ಲ ಸಿದ್ದಪ್ಪಜ್ಜ ಅವರಂತ ಮಹಾಗಣವೇ ಸಿದ್ಧಾರೂಢರ ಪಾರಮಾರ್ಥಿಕನಾಯಕತ್ವವನ್ನು ಒಪ್ಪಿಕೊಂಡಿತ್ತು.