‘ಕನ್ನಡದಲ್ಲಿನ ಅತ್ಯುತ್ತಮ ಸಿನಿಮಾಗಳನ್ನು ಪ್ರೇಕ್ಷಕರ ಮುಂದಿಡಬೇಕಿದೆ. ಸಿನಿಮಾ ಮಾಡುವ ಜತೆಗೆ ಮಾರ್ಕೆಟಿಂಗ್ ಮಾಡುವತ್ತ, ಸಿನಿಮಾ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಮೂಲಸೌಲಭ್ಯ ಬೆಳೆಸುವತ್ತ ಲಕ್ಷ್ಯವಹಿಸುವುದು ಅಗತ್ಯ. ಸಿನಿಮಾ ನಿರ್ಮಾತೃಗಳು-ಪ್ರೇಕ್ಷಕರ ನಡುವಿನ ಕಂದಕ ನಿವಾರಿಸಬೇಕು.’
ಬೆಂಗಳೂರು (ಮಾ.30): ‘ಕನ್ನಡದಲ್ಲಿನ ಅತ್ಯುತ್ತಮ ಸಿನಿಮಾಗಳನ್ನು ಪ್ರೇಕ್ಷಕರ ಮುಂದಿಡಬೇಕಿದೆ. ಸಿನಿಮಾ ಮಾಡುವ ಜತೆಗೆ ಮಾರ್ಕೆಟಿಂಗ್ ಮಾಡುವತ್ತ, ಸಿನಿಮಾ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಮೂಲಸೌಲಭ್ಯ ಬೆಳೆಸುವತ್ತ ಲಕ್ಷ್ಯವಹಿಸುವುದು ಅಗತ್ಯ. ಸಿನಿಮಾ ನಿರ್ಮಾತೃಗಳು-ಪ್ರೇಕ್ಷಕರ ನಡುವಿನ ಕಂದಕ ನಿವಾರಿಸಬೇಕು.’ ಇದು ‘ಗುಬ್ಬಿಗೂಡು’ ಸಹಭಾಗಿತ್ವದಲ್ಲಿ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ‘ಯುಗಾದಿ ಸಂಭ್ರಮ’ದ ‘ಮಾತುಕತೆ; ನಾನು ನನ್ನ ಸಿನಿಮಾ’ ಸಂವಾದದ ಹೂರಣ.
ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ‘ಕನ್ನಡದಲ್ಲಿ ಒಳ್ಳೆಯ ಸಿನಿಮಾ ಆಗುತ್ತಿಲ್ಲ ಎಂಬ ವಾದವನ್ನು ಸಂಪೂರ್ಣವಾಗಿ ಒಪ್ಪಲಾಗಲ್ಲ. ಮೊದಲಿನಿಂದಲೂ ಕನ್ನಡದಲ್ಲಿ ಅತ್ಯುತ್ತಮ ಸಿನಿಮಾಗಳು ಆಗುತ್ತಿವೆ. ಜಾಗತಿಕ ಮಟ್ಟದ ಸಿನಿಮಾ ಉತ್ಸವಗಳಲ್ಲಿ ನಮ್ಮ ಸಿನಿಮಾಗಳು ಸದ್ದು ಮಾಡಿವೆ. ಆದರೆ, ಅದನ್ನು ಜನರೆದುರು ಸಮರ್ಪಕವಾಗಿ ಇಡುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು’ ಎಂದರು. ‘ಕೇರಳ ಸರ್ಕಾರ ಸಿನಿಮಾವನ್ನು ತೋರಿಸಲೇಬೇಕು ಎಂಬಂತಹ ಆದೇಶ ಹೊರಡಿಸುತ್ತೆ. ಮಿನಿ ಥಿಯೇಟರ್, ಓಟಿಟಿ ರೂಪಿಸುವಂತಹ ಕೆಲಸ ಮಾಡಿದೆ. ಸಿನಿಮಾ ಕುರಿತ ಶಿಕ್ಷಣ ಸಿಗುತ್ತದೆ.
ಜನ್ಮಜಾತ ದೇಶಭಕ್ತ, ದೇಶದ ಮೂಲ ಸಮಸ್ಯೆಗೆ ಪರಿಹಾರ ಕೊಟ್ಟ ಡಾ। ಹೆಡಗೇವಾರ್
ನಮ್ಮಲ್ಲಿ ಬೆಂಗಳೂರನ್ನು ದಾಟಿ ಸಿನಿಮಾ ಹೋಗುವುದು ಕಷ್ಟವಾಗಿದೆ. ಉತ್ತಮ ಸಿನಿಮಾಗಳನ್ನು ಜನರೆದುರು ಇಡುವ ಅವಕಾಶವನ್ನು ಸೃಷ್ಟಿಸಬೇಕು. ಇದಕ್ಕೆ ಕನ್ನಡ ಸಿನಿಮಾ ಉದ್ಯಮ, ಸರ್ಕಾರ, ಮಾಧ್ಯಮ ಒಟ್ಟಾಗಿ ಕೆಲಸ ಮಾಡಬೇಕಿದೆ’ ಎಂದರು. ‘ಇನ್ನು, ಸಿನಿಮಾ ಸಾಹಿತ್ಯವನ್ನೇ ಆಧರಿಸಬೇಕಾಗಿಲ್ಲ. ಸಿನಿಮಾ ಒಂದು ಸಂಕೀರ್ಣ ಕಲೆ. ಅದನ್ನು ಸಾಹಿತ್ಯದ ವಿಸ್ತರಿತ ಭಾಗವಾಗಿ ನೋಡುವುದು ತಪ್ಪು. ಸಿನಿಮಾ ಒಂದು ಸ್ವತಂತ್ರ ಕಲಾಭಾಷೆ. ನಾವು ಆರಿಸಿಕೊಂಡ ಕತೆ ಈಗಿನ ಆಗುಹೋಗಿಗೆ ಪ್ರತಿಕ್ರಿಯಿಸುತ್ತಿದೆ ಎಂಬುದನ್ನು ನೋಡಬೇಕು ಹಾಗೂ ಒಂದು ವ್ಯಕ್ತಿಯ ಮೂಲಕ ನಾವು ತೋರಿಸುವ ಕತೆ ಸಾರ್ವತ್ರಿಕ, ಸಾರ್ವಕಾಲಿಕ ಆಗಬೇಕು’ ಎಂದರು.
ಬಿ.ಎಸ್. ಲಿಂಗದೇವರು ಮಾತನಾಡಿ, ‘ಒಬ್ಬ ನಿರ್ದೇಶಕನಿಗೆ ಪ್ರತಿಕ್ಷಣವೂ ಕಿವಿ ಕಣ್ಣು ಎಚ್ಚರವಾಗಿರಬೇಕು. ಇವತ್ತಿನ ಸಿನಿಮಾದ ಸ್ಥಿತಿಗತಿ ನಮ್ಮನ್ನು ಅಲುಗಾಡಿಸುತ್ತಿದೆ. ಇವತ್ತು ಕೂಡ ನಾವು ಪಥೇರ್ ಪಾಂಚಾಲಿ, ಘಟಶ್ರಾದ್ಧ ಕುರಿತೇ ಮಾತನಾಡಬೇಕಿದೆ. ಪ್ರಸ್ತುತ ಮೌಢ್ಯವನ್ನು ಬಿತ್ತುವ, ಹಿಂಸೆಯನ್ನು ವೈಭವೀಕರಿಸುವ ಸಿನಿಮಾಗಳು ಹಣ ಮಾಡುತ್ತಿವೆ. ಈಗಿನ ಮೂರು ದಿನಗಳ ಸಿನಿಮಾ ಕ್ಲಾಸಿಕ್ ಸಿನಿಮಾವನ್ನು ಕೊಂದು ಹಾಕುತ್ತಿವೆ. ಸಿನಿಮಾ ಸಂಸ್ಕೃತಿ ಬೆಳೆಯಬೇಕು ಎಂದರೆ ಅದಕ್ಕೆ ತಕ್ಕ ಮಾರ್ಕೆಟಿಂಗ್ ಅನ್ನು ಕೂಡ ನಾವು ಕಟ್ಟಿಕೊಂಡು ಹೋಗಬೇಕಾಗುತ್ತದೆ’ ಎಂದು ಹೇಳಿದರು.
ಗೋಪಾಲಕೃಷ್ಣ ಪೈ. ಮಾತನಾಡಿ, ‘ಓದು ಖಂಡಿತ ಸಿನಿಮಾಕ್ಕೆ ನೆರವಾಗುತ್ತದೆ. ಏನನ್ನೂ ಓದದೆ ಕೇವಲ ಅನುಭವವನ್ನು ನೆಚ್ಚಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾ ಮಾಡುವ ಇಚ್ಛೆಯುಳ್ಳವರು ಸಿನಿಮಾಕ್ಕೆ ಸಂಬಂಧಿಸಿದ ಪುಸ್ತಕಗಳನ್ನೇ ಓದಬೇಕು. ಬೇರೆಡೆ ಹೋಲಿಸಿದಾಗ ಕನ್ನಡದಲ್ಲಿ ಸಿನಿಮಾ ಸಂಸ್ಕೃತಿ ಇನ್ನೂ ಬೆಳೆದಿಲ್ಲ. ಸಿನಿಮಾ ಕುರಿತಂತೆ ಜನರ ತಿಳಿವಳಿಕೆ ಹೆಚ್ಚಬೇಕಾಗಿದೆ. ನಾವಿನ್ನೂ 70ರ ದಶಕದ ಮಟ್ಟದಲ್ಲಿ ಕತೆಗಳನ್ನು ಈಗ ಹೇಳಿಕೊಂಡು ಹೋಗುವುದು ಸಮರ್ಪಕವೇ’ ಎಂದು ಪ್ರಶ್ನಿಸಿದರು.
ರಾಜಿಗೆ ಒಪ್ಪದೆ ಬಿಜೆಪಿಗೆ ಮಾಜಿಯಾದ ಯತ್ನಾಳ್: ತೂತು ಒಲೆ ಕೆಡಿಸಿತು, ಮಾತು ಶಾಸಕನ ರಾಜಕೀಯ ಕೆಡಿಸಿತು
ಸಂವಾದ ನಡೆಸಿಕೊಟ್ಟ ನಟಿ ರಂಜನಿ ರಾಘವನ್ ಮಾತನಾಡಿ, ‘ಕನ್ನಡ ಭಾಷೆಯ ಸಿನಿಮಾಗಳನ್ನು ನಾವು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅನ್ನಿಸುವುದು ಶೋಚನೀಯ ವಿಚಾರ. ಪ್ರೇಕ್ಷಕ ಆರ್ಥಿಕವಾಗಿ ಅನುಕೂಲಸ್ಥನಾಗುತ್ತಿದ್ದಂತೆ ಹಾಗೂ ಒಟಿಟಿಯಂತ ವೇದಿಕೆಗೆ ಬಂದಾಗ ಭಾಷಾ ಆಯ್ಕೆ ಹೆಚ್ಚಾಗಿ ಲಭ್ಯವಾಗಿ ಅವರು ಬೇರೆ ಭಾಷೆಗಳತ್ತ ಹೋಗಿದ್ದಾರೆ. ಆ ದೊಡ್ಡ ವರ್ಗದ ಪ್ರೇಕ್ಷಕರನ್ನು ಕನ್ನಡ ಸಿನಿಮಾ ಕಳೆದುಕೊಂಡಿದೆ. ಹೊಸ ಸಿನಿಮಾ ನಿರ್ಮಾತೃರಿಗೆ ಪ್ರೇಕ್ಷಕರನ್ನು ಅರ್ಥಮಾಡಿಕೊಂಡು ಮುನ್ನಡೆಯುವುದು ಸವಾಲಾಗಿದೆ’ ಎಂದರು.